ತುಮಕೂರು
ತುಮಕೂರು ಜಿಲ್ಲೆಯಲ್ಲಿ ನೀರಿನ ಅಭಾವವಿದೆ, ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ, ಎಲ್ಲಾ ಸಮಸ್ಯೆಗಳು ನನ್ನ ಅರಿವಿಗೆ ಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಹಣ ಕ್ರೂಢೀಕರಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಮಾಜಿ ಪ್ರಧಾನಿ, ಮೈತ್ರಿ ಅಭ್ಯರ್ಥಿ ದೇವೇಗೌಡರು ಹೇಳಿದರು
ಕ್ಷೇತ್ರದ ವಿವಿಧೆಡೆ ಚುನಾವಣೆಯ ಅಂತಿಮ ಪ್ರಚಾರ ಮುಗಿಸಿ ಬಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ತಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಸಂಸತ್ತಿಗೆ ಆಯ್ಕೆ ಮಾಡುತ್ತಾರೆ, ಆದರೆ ದೇಶದ ಜನ ಆಡಳಿತ ಪಕ್ಷವಾಗಿ ಸ್ಪೀಕರ್ ಬಲಭಾಗ ಕೂರಿಸುತ್ತಾರೋ ಅಥವಾ ವಿರೋಧ ಪಕ್ಷವಾಗಿ ಎಡಭಾಗ ಕೂರಿಸುವರೋ ಎಂಬುದು ಕಾದು ನೋಡಬೇಕು ಎಂದರು.
ಮೋದಿಯ ಐದು ವರ್ಷದ ಆಡಳಿತದ ಬಗ್ಗೆ ಹೇಳುವ ಅರ್ಹತೆ ನನಗಿದೆ, ಒಂದು ತಿಂಗಳು ಕಾಯಿರಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಏಕವ್ಯಕ್ತಿ ಆಡಳಿತದ ಮೋದಿ ಜಪದ ಮಾಡುವ ಕಾಲ ಮುಗಿದುಹೋಯಿತು ಎಂದರು.ತುಮಕೂರು ಕ್ಷೇತ್ರ ಪ್ರವಾಸ ಮಾಡಿದ್ದೇನೆ, ಬಡತನ ಹೆಚ್ಚಾಗಿದೆ. ನೀರಿಲ್ಲ, ಬೆಳೆ ಇಲ್ಲ. ಜಾತಿ ಪ್ರಶ್ನೆ ಅಲ್ಲ, ಇಲ್ಲಿ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ, ಸಮಸ್ಯೆಗಳು ಜಾಸ್ತಿ ಇವೆ.
ಸಮಸ್ಯೆಗಳಿಗೆಲ್ಲಾ ಪರಿಹಾರ ಮಾಡಬೇಕಲ್ಲ, ಅದಕ್ಕೆ ಈ ದೇವೇಗೌಡ ಸಿದ್ಧ, ಯಾವ ರೀತಿಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚಿಂತನೆ ಮಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅಭಿವೃದ್ಧಿ ಕೆಲಸ ಸುಲಭ, ಆದರೇನು ಯಾವುದನ್ನೂ ನಾನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ವಂಶಾಡಳಿತದ ಪಕ್ಷ ಎಂದು ಟೀಕಿಸುವುದು ತಪ್ಪು, ನರಸಿಂಹರಾವ್, ಮನಮೋಹನ್ ಸಿಂಗ್ ಕಾಂಗ್ರೆಸ್ ಆಡಳಿತದ ಪ್ರಧಾನಿಯಾಗಿ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದರು, ಎಲ್ಲಾ ಸವಾಲು ಎದುರಿಸಿದ್ದರು. ಮೋದಿ ಐದು ವರ್ಷದಲ್ಲಿ ಒಂದು ದಿನವೂ ಪ್ರೆಸ್‍ಮೀಟ್ ಮಾಡಲಿಲ್ಲ ಯಾಕೆ ಎಂದು ಕೇಳಿದರು.
ಮೊದಲಹಂತದ ಚುನಾವಣೆ ಮುಗಿದ ಮೇಲೆ ಎರಡನೇ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರೊಟ್ಟಿಗೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಹೇಳಿದ ದೇವೇಗೌಡರು, ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವ ಏಳು ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ತುಮಕೂರು, ಮಂಡ್ಯ, ಹಾಸನದ ಗೆಲುವು ಖಚಿತ ಎಂದರು.
ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರರ ಮಾತನಾಡಿ, ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಬಗ್ಗೆ ಉತ್ತಮ ಒಲವು ವ್ಯಕ್ತವಾಗಿದೆ. ನೀರಾವರಿ ಯೋಜನೆಗಳ ಬಗ್ಗೆ ಜನ ಎಲ್ಲಾ ಕಡೆ ಹೆಚ್ಚು ಪ್ರಸ್ತಾಪ ಮಾಡುತ್ತಿದ್ದಾರೆ. ಹೇಮಾವತಿ ನಾಲೆ ಆಧುನೀಕರಣಗೊಳಿಸಿ, ಸಮಂಜಸವಾಗಿ ನೀರು ಪಡೆಯುವುದು, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನ ಹೊಳೆ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ದೇವೇಗೌಡರು ಆಯ್ಕೆಯಾದ ನಂತರ ಈ ಕೆಲಸಗಳಿಗೆ ಹೆಚ್ಚು ವೇಗ ದೊರೆಯಲಿದೆ ಎಂದು ಡಾ. ಪರಮೇಶ್ವರ್ ಹೇಳಿದರು.
ಮೋದಿ ನೇತೃತ್ವದ ಬಿಜೆಪಿಯ ಪ್ರಣಾಳಿಕೆಯಲ್ಲಿ ಸುಳ್ಳಿನ ಭರವಸೆಗಳನ್ನು ಮುಂದುವರೆಸಿದ್ದಾರೆ. ಕಳೆದಬಾರಿ ಹೇಳಿದ್ದ 10 ಕೋಟಿ ಉದ್ಯೋಗ ಸೃಷ್ಠಿಯ ಬಗ್ಗೆ ಈ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಇಲ್ಲ, ನದಿ ಜೋಡಣೆ ವಿಚಾರವೂ ಇಲ್ಲ. ಪ್ರಣಾಳಿಕೆಯಲ್ಲಿ ಕನಾಟಕದ ಬಗ್ಗೆ ಒಂದೂ ಮಾತಿಲ್ಲ, ಇಲ್ಲಿ ಕೈಗಾರಿಕೆ, ನೀರಾವರಿ ಯೋಜನೆಗಳ ಪ್ರಸ್ತಾಪ ಮಾಡಿಲ್ಲ ಎಂದರು.
ಈ ಬಾರಿ ಕೇಂದ್ರದಲ್ಲಿ ನಾವು ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ಮಾಡುತ್ತೇವೆ. ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ, ಖಾಲಿ ಇರುವ 24 ಲಕ್ಷ ಹುದ್ದೆಗಳನ್ನು ತುಂಬುತ್ತೇವೆ ಎಂದು ಹೇಳಿದರು.ಮುಖಂಡರಾದ ವೇಣುಗೋಪಾಲ್, ಷಫಿಅಹಮದ್, ಮುರಳಿಧರ ಹಾಲಪ್ಪ, ಜಿಲ್ಲಾ ಕಾಂಗ್ರ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ, ಟಿ ಎಸ್ ನಿರಂಜನ್ ಮೊದಲಾದವರು ಹಾಜರಿದ್ದರು.