ಸೂರಿಗಾಗಿ ಒತ್ತಾಯಿಸಿ ವಸತಿ ಹೀನರ ಪ್ರತಿಭಟನೆ

ದಾವಣಗೆರೆ:

       ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‍ನ ನಿವೇಶನ ರಹಿತರಿಗೆ ಸೂರು ಕಲ್ಪಿಸಬೇಕೆಂದು ಆಗ್ರಹಿಸಿ ಆವರಗೆರೆಯ 23ನೇ ವಾರ್ಡ್‍ನ ಕೊಳೆಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ನಿವೇಶನ ರಹಿತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

       ನಗರದ ಪಿ.ಬಿ. ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಹೊರಟ ಕೊಳೆಗೇರಿ ನಿವಾಸಿಗಳು, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆವರಗೆರೆ ವಾಸು, ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಸಹ ಅಸಂಖ್ಯಾತ ಜನರಿಗೆ ವಾಸಿಸಲು ಸ್ವಂತ ಸೂರಿಲ್ಲದ ಪರಿಸ್ಥಿತಿ ಇದೆ. ನಮ್ಮನ್ನಾಳುವ ಸರ್ಕಾರಗಳ ಪ್ರತಿನಿಧಿಗಳು ಚುನಾವಣೆಯ ಸಂದರ್ಭದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

        ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್ ಸೇರಿದಂತೆ ಇನ್ನಿತರೆ ಬಡಾವಣೆಗಳಲ್ಲಿ ನಿವೇಶನ ರಹಿತ ವಾಸ ಮಾಡುತ್ತಿದ್ದಾರೆ. ಈ ನಿರ್ಗತಿಕರು ನೆಮ್ಮದಿಯಿಂದ ಜೀವನ ಸಾಗಿಸಲು ಸೂರಿನ ವ್ಯವಸ್ಥೆಯನ್ನು ಸಹ ಸರ್ಕಾರ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ಜನ ವಿರೋಧಿ ನೀತಿಗಳಿಂದ ದಿನೇ, ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದಿಂದ ಎಷ್ಟೋ ಜನ ಅಗತ್ಯ ವಸ್ತುಗಳನ್ನು ಖರೀದಿಸಲಾಗದೇ, ಅರೆ ಹೊಟ್ಟೆಯಲ್ಲಿ ಮಲಗುವವರಿದ್ದಾರೆ. ವಾಸ್ತವ ಸ್ಥಿತಿ ಹೀಗಿರುವಾಗ ದುಬಾರಿ ಬಾಡಿಗೆ ತೆತ್ತು ಬಾಡಿಗೆ ಮನೆಯಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ ಎಂದು ದೂರಿದರು.

    ಆವರೆಗೆರೆಯ ಪಿ.ಬಿ. ಬಡಾವಣೆ, ಗೋ ಶಾಲೆ ಹಳ್ಳದ ಪಕ್ಕದ ಗುಡಿಸಲುಗಳ ನಿವಾಸಿಗಳು, ಹರಳಯ್ಯ ನಗರ, ಎಸ್.ಓ.ಜಿ ಕಾಲೋನಿ, ಆಂಜನೇಯ ಮಿಲ್ ಬಡಾವಣೆ, ಶಾಂತಿನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ನಿವೇಶನ ರಹಿತರಿಗೆ ತಕ್ಷಣವೇ ಜಿಲ್ಲಾಡಳಿತ ಮತ್ತು ಸರ್ಕಾರ ಸೂರು ಕಲ್ಪಿಸಬೇಕೆಂದು ಆಗ್ರಹಿಸಿದರು.

     ಪ್ರತಿಭಟನೆಯಲ್ಲಿ ಸಂಘದ ಎಸ್. ಚಂದ್ರಪ್ಪ, ಎ.ತಿಪ್ಪೇಶಿ, ಶಾರದಮ್ಮ, ಮಂಜುನಾಥ್, ರಾಜು ಕೆರೆನಹಳ್ಳಿ, ಪರಮೇಶ್ ಸೇರಿದಂತೆ ವಿವಿಧ ಬಡಾವಣೆಗಳ ನಿರಾಶ್ರಿತರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap