ವೇಳಾಪಟ್ಟಿಯಂತೆ ಹೇಮಾವತಿ ಹರಿದರೆ ಕೆರೆಗಳು ತುಂಬುವುದಿಲ್ಲ : ಮಾಜಿ ಸಚಿವ

ಶಿರಾ

       ಹೇಮಾವತಿ ನಾಲಾ ವಲಯದಲ್ಲಿ ಸದ್ಯಕ್ಕೆ ಶಿರಾ, ಕಳ್ಳಂಬೆಳ್ಳ ಭಾಗಕ್ಕೆ ಬುಧವಾರದವರೆಗೂ ಕೇವಲ 30 ಕ್ಯುಸೆಕ್ಸ್ ನೀರು ಹರಿಯುತ್ತಿತ್ತು. ಇದೇ ರೀತಿ ವೇಳಾಪಟ್ಟಿಯಂತೆ ನೀರನ್ನು ಹರಿಸಿದರೆ ಶಿರಾ ಭಾಗದ ಯಾವ ಕೆರೆಯನ್ನೂ ತುಂಬಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

       ಗುರುವಾರ ಬೆಳಗ್ಗೆ ಶಿರಾ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಜಲ ಸಂಗ್ರಹಾಗಾರಕ್ಕೆ ಭೇಟಿ ನೀಡಿದ ಜಯಚಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆರಂಭದಲ್ಲಿ ಹೇಮಾವತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸಲಾಯಿತಾದರೂ, ಕಳೆದ 20 ದಿನಗಳಿಂದಲೂ ಅದರ ವೇಗ ತುಂಬಾ ಕಡಿಮೆಯಾಗಿದೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಗುರುವಾರ ಬೆಳಗ್ಗೆಯಿಂದ 30 ಕ್ಯುಸೆಕ್ಸ್‍ನಿಂದ 150 ಕ್ಯುಸೆಕ್ಸ್ ನೀರನ್ನು ಹೆಚ್ಚಿಸುವಂತೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

      ಪ್ರತಿ ವರ್ಷವೂ ಇಷ್ಟು ಹೊತ್ತಿಗೆ ಶಿರಾ ಕಳ್ಳಂಬೆಳ್ಳ ಕೆರೆಗಳು ಭಾಗಶಃ ತುಂಬುತ್ತಿದ್ದವು. ಈ ವರ್ಷ ಶಿರಾ ಕೆರೆಯು ಇನ್ನೂ ಕೂಡ ಅರ್ಧವೂ ತುಂಬಿಲ್ಲ. ಶಿರಾ ಕೆರೆಯ ಬಗ್ಗೆ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಮೊದಲು ಇಂತಹ ಕೆಲಸವನ್ನು ಕೈಬಿಡದಿದ್ದರೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಜನತೆ ಹಿಡಿಶಾಪ ಹಾಕಬೇಕಾಗುತ್ತದೆ ಎಂದರು.

       ಜನತೆಯಿಂದ ಚುನಾಯಿತರಾದವರು ಜನರ ಹಿತದೃಷ್ಟಿಯ ಸಲುವಾಗಿ ಕೆಲಸ ಮಾಡಬೇಕು. ಇನ್ನು ಒಂದು ತಿಂಗಳ ತನಕ ಹೇಮಾವತಿಯ ನೀರು ಹರಿಯುವ ಪ್ರಮಾಣ ಹೆಚ್ಚದಿದ್ದರೆ, ಶಿರಾ ನಗರದ ಜನತೆ ಕುಡಿಯುವ ನೀರಿಗೂ ಹಪಹಪಿಸಬೇಕಾಗುತ್ತದೆ. ಹಾಗಂತ ನಾವು ಸುಮ್ಮನೆ ಕೂರುವುದಿಲ್ಲ. ಅಧಿಕಾರಿಗಳ ಬೆನ್ನು ಹತ್ತಿ ನೀರನ್ನು ಹರಿಸಿಕೊಳ್ಳುವುದು ಖಚಿತ ಎಂದು ಜಯಚಂದ್ರ ತಿಳಿಸಿದರು.

      ನಗರಸಭೆಯ ಮಾಜಿ ಅಧ್ಯಕ್ಷ ಟಿ.ಬಿ.ಜಯಚಂದ್ರ, ನಗರಸಭೆಯ ಆಯುಕ್ತ ಪರಮೇಶ್ವರಪ್ಪ, ಎ.ಇ.ಇ. ಸೇತುರಾಮ್‍ಸಿಂಗ್, ಎ.ಇ. ಮಂಜುನಾಥ್, ಮಹೇಶ್, ರಾಜು, ನೂರುದ್ಧೀನ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link