ಬಳ್ಳಾರಿ:
ಇಲ್ಲಿನ ಕೊಳಗಲ್ಲು ರಸ್ತೆಯ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿ ಸಮಿತಿಯ ಐದು ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯಿತು.
ಸಮಿತಿಯ ಐದು ನಿರ್ದೇಶಕ ಸ್ಥಾನಗಳಿಗೆ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಾ ಪ್ಯಾನಲ್‍ನಿಂದ ಹಗರಿಬೊಮ್ಮನಹಳ್ಳಿಯ
ಎಂ.ಮರಿರಾಮಪ್ಪ, ಕುಡಿತಿನಿ ಡಿ.ರಾಮಾಂಜನೇಯ, ಬಿ.ಹನುಮಂತಪ್ಪ, ಮಹಿಳಾ ಮೀಸಲು ಸ್ಥಾನಕ್ಕೆ ಬಿ.ರೇಣುಕಮ್ಮ, ಮತ್ತೊಂದು ಪ್ಯಾನಲ್‍ನಿಂದ ಕೆ.ಕೆಂಚಲಿಂಗಪ್ಪ, ಡಿ.ಗಂಗಾಧರ, ಕೆ.ನಾಗರಾಜು, ಎ.ಮಲ್ಲೇಶಪ್ಪ, ಮಹಿಳಾ ಮೀಸಲು ಸ್ಥಾನಕ್ಕೆ ಎನ್.ಸಂಧ್ಯಾ ಸೇರಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದ್ದು, ಸಂಜೆ 4 ಗಂಟೆವರೆಗೆ ಬಿರುಸಿನಿಂದ ನಡೆಯಿತು. ಒಟ್ಟು 3501 ಮತದಾರರ ಪೈಕಿ 2031 ಮತದಾರರು ಹಕ್ಕು ಚಲಾಯಿಸಿದ್ದಾರೆ. ಐದು ನಿರ್ದೇಶಕರನ್ನು ಆಯ್ಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಒಬ್ಬ ಮತದಾರರು ಐದು ಮತಗಳನ್ನು ಚಲಾಯಿಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆಯೂ ಇಂದೇ ನಡೆಯಲಿದ್ದು, ತಡರಾತ್ರಿಯೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.
ಬಂದೋಬಸ್ತು;
ಮೂರು ಸಾವಿರದ ಐದುನೂರು ಒಂದು ಮತದಾರರಿದ್ದು ಮತಚಲಾಯಿಸಲು ಬಿಗಿ ಪೊಲೀಸ್ ಬಂದೋಬಸ್ತು ಮಾಡಿತ್ತು. ಇಂದಿರಾನಗರದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಬಿಟ್ಟು ಇತರೇ ವಾಹನ ಸಂಚಾರ ರದ್ದುಪಡಿಸಿತ್ತು. ನಕಲಿ ಮತದಾನ ತಡೆಗಟ್ಟಲು ಮತದಾರರು ಬಾರ್ ಕೋಡ್ ಹೊಂದಿದ ಸಂಘದ ಗುರುತಿನ ಚೀಟಿ ಪರಿಶೀಲನೆ ನಡೆಸಿದ ನಂತರ ಚೀಟಿಗಳನ್ನು ನೀಡಲಾಗುತ್ತಿದ್ದು, ಚೀಟಿ ಇದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪರಿಶೀಲನೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳು ಮತಗಟ್ಟೆ ಮುಂದೆ ನಿಂತು ತಮಗೆ ಮತ್ತು ತಮ್ಮ ಗುಂಪಿಗೆ ಮತ ನೀಡುವಂತೆ ಕೇಳುವ ದೃಶ್ಯ ಸಾಮಾನ್ಯವಾಗಿತ್ತು. ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಮತದಾರರಿಗೆ ಅವರ ಊರಿನಿಂದ ಬರಲು ಬಸ್ ಹಾಗೂ ಟ್ರ್ಯಾಕ್ಸ್ ವ್ಯವಸ್ಥೆ ಜೊತೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
