ಹಾವೇರಿ
ಕ್ಷಯರೋಗವನ್ನು ಮುಂಜಾಗೃತಾ ಕ್ರಮವಾಗಿ ಪತ್ತೆಮಾಡಿ ಸೂಕ್ತ ಚಿಕಿತ್ಸೆ ನೀಡಲು ಜುಲೈ 15 ರಿಂದ 27ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಪರಿಷ್ಕೃತ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಉದ್ದೇಶಿತ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿದ ಅವರು ಸಿದ್ಧತೆಯನ್ನು ಪರಿಶೀಲಿಸಿ, ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಾಲ್ಕನೇ ಸುತ್ತಿನ ಸಕ್ರಿಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ತಪಾಸಣೆ ಮಾಡಲಿದ್ದಾರೆ. ಕ್ಷಯ ರೋಗದ ಲಕ್ಷಣಗಳು ಕಂಡುಬಂದರೆ ಪ್ರಯೋಗಾಲಯದಲ್ಲಿ ತಪಾಸಣೆ, ಅಗತ್ಯ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ. ಎಲ್ಲವೂ ಉಚಿತವಾಗಿರುತ್ತದೆ. ತಪಾಸಣೆಗಾಗಿ ಮನೆಗೆ ಬಂದಾಗ ಯಾವುದೇ ಹಿಂಜರಿಕೆ ಇಲ್ಲದೆ ಆರೋಗ್ಯ ಕಾರ್ಯಕರ್ತರೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ದುರ್ಬಲ ಗುಂಪುಗಳು ವಾಸಿಸುವ ನಗರ ಮತ್ತು ಗ್ರಾಮೀಣ ಪ್ರದೇಶದ 2,56,067 ಜನರನ್ನು ತಪಾಸಣೆಗೆ ಒಳಪಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ 656 ತಂಡಗಳನ್ನು ರಚಿಸಲಾಗಿದೆ. 1312 ಜನರು ತಪಾಸಣೆ ಕಾರ್ಯದಲ್ಲಿ ನೆರವಾಗಲಿದ್ದಾರೆ. 326 ಆರೋಗ್ಯ ಸಹಾಯಕರು, 778 ಆಶಾ ಕಾರ್ಯಕರ್ತರು, ಎಂಟು ಜನ ಮೇಲುಸ್ತುವಾರಿ ಅಧಿಕಾರಿಗಳು ಜುಲೈ 7 ರಿಂದ 13ರವರೆಗೆ ಕ್ಷಯರೋಗ ಪತ್ತೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೂಚನೆ:
ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಕಾರ್ಯಕ್ರಮಕ್ಕೆ ನಿಯೋಜಿತವಾದ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸರಿಯಾಗಿ ಮಾಹಿತಿ ನೀಡಿ ತರಬೇತಿಗೊಳಿಸಬೇಕು. ಸಾರ್ವಜನಿಕರಿಗೆ ಈಗಾಗಲೇ ಜಿಲ್ಲಾಡಳಿತದಿಂದ ತಯಾರಿಸಲಾದ ಕರಪತ್ರಗಳು, ವಿಡಿಯೋಗಳನ್ನು ಪ್ರದರ್ಶಿಸಿ ರೋಗದ ಲಕ್ಷಣಗಳು, ಸೂಕ್ತ ಚಿಕಿತ್ಸೆ ಕುರಿತಂತೆ ಅರಿವು ಮೂಡಿಸಬೇಕು. ಇದನ್ನು ಅತ್ಯಂತ ಕಾಳಜಿಯಿಂದ ಗಂಭೀರವಾಗಿ ಪರಿಗಣಿಸಿ ಪ್ರಚಾರ ಕೈಗೊಳ್ಳಬೇಕು.
ದುರ್ಬಲ ವರ್ಗದವರು ವಾಸಿಸುವ ಪ್ರದೇಶದಲ್ಲಿ ಹೆಚ್ಚಿನ ಗಮನಹರಿಸಬೇಕು. ಗ್ರಾಮೀಣ ಜನರನ್ನು ತಂಡ ತಂಡವಾಗಿ ಸೇರಿಸಿ ಅರಿವು ಕಾರ್ಯಕ್ರಮ ನಡೆಸಬೇಕು. ಉದಾಸೀನ ತೋರದೆ ಕಾಳಜಿಯಿಂದ ಕಾರ್ಯನಿರ್ವಹಿಸಿ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ನಿಯೋಜಿತ ಅಧಿಕಾರಿಗಳೊಂದಿಗೆ ಇತರ ಇಲಾಖೆ ಅಧಿಕಾರಿಗಳು ಕೈಜೋಡಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷಯರೋಗ ಕಾರ್ಯಕ್ರಮ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎಂ.ಎನ್.ನಿಲೇಶ್ ಅವರು ಮಾಹಿತಿ ನೀಡಿ ಆರೋಗ್ಯ ಇಲಾಖೆ ಜುಲೈ 15 ರಿಂದ 27ರವರೆಗೆ ಮನೆ ಮನೆಗೆ ಹೋಗಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲವನ್ನು ಹಮ್ಮಿಕೊಂಡಿದೆ. ಈಗಾಗಲೇ ಎಲ್ಲ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ.
ದುರ್ಬಲ ವರ್ಗದವರು ವಾಸಿಸುವ ಕೊಳಚೆ ಪ್ರದೇಶ, ಗಣಿ ಕೆಲಸ, ವೃದ್ಯಾಪ್ಯ ಕೇಂದ್ರಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಕಲ್ಲು ಕೊರೆ ಕೆಲಸಗಾರರು, ನಿರಾಶ್ರಿತ ಶಿಬಿರಗಳು, ರಾತ್ರಿ ಆಶ್ರಯಗಳು, ಹಸಿ ಹಾಲು, ಹಸಿ ಮಾಂಸ ಸೇವಿಸುವ ಗುಂಪುಗಳು, ಅಪೌಷ್ಠಿಕತೆ ಹೊಂದಿರುವ ಜನತೆ, ಎಚ್.ಐ.ವಿಯಿಂದ ಬಳಲುತ್ತಿರುವ ಗುಂಪು, ವಸತಿ ರಹಿತರು, ನೇಕಾರ, ಬೀದಿ ಮಕ್ಕಳು, ಅನಾಥಾಶ್ರಮ, ಹತ್ತಿ ಮಿಲ್ಲಿನಲ್ಲಿ ಕೆಲಸಮಾಡುವ ಜನರು ಸೇರಿದಂತೆ ದುರ್ಬಲ, ಬಡತನದಲ್ಲಿ ಬದುಕುತ್ತಿರುವ ಜನರಲ್ಲಿ ಹೆಚ್ಚಾಗಿ ಈ ರೋಗದ ಲಕ್ಷಣಗಳು ಕಂಡುಬರುತ್ತವೆ. ಇಂತಹ ಜನರು ವಾಸಿಸುವ ಪ್ರದೇಶಗಳಿಗೆ ಆದ್ಯತೆ ನೀಡಿ ತಪಾಸಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಷಯ ರೋಗವನ್ನು ನಿರಂತರ ಚಿಕಿತ್ಸೆಯಿಂದ ಗುಣಪಡಿಸಬಹುದು. ಎರಡುವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ಜ್ವರ, ವಿಶೇಷವಾಗಿ ರಾತ್ರಿವೇಳೆ ಜ್ವರ, ತೂಕದ ಇಳಿಕೆ, ರಾತ್ರಿವೇಳೆ ಬೆವರುವುದು, ಹಸಿವಾಗದಿರುವುದು ಈ ರೋಗದ ಲಕ್ಷಣವಾಗಿದೆ. ಶ್ವಾಸಕೋಶಗಳಿಗೆ ಅಷ್ಟೆ ಅಲ್ಲದೆ ದೇಹದ ಇನ್ನಿತರ ಭಾಗಗಳಿಗೆ ಹರುತ್ತದೆ. ಪೂರ್ಣವಾದ ಚಿಕಿತ್ಸೆ ಪಡೆದರೆ ಈ ರೋಗವನ್ನು ಗುಣಪಡಿಸಬಹುದು. ಈ ಕಾರಣಕ್ಕಾಗಿ ಕ್ಷಯರೋಗ ಪತ್ತೆ ಮತ್ತು ಸೂಕ್ತ ಚಿಕಿತ್ಸಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಕ್ಷಯರೋಗ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಮತ್ತು ನಿರ್ಮೂಲನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಭಾರತ ಸರ್ಕಾರವು 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತವನ್ನಾಗಿಸುವ ಗುರಿ ಹಾಕಿಕೊಂಡಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಪೌರಾಯುಕ್ತ ಬಸವರಾಜ ಜಿದ್ದಿ, ಆರೋಗ್ಯ ಇಲಾಖೆಯ ಡಿ.ಎಸ್.ಓ. ಡಾ.ಜಗದೀಶ ಪಾಟೀಲ, ಎಸ್.ಡ್ಲ್ಯೂ.ಒ. ಡಾ.ದೇವರಾಜ, ಡಾ.ಸುನೀಲ್ ಹರವಿ, ಡಾ.ಪ್ರಭಾಕರ ಕುಂದೂರ, ಜೆ.ಪಿ. ವಿನಾಯಕ, ಎಸ್.ಲಿಂಗರಾಜ, ಎಂ.ಗರೀಶ, ಎಲ್. ಲಕ್ಷ್ಮಣ, ಕೆ.ಬಸವರಾಜ, ಬಿ.ಎಸ್.ಉಮಾಪತಿ ಹಾಗೂ ಪ್ರಮೋದ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ