ಹುಳಿಯಾರು
ಕಳೆದ ಮೂರು ತಿಂಗಳಿಂದ ನಮ್ಮೂರಲ್ಲಿ ಕುಡಿಯುವ ನೀರಿಲ್ಲ. ಪಪಂ ಸದಸ್ಯರಿಗೆ ಹೇಳಿದರೆ ನಾವು ಅಸಾಹಯಕರೆನ್ನುತ್ತಾರೆ. ಸಿಬ್ಬಂಧಿಗಳಿಗೆ ಹೇಳಿದರೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಇದೇ ಕಡೆ ವಾರ್ನಿಂಗ್, ಒಂದು ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಮನೆಗೊಬ್ಬರಂತೆ ಬಂದು ಪಂಚಾಯ್ತಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಹುಳಿಯಾರು ಪಪಂ ವ್ಯಾಪ್ತಿಯ ಲಿಂಗಪ್ಪನಪಾಳ್ಯದ ನಿವಾಸಿಗಳು ಎಚ್ಚರಿಕೆ ನೀಡಿ ಹೋದ ಘಟನೆ ಮಂಗಳವಾರ ಜರುಗಿದೆ.
ಲಿಂಗಪ್ಪನಪಾಳ್ಯ ಗ್ರಾಮವು ಹುಳಿಯಾರು ಪಪಂ ವ್ಯಾಪ್ತಿಯಲ್ಲಿದ್ದರೂ ಅಧಿಕಾರಿಗಳು ಮಲತಾಯಿ ಧೋರಣೆ ತಾಳಿದ್ದಾರೆ. ಪರಿಣಾಮ ಕಂಬಗಳಲ್ಲಿ ಬೀದಿ ದೀಪಗಳಿಲ್ಲದೆ ಇಡೀ ಗ್ರಾಮ ಕತ್ತಲೆಯಲ್ಲಿದೆ. ಐದಾರು ತಿಂಗಳುಗಳೇ ಕಳೆದಿದ್ದರೂ ಚರಂಡಿ ಸ್ವಚ್ಚ ಮಾಡದೆ ದುರ್ನಾತ ಬೀರುತ್ತಿದೆ. ಕುಡಿಯುವ ನೀರಿನ ಗೋಳಂತೂ ಹೇಳತೀರದಾಗಿದೆ ಎಂದು ಇಲ್ಲಿನ ನಿವಾಸಿಗಳು ಅವಲತ್ತುಕೊಂಡರು.
ನೀರಿನ ಸಮಸ್ಯೆಯಂತೂ ವಿಪರೀತವಾಗಿದ್ದು ಶುದ್ಧ ನೀರಿನ ಘಟಕ ಕೆಟ್ಟಿದ್ದು ಕುಡಿಯುವ ನೀರಿಗಾಗಿ ಬೇರೆ ಊರುಗಳನ್ನು ಆಶ್ರಯಿಸುವಂತ್ತಾಗಿದೆ. ಊರಿನ ಸಿಸ್ಟನ್‍ಗಳಿಗೆ ಸರಬರಾಜು ಮಾಡುತ್ತಿದ್ದ ಕೊಳವೆಬಾಯಿಯಲ್ಲಿ ಅಂತರ್ಜಲ ಬರಿದಾಗಿ ಕೈ ಪಂಪುಗಳನ್ನು ಒತ್ತೀ ಒತ್ತೀ ರೆಟ್ಟೆಗಳು ಬಿದ್ದೋಗಿವೆ. ಒಟ್ಟಾರೆ ಹನಿ ನೀರಿಗೂ ಜನ ಪರದಾಡುವಂತ್ತಾಗಿದೆ ಎಂದು ವಿವರಿಸಿದರು.
ಸಮಸ್ಯೆ ಸರಿಪಡಿಸುವಂತೆ ಇಲ್ಲಿನ ಪಪಂ ಸದಸ್ಯರನ್ನು ಕೇಳಿಕೊಂಡರೆ ನಮ್ಮ ಮಾತಿಗೆ ಕಿಮ್ಮತ್ತು ಇಲ್ಲದಾಗಿದೆ.
ಯಾವ ಸಿಬ್ಬಂದಿಯೂ ನಮ್ಮ ಮಾತುಗಳನ್ನು ಕೇಳದಾಗಿದ್ದಾರೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ. ಸಿಬ್ಬಂದಿಗೆ ಹೇಳಿದರೆ ಕೊಳವೆಬಾವಿಗೆ ಮತ್ತೊಷ್ಟು ಲೆಂತ್ ಬಿಟ್ಟು ಹೊಸ ಮೋಟರ್ ಕೂರಿಸಬೇಕಿದೆ. ಇದಕ್ಕೆ ಲಕ್ಷಾಂತರರ ರೂ. ಖರ್ಚಾಗುತ್ತದೆ ಮೇಲಧಿಕಾರಿಗಳಿಗೇಳಿ ಹಣ ಕೊಡಿಸಿ ಎನ್ನುತ್ತಾರೆ.
ಕಳೆದ 3 ತಿಂಗಳಿಂದ ಇದೇ ಗೋಳಾಗಿದ್ದು ನಮ್ಮ ತಾಳ್ಮೆಯೂ ಸಹ ಮೀರಿದೆ. ಹಾಗಾಗಿ ಇನ್ನೊಂದು ವಾರದಲ್ಲಿ ಹೇಗಾದರೂ ಸರಿ ನೀರಿನ ವ್ಯವಸ್ಥೆ ಮಾಡಿ, ಬೀದಿ ದೀಪಗಳನ್ನು ಅಳವಡಿಸಿ, ಚರಂಡಿ ಸ್ವಚ್ಚಗೊಳಿಸದಿದ್ದರೆ ಊರಿನ ಎಲ್ಲಾ ಮನೆಗಳಿಗೆ ಟಾಂಟಾಂ ಹೊಡೆಸಿ ಮನೆಗೊಬ್ಬರಂತೆ ಕರೆತಂದು ಪಂಚಾಯ್ತಿ ಮುತ್ತಿಗೆಯಾಕಿ ಸಮಸ್ಯೆ ಬಗೆಹರಿಯುವವರೆವಿಗೂ ಅಹೋರಾತ್ರ ಧರಣಿ ಮಾಡುವುದಾಗಿ ಎಚ್ಚರಿಸಿದರು.