ಪರವಾನಿಗೆ ಇಲ್ಲದ ಸಮುದಾಯಭವನಗಳಿಗೆ ನೀರು,ವಿದ್ಯುತ್ ಸಂಪರ್ಕಕ್ಕೆ ಕತ್ತರಿ: ತುಷಾರಮಣಿ

ಬಳ್ಳಾರಿ

    ಪರವಾನಿಗೆ ಪಡೆಯದೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಭವನಗಳಿಗೆ ಕೂಡಲೇ ನೀರು,ವಿದ್ಯುತ್ ಸಂಪರ್ಕ ಹಾಗೂ ಇನ್ನೀತರ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಹೇಳಿದರು.ನಗರದ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

     ನಗರದಲ್ಲಿ 53 ಸಮುದಾಯ ಭವನಗಳು ಇದ್ದು, ಇದರಲ್ಲಿ ಎರಡು ಅಥವಾ ಮೂರು ಸಮುದಾಯ ಭವನಗಳು ಮಾತ್ರ ಪರವನಾಗಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ. ಇನ್ನೂಳಿದ ಸಮುದಾಯ ಭವನಗಳು ಪರವನಾಗಿ ಇಲ್ಲದೇ ಮದುವೆ ಇನ್ನಿತರ ಕಾರ್ಯಕ್ರಮಗಳು ನಡೆಸುತ್ತಿವೆ. ಇದರಿಂದಾಗಿ ಮಹಾನಗರ ಪಾಲಿಕೆಗೆ ತೆರಿಗೆ ವಿಷಯದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.

       ಆದ ಕಾರಣ ಅನುಮತಿ ಪಡೆಯದೆ ಹಾಗೂ ಪರವನಾಗಿ ಇಲ್ಲದೇ ನಡೆಸುವ ಸಮುದಾಯ ಭವನಗಳಿಗೆ ನೀರು, ವಿದ್ಯುತ್ ಕಡಿತಗೊಳಿಸಿ ನೋಟಿಸ್ ಜಾರಿ ಮಾಡಿ, ಪರವನಾಗಿ ಪಡೆದ ನಂತರ ಕಾರ್ಯ ಸೌಲಭ್ಯಗಳು ಕಲ್ಪಿಸಲಾಗುವುದು ಎಂದರು.ಶುದ್ಧ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಹಾಗೂ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಗುತ್ತಿಗೆದಾರರು ಗುಣಮಟ್ಟದ ಕೆಲಸಗಳನ್ನು ಮಾಡಿ ಪೂರ್ಣಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯಕ್ತರಾದ ಎಂ.ವಿ.ತುಷಾರಮಣಿ ಅವರು ಹೇಳಿದರು.

       ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನಗಳ ನಿರ್ಮಾಣವು ತ್ವರಿತಗತಿಯಲ್ಲಿ ಸಾಗುತ್ತಿಲ್ಲ, ಕೆಲವೊಂದು ಕಡೆ ಸರಿಯಾದ ಕಾಮಗಾರಿ ನಿರ್ವಹಿಸಿರುವುದಿಲ್ಲ ಎಂಬ ದೂರುಗಳು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ ಅವರು, ಆ ರೀತಿಯ ಕಾಮಗಾರಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗುವುದು ಮತ್ತು ಅವುಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ಕರೆಸಿ ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯಿಂದ ರಾಜಿಯಾಗದಂತೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದರು.

       ವಿವಿಧ ಬಡಾವಣೆ, ನಗರ ಪ್ರದೇಶಗಳಲ್ಲಿ ಡ್ರೈನೇಜ್ ಬ್ಲಾಕ್ ಆಗಿರುವುದರಿಂದ ಸಾಕಷ್ಟು ದೂರುಗಳು ಬಂದಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ತೊಂದರೆಗಳು ಅದಿಕವಾಗುತ್ತಿವೆ. ಇದರ ಕುರಿತು ಮಹಾನಗರ ಪಾಲಿಕೆ ಸಿಬ್ಬಂದಿ ಖುದ್ದಾಗಿ ಪರಿಶೀಲನೆ ನಡೆಸಿ ಮತ್ತು ನಗರದಲ್ಲಿ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯಗಳನ್ನು ಪಟ್ಟಿ ಮಾಡಿ ಅದರ ನಿರ್ವಹಣೆ ಹಾಗೂ ಗುಣಮಟ್ಟವನ್ನು ಅರಿಯಬೇಕು ಎಂದರು.
ಟ್ರೇಡ್ ಲೈಸೆನ್ಸ್ ಪಡೆಯಿರಿ:

        1996ರ ಕಾಯ್ದೆಯ ಪ್ರಕಾರ ನಗರದಲ್ಲಿ ಇರುವ ಅಂಗಡಿ, ಮುಂಗಟ್ಟುಗಳು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆಯಬೇಕು ಎಂಬ ನಿಯಮವಿದೆ. ಬಳ್ಳಾರಿ ನಗರದಲ್ಲಿ 10 ಸಾವಿರಕ್ಕೂ ಅಧಿಕ ವಿವಿಧ ರೀತಿಯ ಅಂಗಡಿಗಳು ಇವೆ. ಇದರಲ್ಲಿ ಅಲ್ಪ ಅಂಗಡಿಗಳು ಮಾತ್ರ ಟ್ರೇಡ್ ಲೈಸೆನ್ಸ್ ಪಡೆದಿದ್ದು, ಇನ್ನುಳಿದರವರಿಗೆ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳವಂತೆ ಜಾಗೃತಿ ಮೂಡಿಸಿದ್ದೇವೆ ಎಂದು ಅವರು ಹೇಳಿದರು.

     ಒಂದುವೇಳೆ ಟ್ರೇಡ್ ಲೈಸೆನ್ಸ್ ಪಡೆಯದೆ ಹೊದರೆ ಅಂತಹ ಅಂಗಡಿಗಳ ಬಾಗಿಲು ಮುಚ್ಚಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಮಹಾನಗರ ಪಾಲಿಕೆಯು ನಗರದ ಸಾರ್ವಜನಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಪಾಲಿಕೆ ಇನ್ನಷ್ಟು ಪರಿಣಾಮಕಾರಿ ಯಾಗಿ ಕೆಲಸ ಮಾಡಬೇಕಿದ್ದಲ್ಲಿ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಭರಿಸಬೇಕು ಮತ್ತು ಇನ್ಮುಂದೆಯೂ ನಿರಂತರವಾಗಿ ಕಟ್ಟುತ್ತಾ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.

     ಸಾರ್ವಜನಿಕರು ಇದೇ ಸಂದರ್ಭದಲ್ಲಿ ವಿವಿಧ ರೀತಿಯ ದೂರುಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಎಂಜನಿಯರ್‍ಗಳು ಸೇರಿದಂತೆ ವಿವಿಧ ಶಾಖೆಗಳ ಸಿಬ್ಬಂದಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap