ಕುಣಿಗಲ್
ತಾಲ್ಲೂಕಿನಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿಗೆ ಶೇ.74.31ರಷ್ಟು ಫಲಿತಾಂಶ ಪಡೆದಿದ್ದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನ ಮೀರಿಸುವಂತಹ ಫಲಿತಾಂಶ ಪಡೆಯುವಲ್ಲಿ ಉತ್ತಮ ಸಾಧನೆ ಮಾಡಿವೆ.
ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಒಟ್ಟು 3016 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2242 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಸರ್ಕಾರಿ ಶಾಲೆಗಳೇ ಮೇಲುಗೈ : ಚನ್ನಾಗಿ ಓದುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ತಮ್ಮ ಶಾಲೆಗಳಲ್ಲಿ ಸೀಟು ಕೊಟ್ಟು ಪಾಠ ಕಲಿಸುವ ಖಾಸಗಿ ಶಾಲೆಗಳಿಗೇನು ಕಮ್ಮಿ ಇಲ್ಲಾ ಎಂಬಂತೆ ಈ ಬಾರಿ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿ ಮೇಲುಗೈ ಸಾಧಿಸಿವೆ.
ಶೇ.100 ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು: ಡಿ.ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ, ಹಿತ್ತಲಹಳ್ಳಿಮಠ ಸರ್ಕಾರಿ ಪ್ರೌಢಶಾಲೆ, ಇಪ್ಪಾಡಿ ಸರ್ಕಾರಿ ಪ್ರೌಢಶಾಲೆಗಳು ನೂರಕ್ಕೆ ನೂರು ಫಲಿತಾಂಶ ಗಳಿಸಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ತಿಳಿಸಿದ್ದಾರೆ. ಯಾವುದೇ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಈ ಬಾರಿ ಶೇ.100ರಷ್ಟು ಪಡೆದಿರುವುದಿಲ್ಲ. ಆದರೆ, ಬಹುತೇಕ ಶಾಲೆಗಳು ಶೇ.90ಕ್ಕೂ ಹೆಚ್ಚು ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿದ್ದು ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಕನ್ನಡ ವಿಷಯದಲ್ಲಿ ಮೇಲುಗೈ:- ಕನ್ನಡಭಾಷೆಯಲ್ಲಿ 125ಕ್ಕೆ 125 ಅಂಕವನ್ನು 67 ವಿದ್ಯಾರ್ಥಿಗಳು ಪಡೆದಿರುವುದು ಈ ಬಾರಿಯ ವಿಶೇಷವಾಗಿದೆ.
ಮಹಾತ್ಮ ಗಾಂಧಿ ಸರ್ಕಾರಿ ಶಾಲೆಯ ಉತ್ತಮ ಸಾಧನೆ : ವಿದ್ಯಾರ್ಥಿನಿ ಪಲ್ಲವಿ 625ಕ್ಕೆ 616 ಅಂಕ ಗಳಿಸಿದ ಅರವಿಂದ್ ಶಾಲೆಯು ತಾಲೂಕಿಗೆ ಪ್ರಥಮ ಸ್ಥಾನಗಳಿಸಿದರೆ, ಮಹಾತ್ಮಗಾಂಧಿ ಸರ್ಕಾರಿ ಪ್ರೌಢಶಾಲೆಯ ವೆಂಕಟೇಶಗೌಡ 615 ಗಳಿಸಿ ದ್ವಿತೀಯ ಸ್ಥಾನವನ್ನೂ ಹಾಗೂ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ಜೀವನ್‍ಗೌಡ 611 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು. ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆ ಶೇ.15 ಗಳಿಸುವ ಮೂಲಕ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಶಾಲೆಯಾಗಿದೆ.
ಈ ಬಾರಿ ರಾತ್ರಿ ಪಾಠಶಾಲೆಗಳನ್ನು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಹಮ್ಮಿಕೊಂಡಿದ್ದವು. ಗುಣಮಟ್ಟದ ಫಲಿತಾಂಶ ಬಂದಿರುವುದು ಸಂತಸ ತಂದಿದೆ ಎಂದು ಬಿಇಒ ತಿಳಿಸಿದ್ದಾರೆ. 625ಕ್ಕೆ 615 ಅಂಕ ಗಳಿಸಿರುವ ಕುಣಿಗಲ್ ಮಹಾತ್ಮಗಾಂಧಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವೆಂಕಟೇಶಗೌಡನನ್ನು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಸನ್ಮಾನಿಸಿ ಗೌರವಿಸಿದರು. ಬಿಆರ್‍ಸಿ ಕೃಷ್ಣಕುಮಾರ್, ಜಯರಾಮ್, ಸೋಮಶೇಖರ್, ಧನಂಜಯ,ಕರುಣಾಕರ್ ಮತ್ತಿತರರು ಹಾಜರಿದ್ದರು.