ಕುಡಿಯುವ ನೀರಿನ ಪೂರೈಕೆಗಾಗಿ ಪಪಂ ಸದಸ್ಯರಿಂದಲೆ ಪ್ರತಿಭಟನೆ..!

ಕೊರಟಗೆರೆ

      ಕುಡಿಯುವ ನೀರಿನ ಪೂರೈಕೆ ಮತ್ತು ಪಟ್ಟಣದ ಸ್ವಚ್ಚತೆಯ ಬಗ್ಗೆ ಪಪಂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯ ಧೋರಣೆಯಿಂದ ಪಟ್ಟಣಕ್ಕೆ 20 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿ ದ್ದಾರೆ ಎಂದು ಆರೋಪಿಸಿ ಪಪಂ ಸದಸ್ಯರೆ ಡಿಸಿಎಂ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.

      ಪಟ್ಟಣದ 15ನೆ ವಾರ್ಡಿಗೆ ಜೆಟ್ಟಿಅಗ್ರಹಾರ ಮತ್ತು ಜಂಪೇನಹಳ್ಳಿ ಕೆರೆಯಿಂದ ಕುಡಿಯುವ ನೀರಿನ ಪೂರೈಕೆ ಇದೆ. ಪಟ್ಟಣದಲ್ಲಿ ನೀರು ಬಿಡುವ ಸಿಬ್ಬಂದಿ ನಿರ್ವಹಣೆಯ ಬಗ್ಗೆ ಕಾಳಜಿ ತೊರದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ಪಪಂ ಸದಸ್ಯರು ಬೀದಿಗಿಳಿದು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಪಪಂ ಸದಸ್ಯ ಲಕ್ಷ್ಮೀನಾರಾಯಣ್ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 21 ಕೊಳವೆ ಬಾವಿಗಳಿವೆ. ಜೆಟ್ಟಿಅಗ್ರಹಾರ ಕೆರೆಯಲ್ಲಿ ಹೇಮಾವತಿ ನೀರು ತುಂಬಿದೆ. ನೀರು ಸರಬರಾಜು ಮಾಡುವ ನೌಕರರು ಪಪಂ ಅಧಿಕಾರಿಗಳ ಹಿಡಿತದಲ್ಲಿ ಇಲ್ಲದೆ ತಮಗೆ ಇಷ್ಟವಾದ ಕಡೆ ಪ್ರತಿದಿನ ನೀರು ಬಿಟ್ಟು, ಬೇರೆ ಕಡೆ 20ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಪಟ್ಟಣದ ಹೊಟೆಲ್, ಆಸ್ಪತ್ರೆ ಮತ್ತು ಕಲ್ಯಾಣ ಮಂಟಪಗಳಿಗೆ ನೀರಿನ ನೇರ ಸಂಪರ್ಕ ಕೊಡಿಸಲಾಗಿದೆ ಎಂದು ಆರೋಪಿಸಿದರು.

      ಪಪಂ ಸದಸ್ಯ ನಟರಾಜ್ ಮಾತನಾಡಿ, ಬರಗಾಲದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಹಲವು ರೀತಿಯ ತುರ್ತು ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಪಪಂ ಆಡಳಿತ ಅಧಿಕಾರಿ ಕಚೇರಿಗೆ ಬರುವುದಿಲ್ಲ. ಇನ್ನೂ ಪಟ್ಟಣದಲ್ಲಿನ ಸಮಸ್ಯೆಗಳು ಹೇಗೆ ತಿಳಿಯಬೇಕು. ಸಮಸ್ಯೆಗಳ ಬಗ್ಗೆ ನಾವು ತಿಳಿಸಿದರೆ ಚುನಾವಣೆ ನೀತಿ ಸಂಹಿತೆ ಎಂದು ಸಬೂಬು ಹೇಳಿ ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸದೆ ಕರ್ತವ್ಯ ಲೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಸ್ಥಳೀಯ ಮುಖಂಡ ಮಹಮ್ಮದ್ ಖಲೀಂ ಮಾತನಾಡಿ, ಕೊರಟಗೆರೆ ಪಟ್ಟಣದಲ್ಲಿ ನಾಲ್ಕು ಶುದ್ದ ಕುಡಿಯುವ ನೀರಿನ ಘಟಕಗಳಿವೆ. ನಿರ್ವಹಣೆ ಕೊರತೆಯಿಂದ ಸಾಕಷ್ಟು ಜನರಿಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಆಗುತ್ತಿಲ್ಲ. 10ಲೀಟರ್ ನೀರಿಗೆ ಒಂದು ರೂ. ಗಳಂತೆ ಪಪಂ ನಿಗದಿ ಪಡಿಸಿದೆ. 6ರೂ. ಹಾಕಿದರೂ ಸಹ ಬಿಂದಿಗೆ ತುಂಬುತ್ತಿಲ್ಲ. ಕುಡಿಯುವ ನೀರು ಮತ್ತು ಸ್ವಚ್ಚತೆಯ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪ ಮಾಡಿದರು.

      ಪ್ರತಿಭಟನೆಯಲ್ಲಿ ಪಪಂ ಸದಸ್ಯರಾದ ಓಬಳರಾಜು, ಪುಟ್ಟನರಸಯ್ಯ, ನಟರಾಜು, ಪ್ರದೀಪಕುಮಾರ್, ನಾಗರಾಜು, ನರಸಿಂಹಪ್ಪ, ಮುಖಂಡರಾದ ಗಣೇಶ್, ಸತ್ಯನಾರಾಯಣ್, ರಮೇಶ್, ಮಂಜುನಾಥ, ಮಹಮ್ಮದ್ ಖಲೀಂ, ಸ್ಮೈಲ್‍ರಘು, ಸುರೇಶ್, ಬಾಬುಲಾಲ್, ಗಿರೀಶ್‍ರಾವ್ ಸೇರಿದಂತೆ ನೂರಾರು ಜನ ಸ್ಥಳೀಯರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap