ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಮಿನಿ ವಿಧಾನಸೌಧ

ತುಮಕೂರು

     ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಬೇಕಾದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ತುಮಕೂರು ನಗರದ ಡಿಸಿ ಕಚೇರಿಯು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಕಸದ ಸಮಸ್ಯೆ, ಶೌಚಾಲಯದ ಸಮಸ್ಯೆ, ಸಾರ್ವಜನಿಕ ವಿಶ್ರಾಂತಿಯ ಆಸನಗಳ ಸಮಸ್ಯೆ, ಈ ಸಮಸ್ಯೆಗಳ ಜೊತೆಯಲ್ಲಿ ದ್ವಿಚಕ್ರ ಪಾರ್ಕಿಂಗ್ ಸಮಸ್ಯೆಯಿಂದ ಬಳಲುತ್ತಿದೆ. ಡಿ.ಸಿ ಕಚೇರಿಗೆ ದಿನ ನಿತ್ಯ ಸಾವಿರಾರು ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೂರದ ತಾಲ್ಲೂಕುಗಳಿಂದ ಬರುತ್ತಾರೆ. ಕಚೇರಿಗೆ ಒಂದ ತಕ್ಷಣವೇ ಅವರಿಗೆ ಪಾರ್ಕಿಂಗ್ ಸಮಸ್ಯೆ ಕಾಡುತ್ತದೆ.

      ತುಮಕೂರು ಜಿಲ್ಲಾಧಿಕಾರಿ ಕಚೇರಿಯು ಹೊರಗಿನಿಂದ ನೋಡಲು ತುಂಬಾ ಸ್ವಚಂದವಾಗಿ ಕಂಡುಬಂದರೂ, ಒಳಗೆ ಪ್ರವೇಶ ಮಾಡಿದರೆ ಒಂದೊಂದೆ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಅದರಲ್ಲೂ ಶೌಚಾಲಯ ಮತ್ತು ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ದೂರದೂರುಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಜನಸಾಮಾನ್ಯರು ತಮ್ಮ ಬೈಕ್‍ಗಳನ್ನು ಮರದ ಕೆಳಗೆ ಮತ್ತು ಕಾಂಪೌಂಡ್‍ಗಳ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಇದರಿಂದ ವಾಹನ ದಟ್ಟಣೆಯ ಸಮಸ್ಯೆಯಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದಿರುವುದೇ ಕಾರಣವಾದೆ.

     ಎಲ್ಲೆಂದರಲ್ಲಿ ನಿಂತ ದ್ವಿಚಕ್ರವಾಹನಗಳು: ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿ ಮತ್ತು ಎಡಭಾಗದ ಕಾಂಪೌಂಡ್ ಪಕ್ಕದಲ್ಲಿ ಸಾಲು, ಸಾಲಾಗಿ ದ್ವಿಚಕ್ರವಾಹನಗಳನ್ನು ನಿಲ್ಲಿಸಿರುತ್ತಾರೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ನಿಲ್ಲಿಸದೆ ಮನಬಂದಂತೆ ಪಾರ್ಕಿಂಗ್ ಮಾಡಿರುತ್ತಾರೆ. ಈ ಸಮಸ್ಯೆ ಈ ಜಾಗದಲ್ಲಿ ಮಾತ್ರವಲ್ಲದೆ ಹಿಂಭಾಗದಲ್ಲಿ ಇರುವ ವಿವಿಧ ಇಲಾಖೆಗಳ ಕಚೇರಿಗಳ ಮುಂಭಾಗದಲ್ಲಿಯೂ ಇದೇ ಸಮಸ್ಯೆ ಕಂಡುಬರುತ್ತದೆ.

       ವಾಹನಗಳನ್ನು ಹಿಂತೆಗೆಯಲು ಸವಾರರ ಪರದಾಟ : ಪಾರ್ಕಿಂಗ್ ಮಾಡಿರುವ ಬೈಕ್‍ಗಳನ್ನು ಮರಳಿ ಹಿಂತೆಗೆಯುವಾಗ ದ್ವಿಚಕ್ರ ವಾಹನ ಸವಾರರು ಪಡಿಪಾಟಲು ಪಡುವುದು ಸಾಮಾನ್ಯವಾಗಿದೆ. ಕೆಲವೊಂದು ಬಾರಿ ಪಕ್ಕದಲ್ಲಿರುವ ವಾಹನಗಳ ಮಾಲೀಕರು ಬರುವವರೆಗೂ ಕಾಯುವ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸಬೇಕಾದ ಪರಿಸ್ಥಿತಿಯಿದೆ.

         ಇನ್ನೂ ಮುಕ್ತಿ ಕಾಣದ ಕಸದ ಸಮಸ್ಯೆ : ಮೇ 13 ರಂದು ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಕಸದ ಸಮಸ್ಯೆಯನ್ನು ಕುರಿತು ಪ್ರಜಾಪ್ರಗತಿ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಿತ್ತು. ಇದರ ಫಲವಾಗಿ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದರು. ಆದರೆ ಕಸದ ಸಮಸ್ಯೆಯು ಸಂಪೂರ್ಣವಾಗಿ ಬಗೆಹರಿದಿಲ್ಲ. ಉಪನಿರ್ದೇಶಕರ ಕಚೇರಿಯ ಮುಂಭಾಗದಲ್ಲಿಯೇ ಕಸವನ್ನು ಬಿಡಿಯಾಗಿ ಮತ್ತು ಚೀಲದಲ್ಲಿ ತುಂಬಿ ಎಸೆದಿರುವುದು ಶೋಚನಿಯ ಸಂಗತಿ.

        ಒಡೆದ ಗಾಜುಗಳು ಮತ್ತು ಟ್ಯೂಬ್ ಲೈಟ್‍ಗಳು : ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಕಟ್ಟಡಗಳ ಪಕ್ಕದಲ್ಲಿ ಒಡೆದ ಕಿಟಕಿ ಗಾಜಿನ ಚೂರುಗಳು ಕಂಡು ಬರುತ್ತವೆ ಮತ್ತು ಕಚೇರಿಯ ಎಡಭಾಗದಲ್ಲಿರುವ ಪಡಿತರ ಚೀಟಿ ಕಚೇರಿಯ ಎದಿರು ಭಾಗದಲ್ಲಿರುವ ಜನರೇಟರ್‍ಗಳ ಪಕ್ಕದಲ್ಲಿ ನಿಷ್ಕ್ರಿಯಗೊಂಡ ಟ್ಯೂಬ್ ಲೈಟ್‍ಗಳನ್ನು ಎಸೆಯಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ.

ನಾಮಕಾವಸ್ತೆಯ ಶೌಚಾಲಯಗಳು :

       ಇಲ್ಲಿನ ಶೌಚಾಲಯಗಳು ಬರೀ ಹೆಸರಿಗಷ್ಟೇ ಇವೆ. ಕೆಲವು ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ, ಬಾಗಿಲುಗಳಿದ್ದರೂ ಅವುಗಳಿಗೆ ಕೀಲಿಗಳಿಲ್ಲ ಮತ್ತು ನಲ್ಲಿಗಳ ವ್ಯವಸ್ಥೆಯಿಲ್ಲ. ನಾಮಕಾವಸ್ಥೆಗೆ ಮಾತ್ರ ಇಲ್ಲಿ ಸ್ನಾನ ಗೃಹಗಳಿದ್ದು, ಅವು ಬೂತದ ಕೋಣೆಗಳಾಗಿ ಕಂಡುಬರುತ್ತವೆ. ಮಹಿಳೆಯರ ಶೌಚಾಲಯಗಳಲ್ಲಿ ನಾಲ್ಕು ಶೌಚಾಲಗಳಿದ್ದು ಇವುಗಳಲ್ಲಿ ಒಂದು ಮಾತ್ರ ಬಳಕೆಗೆ ಯೋಗ್ಯವಾದ್ದು, ಅದರಲ್ಲಿಯೂ ನಳದ ಸಮಸ್ಯೆ ಇದೆ. ಶೌಚಾಲಯಗಳ ಸ್ವಚ್ಚತೆಯನ್ನು ನಿಭಾಯಿಸಲು ಯಾವುದೇ ನಿರ್ವಾಹಕರನ್ನು ನೇಮಿಸದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ.

        ಮುಕ್ತಿ ಸಿಗದ ಹಳೆಯ ವಾಹನಗಳು: ಕಚೇರಿಯ ಆವರಣದಲ್ಲಿ ನಾಲ್ಕೈದು ಹಳೆಯ ವಾಹನಗಳಿದ್ದು ಅವುಗಳನ್ನು ಬಳಕೆ ಮಾಡದೆ, ನಿಂತಲ್ಲೇ ನಿಂತು ಹಾಳಾಗಿವೆ. ಇವುಗಳಿಗೆ ಮರುಜೀವವನ್ನು ನೀಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಹಾಳಾಗಿ ಹೋಗಿವೆ. ಈಗಿನ ಅಧಿಕಾರಿಗಳು ಈ ವಾಹನಗಳನ್ನು ಬಳಸದೇ ಇರುವುದೇ ಈ ಸರ್ಕಾರಿ ವಾಹನಗಳು ಮೂಲೆ ಗುಂಪಾಗಲು ಕಾರಣವಾಗಿದೆ.

      ಇನ್ನು ಕಚೇರಿಯ ಒಳಗೆ ಉಪನಿರ್ದೇಶಕರ ಕಚೇರಿಯ ಮುಂಭಾಗದಲ್ಲಿರುವ ಪಾರ್ಕ್‍ನಲ್ಲಿ ಸರಿಯಾದ ಬೆಂಚ್ ವ್ಯವಸ್ಥೆಯಿಲ್ಲ ಮತ್ತು ಎಲ್ಲ್ಲೆಂದರಲ್ಲಿ ಥರ್ಮೊಕೋಲ್‍ಗಳು ಬಿದ್ದಿದ್ದು ಮತ್ತು ಪ್ರಿಂಟಿಂಗ್ ಪೇಪರ್‍ಗಳು ಕಾಣುತ್ತವೆ. ಇವುಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಭಿಲೇಖಾಲಯದ ( ಆಡಿಟಿಂಗ್ ಕಚೇರಿ) ಪಕ್ಕದಲ್ಲಿನ ಕೋಣೆಯಲ್ಲಿ ಕಚೇರಿಯ ತ್ಯಾಜ್ಯಗಳನ್ನು ಎಸೆದಿದ್ದು, ಅದನ್ನು ತೆರವುಗೊಳಿಸಿದರೆ ಆ ಕೋಣೆಯನ್ನು ಬೇರೆ ಯಾವುದಾದರು ಕೆಲಸಕ್ಕೆ ಬಳಸಿಕೊಳ್ಳ ಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap