ತುಮಕೂರು

ಎ.ಟಿ.ಎಂ.ಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಗೌಪ್ಯವಾಗಿ ಬಳಸಿಕೊಂಡು ಮುಗ್ಧ ವ್ಯಕ್ತಿಗಳನ್ನು ನಿಗೂಢ ರೀತಿಯಲ್ಲಿ ವಂಚಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಕುಖ್ಯಾತ ಅಂತರ ರಾಜ್ಯ ದುಷ್ಕರ್ಮಿಗಳ ತಂಡವೊಂದನ್ನು ಪತ್ತೆ ಮಾಡುವಲ್ಲಿ ತುಮಕೂರಿನ ಪೊಲೀಸರು ಯಶಸ್ಸು ಸಾಧಿಸಿದ್ದಾರೆ.
ಎ.ಟಿ.ಎಂ. ಕಾರ್ಡ್ ಗ್ರಾಹಕರ ಬಳಿಯೇ ಇದ್ದರೂ, ಅವರ ಅಕೌಂಟ್‍ನಿಂದ ಹಣ ಮಾತ್ರ ಡ್ರಾ ಆಗುತ್ತಿದ್ದ ನಿಗೂಢ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಇದೊಂದು ಅಪರೂಪದ ಪತ್ತೆ ಕಾರ್ಯವೂ ಆಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ ಅವರು ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದೇ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಹೊಸ ರೀತಿಯ ದೂರುಗಳು ಪೊಲೀಸರಿಗೆ ಬಂದಿದ್ದವು. ಎ.ಟಿ.ಎಂ. ಕಾರ್ಡ್‍ಗಳು ತಮ್ಮ ಬಳಿಯೇ ಇದೆ; ಆದರೂ ಸಹ ತಮ್ಮ ಅಕೌಂಟ್‍ಗಳಿಂದ ತುಮಕೂರು, ಶಿರಾ, ಅರಸೀಕೆರೆಯ ಎ.ಟಿ.ಎಂ.ಗಳಿಂದ ಯಾರೋ ಅಜ್ಞಾತ ವ್ಯಕ್ತಿಗಳು ಹಣವನ್ನು ಡ್ರಾ ಮಾಡುತ್ತಿದ್ದಾರೆಂದು ತಿಪಟೂರಿನ ಹೊನ್ನವಳ್ಳಿಯ ಎಚ್.ಕೆ.ಬಸವರಾಜು (13,000 ರೂ.), ಹಾಲ್ಕುರಿಕೆಯ ಪರಮೇಶ್ವರಯ್ಯ (23,500 ರೂ.), ದಿಬ್ಬೂರಿನ ಮೈಲಾರರಾವ್ (20,000 ರೂ.), ತುಮಕೂರಿನ ವೀರಸಾಗರದ ಮಹಮದ್ ಜಾಬೀರ್ ಹುಸೇನ್ (15,500 ರೂ.)ದೂರು ಸಲ್ಲಿಸಿದ್ದರು.
ಈ ಬಗ್ಗೆ ತನಿಖೆಯ ಹೊಣೆಯನ್ನು ತುಮಕೂರಿನ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಗೆ ವಹಿಸಲಾಗಿತ್ತು. ತನಿಖೆ ಆರಂಭಿಸಿದ ವಿಶೇಷ ತಂಡವು ತಿಪಟೂರು, ಶಿರಾ, ಅರಸೀಕೆರೆ, ತುಮಕೂರಿನಲ್ಲಿ ಹಣ ಡ್ರಾ ಆಗಿರುವ ಎ.ಟಿ.ಎಂ.ಗಳು ಮತ್ತು ಸದರಿ ದೂರುದಾರ ಗ್ರಾಹಕರು ಹಣ ಡ್ರಾ ಮಾಡಿಕೊಂಡ ಎ.ಟಿ.ಎಂ.ಗಳಲ್ಲಿ ತಪಾಸಣೆ ನಡೆಸಿತು. ಮಾರ್ಚ್ 15 ರಂದು ತುಮಕೂರು ನಗರದ ಸ್ವಾತಂತ್ರ್ಯಚೌಕದ ಬಳಿ ಇರುವ ಎಸ್.ಬಿ.ಐ.ನ ಎ.ಟಿ.ಎಂ. ಬಳಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಈ ತಂಡವು ಸೆರೆ ಹಿಡಿದು ವಿಚಾರಣೆ ನಡೆಸಿದಾಗ, ಒಟ್ಟು ಆರು ಜನರ ತಂಡವು ನಡೆಸುತ್ತಿದ್ದ ದುಷ್ಕøತ್ಯದ ಸಂಗತಿಗಳು ಬೆಳಕಿಗೆ ಬಂದವು.
ಬಹಿರಂಗವಾದ ಸ್ಫೋಟಕ ಅಂಶ
ಇವರುಗಳು ಸಹ ಎ.ಟಿ.ಎಂ.ಗೆ ಹಣ ಡ್ರಾ ಮಾಡಲು ಬಂದವರಂತೆ ನಟಿಸುತ್ತ ಎ.ಟಿ.ಎಂ. ಬಳಿ ನಿಲ್ಲುತ್ತಿದ್ದರು. ಯಾರೋ ಮುಗ್ಧರು, ಅಮಾಯಕರು, ವೃದ್ಧರು ಎ.ಟಿ.ಎಂ.ಗೆ ಹಣ ಡ್ರಾ ಮಾಡಿಕೊಳ್ಳಲು ಬಂದಾಗ, ಅವರಿಗೆ ಸಹಾಯ ಮಾಡುವಂತೆ ಈ ದುಷ್ಕರ್ಮಿಗಳು ನಟಿಸುತ್ತಿದ್ದರು.
ಇವರುಗಳ ಕೈಲಿರುವ ಮೊಬೈಲ್ ಫೋನ್‍ನ ಒಂದು ಬದಿ ಯಾರಿಗೂ ಕಾಣದಂತೆ ಅತ್ಯಾಧುನಿಕ ಉಪಕರಣ (ಮ್ಯಾಗ್ನೇಟಿಕ್ ಸ್ಟ್ರೈಪ್ ರೀಡರ್ – ಎಂ.ಎಸ್.ಆರ್.ಎಕ್ಸ್ 6 ಹಾಗೂ ಪೋರ್ಟಬಲ್ ಮ್ಯಾಗ್ನೇಟಿಕ್ ಕಾರ್ಡ್ ರೆಕಾರ್ಡರ್ – ಎಂ.ಐ.ಎನ್.ಐ.ಡಿ. ಎಕ್ಸ್ 3) ಇರಿಸಿಕೊಳ್ಳುತ್ತಿದ್ದರು. ಸದರಿ ಗ್ರಾಹಕರ ಎ.ಟಿ.ಎಂ. ಕಾರ್ಡ್‍ನ್ನು ಇವರು ಕೇಳಿ ಪಡೆದುಕೊಂಡು ಕ್ಷಣಾರ್ಧದಲ್ಲಿ ತಮ್ಮ ಬಳಿ ಇರುವ ಮೊಬೈಲ್ ಫೋನ್ ಮುಂದೆ ಹಿಡಿಯುತ್ತಿದ್ದರು.
ಆಗ ಹಿಂಬದಿ ಇರುವ ಉಪಕರಣದಲ್ಲಿ ಈ ಕಾರ್ಡ್‍ನ ಮಾಹಿತಿ ದಾಖಲಾಗುತ್ತಿತ್ತು. ಬಳಿಕ ಇವರು ಕಾರ್ಡ್‍ನ್ನು ಸದರಿಯವರಿಗೆ ನೀಡಿ, ಈಗ ಪ್ರಯತ್ನಿಸಿ. ಹಣ ಬರುತ್ತದೆ ಎನ್ನುತ್ತಿದ್ದರು. ಬಳಿಕ ಅವರು ಗ್ರಾಹಕರ ಸೀಕ್ರೆಟ್ ಪಿನ್ ನಂಬರ್‍ನ್ನು ಕದ್ದುನೋಡಿ ತಿಳಿದುಕೊಳ್ಳುತ್ತಿದ್ದರು. ಆನಂತರ ಈ ದುಷ್ಕರ್ಮಿಗಳು ತಾವು ತಂಗುತ್ತಿದ್ದ ಲಾಡ್ಜ್‍ಗಳಲ್ಲಿ ಲ್ಯಾಪ್ ಟಾಪ್ ಬಳಸಿಕೊಂಡು ಮಿನಿ ಟೂಲ್ಸ್ ಮತ್ತು ಎಂ.ಎಸ್.ಆರ್.ಎಕ್ಸ್. ಎಂಬ ತಂತ್ರಾಂಶಗಳ ಮೂಲಕ ತಮ್ಮ ಬಳಿ ಇರುವ ಬೇರೆ ಬೇರೆ ಎ.ಟಿ.ಎಂ. ಕಾರ್ಡ್‍ಗಳಿಗೆ ಸದರಿ ಗ್ರಾಹಕರಿಂದ ಕದ್ದ ಎ.ಟಿ.ಎಂ.ಕಾರ್ಡ್‍ಗಳ ದತ್ತಾಂಶವನ್ನು ವರ್ಗಾವಣೆ ಮಾಡಿಕೊಂಡು, ತಾವು ಗಮನಿಸಿದ್ದ ಸೀಕ್ರೆಟ್ ಪಿನ್ ಬಳಸಿಕೊಂಡು ಬೇರೆ ಬೇರೆ ಎ.ಟಿ.ಎಂ.ಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರೆಂಬ ಸ್ಫೋಟಕ ಸಂಗತಿಯು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಇಬ್ಬರ ಸೆರೆ, ನಾಲ್ವರ ಪತ್ತೆಗೆ ಯತ್ನ
ಬಂಧಿತರಾಗಿರುವ ಇಬ್ಬರನ್ನು 1)ಬ್ರಿಜ್‍ಬನ್ ಸರೋಜ್, ನೋಬೋಷ್ಟ ಗ್ರಾಮ, ಪ್ರತಾಪ್‍ಘರ್ ಜಿಲ್ಲೆ, ಉತ್ತರ ಪ್ರದೇಶ ಮತ್ತು 2)ಹರಿಲಾಲ್, ನೋಬೋಷ್ಟ ಗ್ರಾಮ, ಪ್ರತಾಪ್‍ಘರ್ ಜಿಲ್ಲೆ, ಉತ್ತರ ಪ್ರದೇಶ ಎಂದು ಗುರುತಿಸಲಾಗಿದೆ. ಈ ದುಷ್ಕøತ್ಯದಲ್ಲಿ ಭಾಗಿಯಾಗಿರುವ ರಾಹುಲ್ ಅಲಿಯಾಸ್ ಕುಲ್‍ದೀಪ್ ಸಿಂಗ್, ಅಂಕಿತ್, ಅಂಕುಶ್ ಮತ್ತು ರಾಹುಲ್ ಸರೋಜ್ ಅಲಿಯಾಸ್ ನಾಗ ಎಂಬುವವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಬಂಧಿತರಿಂದ ವಂಚನೆಗೆ ಬಳಸುತ್ತಿದ್ದ ಉಪಕರಣಗಳು, 2 ಲ್ಯಾಪ್‍ಟಾಪ್‍ಗಳು, 19 ವಿವಿಧ ಎ.ಟಿ.ಎಂ.ಕಾರ್ಡ್‍ಗಳು, ತುಮಕೂರಿನಲ್ಲಿ ಗ್ರಾಹಕರಿಗೆ ವಂಚಿಸಿದ್ದ ಹಣದ ಪೈಕಿ ಒಟ್ಟು 53,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ವಂಶಿಕೃಷ್ಣ ವಿವರಿಸಿದರು.
85 ಕ್ಕೂ ಅಧಿಕ ಕೇಸ್‍ಗಳಲ್ಲಿ ಭಾಗಿ
ಈ ದುಷ್ಕರ್ಮಿಗಳು ತುಮಕೂರು ಜಿಲ್ಲೆಯ 4 ಪ್ರಕರಣ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ದಾಖಲಾಗಿರುವ ಇದೇ ಮಾದರಿಯ ಒಟ್ಟು 85 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಅಡಿಷನಲ್ ಎಸ್ಪಿ ಟಿ.ಜಿ. ಉದೇಶ್, ಡಿ.ಸಿ.ಆರ್.ಬಿ. ಡಿವೈಎಸ್ಪಿ ಸೂರ್ಯನಾರಾಯಣರಾವ್ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್. ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ, ಸಬ್‍ಇನ್ಸ್‍ಪೆಕ್ಟರ್ ಶಮೀನ್, ಸಿಬ್ಬಂದಿಗಳಾದ ಅಯೂಬ್ ಖಾನ್, ಶಿವಶಂಕರಪ್ಪ, ಎನ್.ಪರಮೇಶ್ವರಯ್ಯ, ಮಲ್ಲೇಶಯ್ಯ, ರಮೇಶ್, ಮಂಜುನಾಥ್, ನಾಗರಾಜು, ಹರೀಶ್, ಶಿವಪ್ರಸಾದ್, ಗಿರೀಶ್, ಅಮ್ಮಾಜಮ್ಮ, ರಮೇಶ್ ಅವರು ಈ ಪ್ರಕರಣದ ಪತ್ತೆಗೆ ಶ್ರಮಿಸಿದ್ದು, ಇವರನ್ನು ಎಸ್ಪಿ ಅಭಿನಂದಿಸಿದ್ದಾರೆ.
ಮಾಧ್ಯಮದ ಮುಂದೆ ಪ್ರಾತ್ಯಕ್ಷಿತೆ
ಇದೇ ಸಂದರ್ಭದಲ್ಲಿ ನಗರದ ವಿಶ್ವವಿದ್ಯಾನಿಲಯದ ಪಕ್ಕದ ರಸ್ತೆಯಲ್ಲಿರುವ ಎಸ್.ಬಿ.ಐ. ಎ.ಟಿ.ಎಂ.ನಲ್ಲಿ ಎಸ್ಪಿ ಡಾ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಟಿ.ಜೆ.ಉದೇಶ್ ಮತ್ತು ಲೀಡ್ ಬ್ಯಾಂಕ್ ಅಧಿಕಾರಿ ಜ್ಯೋತಿಗಣೇಶ್ ಅವರ ಸಮ್ಮುಖದಲ್ಲಿ, ಈ ಎ.ಟಿ.ಎಂ. ವಂಚನೆ ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಯವರು ಸದರಿ ದುಷ್ಕರ್ಮಿಗಳು ಯಾವ ರೀತಿಯಲ್ಲಿ ಅಮಾಯಕರನ್ನು ವಂಚಿಸುತ್ತಿದ್ದರೆಂಬುದರ ಪ್ರಾತ್ಯಕ್ಷಿತೆಯೊಂದನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
