ಹೈವೆ ಗುತ್ತಿಗೆದಾರರ ಬೆವರಿಳಿಸಿದ ಮಾಜಿ ಶಾಸಕ ಕೆ.ಎಸ್.ಕೆ

ಹುಳಿಯಾರು:

    ಹುಳಿಯಾರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಅವೈಜ್ಞಾನಿಕವಾಗಿದೆಯಲ್ಲದೆ ರಸ್ತೆಗೆ ಚರಂಡಿಯ ಕೊಳಚೆ ನೀರು ಬಿಡಲಾಗುತ್ತದೆ ಹಾಗೂ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ಮಾಡಲಾಯಿತು.

   ಇಲ್ಲಿನ ರಾಮಗೋಪಾಲ್ ಸರ್ಕಲ್ ಬಳಿ ತಮ್ಮ ಬೆಂಬಲಿಗರು ಹಾಗೂ ಸಾರ್ವಜನಿಕರೊಂದಿಗೆ ಪ್ರತಿಭಟನೆ ಆರಂಭಿಸಿದ ಮಾಜಿ ಶಾಸಕರು 12 ಗಂಟೆಯವರೆವಿಗೂ ಬಿಸಿಲ ಝಳವನ್ನೂ ಲೆಕ್ಕಿಸದೆ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಮಧ್ಯಾಹ್ನ 12 ಗಂಟೆಯಾದರೂ ಕೂಡ ಯಾರೊಬ್ಬರೂ ಬಾರದಿದ್ದರಿಂದ ಹೆದ್ದಾರಿ ಬಂದ್ ಮಾಡಲು ಮುಂದಾದರು. ಪೊಲಿಸರು ರಸ್ತೆ ತಡೆ ಮಾಡದಂತೆ ಮನವಿ ಮಾಡಿದರೂ ಸಹ ಪಟ್ಟು ಸಡಿಲಿಸದೆ ರಸ್ತೆ ತಡೆಗೆ ಇಳಿದರು.

   ಕ್ಷಣಾರ್ಧದಲ್ಲಿ ಕೆ.ಎಸ್.ಆರ್.ಟಿ ಬಸ್‍ಗಳು, ಲಾರಿ, ಕಾರುಗಳು ಎರಡೂ ದಿಕ್ಕಿನಲ್ಲೂ ಮೈಲುಗಟ್ಟಲೆ ಉದ್ದ ನಿಂತವು. ಒಂದರ್ಥದಲ್ಲಿ ರಸ್ತೆ ಸಾರಿಗೆ ವ್ಯವಸ್ಥೆ ಅಸ್ಥವ್ಯಸ್ಥವಾಯಿತು. ಅಲ್ಲದೆ ಪ್ರತಿಭಟನೆ ಬೆಂಬಲಿಸಿ ಪಕ್ಷಾತೀತವಾಗಿ ಜನ ಹರಿದುಬರಲಾರಂಭಿಸಿದರು. ಹೀಗೆ ಪ್ರತಿಭಟನೆ ತೀರ್ವ ಸ್ವರೂಪ ಪಡೆದುಕೊಳ್ಳುತ್ತಿದ್ದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಹೈವೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ಬಂದು ಸಮಸ್ಯೆ ಪರಿಹರಿಸುವಂತೆ ಒತ್ತಡ ಹಾಕಿದರು.

    ಪರಿಣಾಮ ಸ್ಥಳಕ್ಕೆ ದೌಡಾಯಿಸಿ ಬಂದಿ ಹೈವೆ ಎಂಜಿನಿಯರ್ ಸುಧಾಕರ್ ಅವರನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. 2 ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆವಿಗೂ ಎಷ್ಟು ಬಾರಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದೀರಿ. ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದರೂ ಏಕೆ ಕಣ್ಮುಚ್ಚಿ ಕುಳಿತಿದ್ದೀರಿ, 2 ವರ್ಷವಾದರೂ ಕಾಮಗಾರಿ ಪೂರ್ಣವಾಗದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಏಕೆ ಮೌನವಾಗಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

   ಇದಕ್ಕೆ ಪ್ರತಿಯಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಕಾಮಗಾರಿಗೆ ತೊಡಕಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳಿದರು. ಇದರಿಂದ ಮತ್ತೂ ಕೆಂಡಮಂಡಲರಾದ ಮಾಜಿ ಶಾಸಕರು ನಾನೂ ಲಾಯರ್ ಕಂಡ್ರಿ, ನನ್ನ ಕಿವಿಗೆ ಹೂ ಮುಡಿಸುತ್ತಿದ್ದಿರಲ್ಲ, ಕೊಡ್ರಿ ತಡೆಯಾಜ್ಞೆ ಪ್ರತಿ ಎಂದು ಜೋರು ಮಾಡಿದರು. ಅಷ್ಟರಲ್ಲಿ ಗುತ್ತಿಗೆದಾರ ರೆಡ್ಡಿ ಸಹ ಆಗಮಿಸಿದರು.

    ಅವರಿಗೂ ಎಸ್ಟಿಮೆಂಟ್, ರಸ್ತೆ ಪ್ಲಾನ್, ಅಗ್ರಿಮೆಂಟ್ ಪ್ರತಿ ಕೊಡ್ರಿ. ಒಂದು ಭಾಗದಲ್ಲಿ ರಸ್ತೆ ಮಾಡುವಾಗ ಇನ್ರ್ನೆಂದು ಭಾಗದಲ್ಲಿ ರೋಡ್ ಕ್ಲಿಯರೆನ್ಸ್ ಇರಬೇಕು, ಧೂಳು ಏಳದಂತೆ ನಿತ್ಯ ಮೂರ್ನಲ್ಕು ಬಾರಿ ನೀರಾಕಬೇಕು, ಚರಂಡಿ ಕಾಮಗಾರಿ ಪೂರ್ಣ ಮಾಡಿ ರಸ್ತೆ ಕಾಮಗಾರಿ ಮಾಡಬೇಕು. ನೀವೇಂದ್ರಿ ಮಾಡಿದ್ದೀರಿ ನಿಯಮ ಗಾಳಿಗೆ ತೂರಿ ಕೆಲಸ ಮಾಡ್ತಿತ್ತಿರಲ್ಲಿ. ಇಷ್ಟೆ ಸಾಕು ನಿಮ್ಮ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಗೊತ್ತೇನ್ರಿ ಎಂದು ಬೆವರಿಳಿಸಿದರು.

  ಅಂತಿಮವಾಗಿ 5 ದಿನಗಳ ಕಾಲಾವಕಾಶ ಕೊಡಿ ಚರಂಡಿ ನೀರು ರಸ್ತೆಗೆ ಹರಿಯದಂತೆಯೂ ಮತ್ತು ಧೂಳಿನ ಸಮಸ್ಯೆ ಇಲ್ಲದಂತೆ ಕಾಮಗಾರಿ ಮಾಡುವುದಾಗಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಭರವಸೆ ನೀಡಿದರು. ಕೊಟ್ಟ ಮಾತಿಗೆ ತಪ್ಪಿದರೆ ಹಳ್ಳಿಹಳ್ಳಿಗೆ ಕರೆ ಕೊಟ್ಟು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟು ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap