ಬಳ್ಳಾರಿ
ಕ್ಷಯರೋಗ ಪತ್ತೆ ಆಂದೋಲನವು ಜಿಲ್ಲೆಯಾದ್ಯಂತ ಬರುವ ಜನವರಿ 02 ರಿಂದ 12 ರವರೆಗೆ ನಡೆಯಲಿದ್ದು, ಕ್ಷಯರೋಗಿಗಳ ಪತ್ತೆ ವಿಷಯದಲ್ಲಿ ನಿಯೋಜಿಸಲಾದ ಸಿಬ್ಬಂದಿ ಅತ್ಯಂತ ಸಮರ್ಪಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಆ ಮೂಲಕ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸುವುದಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವರಾಜ ಹೆಡೆ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕ್ಷಯರೋಗ ಪತ್ತೆ ಆಂದೋಲನ ಕುರಿತ ಜಿಲ್ಲಾ ಟಾಸ್ಕ್‍ಫೋರ್ಸ್ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ಕೆ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಒಬ್ಬ ಆರೋಗ್ಯ ಕಾರ್ಯಕರ್ತರು, ಒಬ್ಬ ಆಶಾ ಕಾರ್ಯಕರ್ತೆಯರು ಇರಲಿದ್ದು, ಮನೆ ಮನೆಗೆ ತೆರಳಿ ಮನೆಯಲ್ಲಿರುವವರಿಗೆ ಕ್ಷಯರೋಗ ಹಾಗೂ ಅದರ ಲಕ್ಷಣಗಳ ಬಗ್ಗೆ ವಿವರಿಸಲಿದ್ದಾರೆ ಎಂದು ತಿಳಿಸಿದ ಅವರು, ಪೊಲೀಯೋ ರೀತಿಯಲ್ಲಿ ಸಮೀಕ್ಷೆಯನ್ನು ಮಾಡಿ ಎಂದು ಅವರು ಹೇಳಿದರು.
ಕೇವಲ ಮನೆಗಳಿಗೆ ಮಾತ್ರ ಸೀಮಿತವಾಗದೇ ಕೈಗಾರಿಕಾ ಪ್ರದೇಶ, ಕಾರಗೃಹ, ಹೆಚ್ಚು ಸಾರ್ವಜನಿಕರು ಸೇರುವ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದ ಡಿಹೆಚ್‍ಒ ಶಿವರಾಜ್ ಹೆಡೆ ಅವರು ಶಾಲೆಗಳಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಮಕ್ಕಳಿಗೆ ಕ್ಷಯರೋಗದ ಕುರಿತು ಲಕ್ಷಣಗಳ ಕುರಿತು ಅರಿವು ಮೂಡಿಸಬೇಕು. ಗ್ರಾಮಗಳಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸುವ ಮೂಲಕ ಈ ಕ್ಷಯರೋಗ ಕುರಿತು ಅರಿವು ಮೂಡಿಸಬೇಕು ಮತ್ತು ಡಂಗೂರು ಮೂಲಕ ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಕ್ಷಯರೋಗದ ಲಕ್ಷಣಗಳುಳ್ಳ ವ್ಯಕ್ತಿಗೆ ಕಫ ಪರೀಕ್ಷೆ, ಎಕ್ಸರೇ ಪರೀಕ್ಷೆಗಳಿಗೆ ಪ್ರೋತ್ಸಾಹಿಸಿ; ಇದು ಸಹ ಉಚಿತವಾಗಿ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ತಿಳಿಸಿದ ಅವರು, ಕ್ಷಯರೋಗ ಎಂದು ದೃಢಪಟ್ಟಿದ್ದಲ್ಲಿ ಸಂಬಂಧಿಸಿದ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಪ್ರಾರಂಭ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷಯರೋಗದ ಕುರಿತು ವಿವಿಧ ಕರಪತ್ರ, ಬ್ಯಾನರ್‍ಗಳನ್ನು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗೇಶ್ ಬಿಲ್ವ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್, ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್ ಅಧಿಕಾರಿ ಸುಜಿತ್, ವಿಮ್ಸ್ ನೋಡಲ್ ಅಧಿಕಾರಿ ಡಾ.ಸುರೇಶ್, ಪಾಲಿಕೆಯ ಆರೋಗ್ಯಾಧಿಕಾರಿ ಹನುಮಂತಪ್ಪ, ಡಿಟಿಸಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಸಣ್ಣ ಕೇಶವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







