ಹಾವೇರಿ
ಕ್ಷಯರೋಗ ಪತ್ತೆ ಹಚ್ಚಲು ಮನೆ ಮನೆಗೆ ಭೇಟಿ ನೀಡುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಹೇಳಿದರು.ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಸೋಮವಾರ ನಾಗೇಂದ್ರನಮಟ್ಟಿ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಜುಲೈ 15 ರಿಂದ 27ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿ ಸಂಭಾವ್ಯ ಕ್ಷಯ ಪ್ರಕರಣಗಳು ಕಂಡು ಬಂದರೆ ಪರೀಕ್ಷೆಗೆ ಒಳಪಡಿಸುವುದು, ಕ್ಷಯರೋಗವೆಂದು ದೃಡಪಟ್ಟಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಯಾವುದೇ ಹಿಂಜರಿಕೆ ಇಲ್ಲದೆ ಸಾರ್ವಜನಿಕರು ತಪಾಸಣೆಗೆ ಮುಂದಾಗುವಂತೆ ಕರೆ ನೀಡಿದರು.
ಈಗಾಗಲೇ ಕ್ಷಯರೋಗಕ್ಕೆ ಸರ್ಕಾರಿ ಅಥವಾ ಖಾಸಗಿಯಲ್ಲಿ ಚಿಕಿತ್ಸೆ ಪಡೆದವರು ಪರೀಕ್ಷೆಗೆ ಒಳಪಟ್ಟು ಕ್ಷಯ ಮರುಕಳಿಸಿದೆಯೇ ಎಂಬುದನ್ನು ಪತ್ತೆ ಮಾಡಿಸಿಕೊಳ್ಳಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಕ್ಷಯರೋಗದ ಪತ್ತೆ ಚಿಕಿತ್ಸೆ ಉಚಿತವಾಗಿದ್ದು, ಚಿಕಿತ್ಸಾ ಅವಧಿಯಲ್ಲಿ ಮಾಸಿಕ 500 ರೂಗಳ ಸಹಾಯಧನವನ್ನು ಪೌಷ್ಠಿಕ ಆಹಾರಕ್ಕಾಗಿ ನೇರವಾಗಿ ರೋಗಿಯ ಬ್ಯಾಂಕ ಖಾತೆಗೆ ಜಮಾ ಮಾಡಲಾಗುತ್ತಿದೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆರ್.ಸಿ.ಹೆಚ್. ಅಧಿಕಾರಿ ಡಾ.ಜಯಾನಂದ ಎಮ್.ಎನ್. ಅವರು ಮಾತನಾಡಿ, ಹಾವೇರಿ ಜಿಲ್ಲೆಯನ್ನು ಸಂಪೂರ್ಣವಾಗಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡು ನಿಟ್ಟಿನಲ್ಲಿ ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಆಶಾಗಳು, ಸ್ವಯಂ ಸೇವಕರು ಮತ್ತು ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.
ಜಿಲ್ಲಾಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ನೀಲೇಶ ಎಮ್.ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಸರಿಯಾದ ವೇಳೆಯಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡರೆ ಸಂಪೂರ್ಣವಾಗಿ ಕ್ಷಯರೋಗವು ಗುಣವಾಗುತ್ತದೆ. ಈ ಕಾರ್ಯಕ್ರಮವನ್ನು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 2,56,067 ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರ, ಶ್ರೀ ಶಕ್ತಿ ವೃದ್ದಾಶ್ರಮ ಅಧೀಕ್ಷಕ ಕಾಳಪ್ಪ ಛಲವಾಧಿ, ಉಮಾಪತಿ ಬಿ.ಎಸ್, ಲಿಂಗರಾಜ ಸಣ್ಣಕೂಡಲ, ವಿನಾಯಕ ಜೆ.ಪಿ, ಪಿ.ಎನ್.ಪಾಟೀಲ್, ರಾಜು ಎಸ್. ಸಬಳದ, ಚನ್ನಪ್ಪ ಲಮಾಣಿ, ಶ್ರೀಮತಿ ವಸಂತಕುಮಾರಿ, ಎಲ್.ಹೆಚ್.ವಿ. ಹಾಗೂ ನಗರ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
