ಕರುಬ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ
ತುಮಕೂರು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತಮ್ಮ ಅಧಿಕಾರ ತ್ಯಾಗ ಮಾಡಿದ ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಬಿಜೆಪಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಯಲ್ಲಿ ಸೋತಿರುವ ಹೆಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಅವರನ್ನು ಮಂತ್ರಿ ಮಾಡಬೇಕು ಎಂದು ಜಿಲ್ಲಾ ಕುರುಬರ ಸಂಘದ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಆರ್.ಎಂ.ಸಿ ರಾಜಣ್ಣ, ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಚಿವರು, ಶಾಸಕರಾಗಿದ್ದವರು ರಾಜೀನಾಮೆ ನೀಡಿ, ಬಿಜೆಪಿ ಸೇರಿ, ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಇವರ ತ್ಯಾಗ ಪರಿಗಣಿಸಿ ಇವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಈ ಪೈಕಿ ಕುರುಬ ಸಮುದಾಯದ ನಾಯಕರಾದ ಶಾಸಕ ಭೈರತಿ ಬಸವರಾಜು, ಮಾಜಿ ಶಾಸಕರಾದ ಹೆಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್, ಎಸ್ ಶಂಕರ್ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಎಲ್ಲರಿಗೂ ಸಚಿವ ನೀಡುವುದಾಗಿ ಮಾತು ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳು ಮಾತು ಉಳಿಸಿಕೊಳ್ಳಲಿ ಎಂದು ಒತ್ತಾಯಿಸಿದರು.
ಬಿಜೆಪಿಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಪ್ರಭಾವಿ ನಾಯಕರಾದ ಡಾ. ಎಂ. ಆರ್. ಹುಲಿನಾಯ್ಕರ್, ಬೇವಿನಹಳ್ಳಿ ಮಂಜುನಾಥ್, ನಿಷ್ಠಾವಂತ ಕಾರ್ಯಕರ್ತರಾದ ಸಿ. ಪುಟ್ಟರಾಜು, ಕುಮಾರಸ್ವಾಮಿ(ಪುಟ್ಟಪ್ಪ), ಎಸ್. ಶಂಕರ್ ಅವರನ್ನು ಸರ್ಕಾರ ನಿಗಮ, ಮಂಡಳಿಗಳಿಗೆ ನೇಮಕ ಮಾಡಬೇಕು ಎಂದು ಆರ್.ಎಂ.ಸಿ ರಾಜಣ್ಣ ಒತ್ತಾಯ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ರಾಜಕೀಯವಾಗಿ ಉನ್ನತ ಸ್ಥಾನ ಗಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊರತುಪಡಿಸಿದರೆ, ಬಿಜೆಪಿ ಹಾಗೂ ಜೆಡಿಎಸ್‍ನಲ್ಲಿ ಕುರುಬ ಸಮುದಾಯದ ನಾಯಕರು ಪ್ರಭಾವಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಲ್ಲಿ ಕುರುಬ ನಾಯಕರು ಸಚಿವರಾಗುವ ಅವಕಾಶವಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು, ಇಲ್ಲವಾದರೆ ಸಮಾಜದಿಂದ ಹೋರಾಟ ಮಾಡುವುದಾಗಿ ಹೇಳಿದರು.
ಜಿಲ್ಲಾ ಕುರುಬರ ಸಂಘದಲ್ಲಿ ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತರಿದ್ದು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಆರ್.ಎಂ.ಸಿ ರಾಜಣ್ಣ ಹೇಳಿದರು.ಜಿಲ್ಲೆಯಲ್ಲಿ ಕುರುಬ ಜನಾಂಗವನ್ನು ಸಂಘಟಿಸುವ ಉದ್ದೇಶದಿಂದ ಜಿಲ್ಲಾ ಕುರುಬರ ಸಂಘ 2011ರಲ್ಲಿ ಸ್ಥಾಪನೆಯಾಯಿತು. ದಿ. ಎನ್. ಮಲ್ಲಪ್ಪನವರ ಪುತ್ರರಾದ ಟಿ. ಎಂ. ನಂಜರಾಜು ಮೊದಲ ಅಧ್ಯಕ್ಷರಾಗಿದ್ದರು. ಈ ಸಂಘ ಯಾವುದೇ ಸಂಘದ ಪರ್ಯಾಯ ಸಂಘಟನೆಯಲ್ಲ ಎಂದ ಅವರು, ಸಮಾಜದ ಶೈಕ್ಷಣಿಕ, ಸಾಂಸ್ಕøತಿಕ ಬೆಳವಣಿಗೆಗೆ ಸಂಘ ಉತ್ತೇಜನ ನೀಡುತ್ತಿದೆ ಎಂದರು.
ಸಂಘದ ಅಧ್ಯಕ್ಷ ಟಿ. ಆರ್. ಸುರೇಶ್, ಮಾಜಿ ಅಧ್ಯಕ್ಷ ಟಿ. ಎಂ. ನಂಜರಾಜು, ಉಪಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಎಂ.ಪಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಕಾರ್ಯದರ್ಶಿ ಸಿ.ಪುಟ್ಟರಾಜು, ಜಂಟಿ ಕಾರ್ಯದರ್ಶಿ ಗಳಾದ ಟಿ.ಇ.ರಘುರಾಮ್, ಟಿ.ಹೆಚ್.ಮಹದೇವ, ಖಜಾಂಚಿ ಧರ್ಮರಾಜು, ಪ್ರದೇಶ ಕರುಬರ ಸಂಘದ ನಿರ್ದೇಶಕ ಶಂಕರ್ ಹಾಗೂ ಸಂಘದ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ