ತುರುವೇಕೆರೆ
ಕೂಡಲೇ ನಮ್ಮ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ತಾಳಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡಿ.ಕಲ್ಕೆರೆ ಗ್ರಾಮದ ನೂರಾರು ಜನರು ಹಾಗೂ ಮಹಿಳೆಯರು ಖಾಲಿ ಕೊಡ ಹಿಡಿದು ತಾಲ್ಲೂಕು ಪಂಚಾಯ್ತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ಸುಮಾರು ದಿನಗಳಿಂದ ಕೊಳವೆ ಬಾವಿಯಲ್ಲಿ ನೀರು ಬಾರದೆ ಕುಡಿಯಲು ನೀರಿಲ್ಲದೆ ಜನರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಹಾಹಾಕಾರ ತಲೆದೋರಿದೆ. ಗ್ರಾಮ ಪಂಚಾಯ್ತಿಯಿಂದ ಟ್ಯಾಂಕರ್‍ನಿಂದ ಮಾತ್ರ ನೀರು ನೀಡುತ್ತಿದೆ. ಟ್ಯಾಂಕರ್ ನೀರು ಹಿಡಿಯಲು ಕೆಲಸ ಕಾರ್ಯ ಬಿಟ್ಟು ದಿನವಿಡಿ ನೀರಿಗಾಗಿ ಕಾಯುವಂತಾಗಿದೆ.
ಮಹಿಳೆಯರು, ಮಕ್ಕಳೆನ್ನದೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿ ನೀರು ಪಡೆಯಲು ಹಗಲು, ರಾತ್ರಿ ಎನ್ನದೆ ದೂರದ ತೋಟಗಳಿಗೆ ತೆರಳಿ ನೀರು ತರಬೇಕಿದೆ. ಆದರೆ ತೋಟದ ಮಾಲೀಕರು ಕೇವಲ 2 ರಿಂದ ಮೂರು ಬಿಂದಿಗೆ ಮಾತ್ರ ನೀಡುತ್ತಿದ್ದು ನಮಗೆ ಸಿಕ್ಕಷ್ಟೆ ನೀರಿನಲ್ಲಿಯೇ ಅಡುಗೆ, ಸ್ನಾನ, ಬಟ್ಟೆ ತೊಳೆಯವುದು ಮಾಡಬೇಕಿದೆ. ಈಗಾಗಲೇ ಗ್ರಾಮ ಪಂಚಾಯ್ತಿಗೆ ಹಲವಾರು ಭಾರಿ ಮನವಿ ಮಾಡಿದ್ದರೂ ಗ್ರಾಮ ಪಂಚಾಯ್ತಿಯವರು ಕೇವಲ ಟ್ಯಾಂಕರ್‍ನಲ್ಲಿ ಮಾತ್ರ ನೀರು ನೀಡಿ ಸುಮ್ಮನಾಗುತ್ತಿದ್ದಾರೆ. ಕೂಡಲೆ ಸಂಬಂಧಪಟ್ಟ ಇಲಾಖೆಯವರು ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಇ.ಓ.ರವರಿಗೆ ಮನವಿ:
ಪ್ರತಿಭನಾಕಾರರು ಇ.ಓ.ಜಯಕುಮಾರ್‍ರವರಿಗೆ ಮನವಿ ನೀಡಿದರು. ಪ್ರತಿಭಟನಾಕಾರರ ಜೊತೆ ಇ.ಓ. ಜಯಕುಮಾರ್ ಮಾತನಾಡಿ ನಾಳೆಯಿಂದಲೇ ಪ್ರತಿದಿನ 4 ಟ್ಯಾಂಕರ್ ನೀರು ಒದಗಿಸುವುದಾಗಿ ಆಶ್ವಾಸನೆ ನೀಡಿದ ನಂತರ 20 ದಿನಗಳೊಳಗಾಗಿ ಹೊಸ ಬೋರ್‍ವೆಲ್ ಕೊರೆಸಿಕೊಡುವುದಾಗಿ ಆಶ್ವಾಸನೆ ಮೇರೆಗೆ ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ವಿಎಸ್‍ಎಸ್‍ಎನ್ ನಿರ್ದೇಶಕ ಕೃಷ್ಣಮೂರ್ತಿ, ಗ್ರಾಮದ ಮುಖಂಡರಾದ ಯತೀಶ್, ಶಬಿರ್, ಮಂಜುನಾಥ್, ಭಕ್ಸುಸಾಬ್, ನಂಜಪ್ಪ, ಮಹಿಳೆಯರಾದ ಕಮಲಮ್ಮ, ನಾಗರತ್ನ, ಶಂಷದ್, ವಿಶಾಲಮ್ಮ, ಶಾಯಿನಾ, ಹೊನ್ನಮ್ಮ ಸೇರಿದಂತೆ ಇತರರು ಇದ್ದರು.