ಹೊನ್ನಾಳಿ:
ಮಾಗಿ ಉಳುಮೆಯಿಂದ ಕೀಟಗಳ ಹಾವಳಿ ತಪ್ಪಿಸಬಹುದು. ತನ್ಮೂಲಕ ಅಧಿಕ ಇಳುವರಿ ಪಡೆಯಬಹುದು. ಆದ್ದರಿಂದ, ಎಲ್ಲಾ ರೈತರೂ ತಪ್ಪದೇ ಮಾಗಿ ಉಳುಮೆ ಮಾಡಬೇಕು ಎಂದು ಕುಂದೂರು ಹೋಬಳಿಯ ಕೃಷಿ ಅಧಿಕಾರಿ ಪಿ.ಕೆ. ನಾಗವೇಣಿ ಹೇಳಿದರು.
ತಾಲೂಕಿನ ಕುಂದೂರು ಗ್ರಾಮಕ್ಕೆ ಗುರುವಾರ ಕೃಷಿ ಇಲಾಖೆಯ ಮಾಹಿತಿಯನ್ನು ಹೊತ್ತ ರಥ ಆಗಮಿಸಿದ ವೇಳೆ “ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಎಂಬ ಶೀರ್ಷಿಕೆಯಡಿ ಕೃಷಿ ಅಭಿಯಾನ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೈನಿಕ ಹುಳು ಬಾಧೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೃಷಿ ಇಲಾಖೆಯ ಮಾಹಿತಿಯಂತೆ ಸರಿಯಾದ ಕ್ರಮಗಳನ್ನು ಅಂದರೆ ಸೈನಿಕ ಹುಳುವಿನ ಹಾನಿ ಸ್ವರೂಪ ಮತ್ತು ಜೀವನ ಚಕ್ರ, ಹತೋಟಿ ಕ್ರಮಗಳ ಬಗ್ಗೆ ಕಡ್ಡಾಯವಾಗಿ ರೈತರು ಅರಿವು ಹೊಂದಲೇಬೇಕು ಎಂದು ತಿಳಿಸಿದರು.
ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟ ಮಳಿಗೆಯಿಂದ ಮತ್ತು ಕೃಷಿ ಇಲಾಖೆ ಸಹಾಯಧನದಲ್ಲಿ ಪಡೆಯಬೇಕು. ಖರೀದಿಸಿದ ಬೀಜಕ್ಕೆ ರಸೀದಿಯನ್ನು ಕಡ್ಡಾಯವಾಗಿ ಪಡೆಯಬೇಕು. ಈ ರಸೀದಿಯನ್ನು ಬೆಳೆ ಕಟಾವಿನವರೆಗೂ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕುಂದೂರು ಹೋಬಳಿಯ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಲ್ಲಿ ಎರಡು ದಿನಗಳ ಕಾಲ ಕೃಷಿ ಸಂಬಂಧಿತ ವಿವಿಧ ಮಾಹಿತಿ ನೀಡಲಾಯಿತು.
ಕೂರಿಗೆ ಭತ್ತ ಬಿತ್ತನೆ ವಿಧಾನ, ಬೀಜೋಪಚಾರ ಮತ್ತಿತರ ಮಾಹಿತಿ ನೀಡಲಾಯಿತು. ವಿವಿಧ ಯೋಜನೆಗಳಾದ ಮಣ್ಣು ಆರೋಗ್ಯ ಅಭಿಯಾನ, ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ, ಬೆಳೆ ವಿಮೆ ಯೋಜನೆ ಮತ್ತಿತರ ವಿಷಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು.ಕೃಷಿ ಇಲಾಖೆಯ ಅನುವುಗಾರರು ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.