ದಾವಣಗೆರೆ
ರಾಜ್ಯದಲ್ಲಿ ಪರಿಶಿಷ್ಟ ಪಂಗಡ(ಎಸ್‍ಟಿ)ಗೆ ನೀಡುತ್ತಿರುವ ಶೇ.3ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವ ಮುನ್ನವೇ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು, ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನ್ಯಾಯಾಂಗ ಹೋರಾಟ ನಡೆಸಲಾಗುವುದು ಎಂದು ನಾಯಕ ಸಮಾಜದ ಮುಖಂಡ, ಹಿರಿಯ ವಕೀಲ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಎಚ್ಚರಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಕುರುಬ ಜನಾಂಗವನ್ನು ಸೇರಿಸಲು ಸರ್ಕಾರ ಕುಲಶಾಸ್ತ್ರ ಅಧ್ಯಯನಕ್ಕೆ 40 ಲಕ್ಷ ರೂ. ಮೀಸಲಿಟ್ಟು ಕ್ರಮ ಕೈಗೊಂಡಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಿದ್ದು, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಶೇ.3ರ ಮೀಸಲಾತಿ ಮಾತ್ರ ಸಿಗುತ್ತಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸದ ಹೊರತು ಕುಲಶಾಸ್ತ್ರ ಅಧ್ಯಯನಕ್ಕೆ ಸರ್ಕಾರ ಮುಂದಾಗಿರುವುದು ನಾಯಕ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ನಾಯಕ ಸಮಾಜವು ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಕೆಲವೆಡೆ ಕುರುಬ ಸಮಾಜದವರು ಸಹ ನಾಯಕ ಸಮಾಜವನ್ನು ಮುಟ್ಟಿಸಿಕೊಳ್ಳದಂತಹ ಅಸ್ಪಶ್ಯತೆ ಆಚರಿಸುತ್ತಿದ್ದಾರೆ. ಈಗಾಗಲೇ ಕುರುಬ ಜನಾಂಗಕ್ಕೆ ಪ್ರವರ್ಗ-2ಎ ಅಡಿಯಲ್ಲಿ ಶೇ.18 ರಷ್ಟು ಮೀಸಲಾತಿ ಇದೆ.
ಹೀಗಿರುವಾಗ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ನಾಯಕ ಸಮಾಜದ ಸ್ವಾಮೀಜಿಗಳು, ರಾಜಕಾರಣಿಗಳು ಮೇಲ್ವರ್ಗದ ಅಡಿಯಾಳಾಗಿರುವುದರಿಂದ ಸಮಾಜಕ್ಕೆ ನ್ಯಾಯ ಕೊಡಿಸಲು ಆಗುತ್ತಿಲ್ಲ. ಆದ್ದರಿಂದ ನಾಯಕ ಸಮಾಜ ಬಾಂಧವರು ರಾಜ್ಯ ಸರ್ಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಬಸವರಾಜಪ್ಪ ಹಾಜರಿದ್ದರು.