ಕೊಟ್ಟೂರು
ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ನಂತರ ಇದೀಗ ಹಿಂಗಾರು ಮಳೆ ಭರ್ಜರಿಯಾಗಿ ಕೊಟ್ಟೂರು ತಾಲೂಕಿನಲ್ಲಿ ಸುರಿಯತೊಡಗಿದೆ. ದಿನ ಬಿಟ್ಟು ದಿನ ಎಂಬಂತೆ ಮಳೆ ಸುರಿಯ ತೊಡಗಿದ್ದು ಮಳೆಯಿಂದಾಗಿ ತಾಲೂಕಿನ ಗ್ರಾಮಗಳ ಕೆರೆಗಳು ಗೋಕಟ್ಟೆಗಳು ಮತ್ತು ಹಳ್ಳಗಳು ತುಂಬಿ ತುಳುಕುತ್ತಿವೆ.
ಶುಕ್ರವಾರ ಮದ್ಯರಾತ್ರಿ 12 ಗಂಟೆಗೆ ಮಳೆ ಜೋರಾಗಿ ಬೆಳಗಿನ ಜಾವದವರೆಗೆ ಸುರಿದಿದೆ. ಬಾರಿ ಮಳೆಯಿಂದಾಗಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿ ವಡ್ಡರಹಳ್ಳ ಪ್ರವಾಹಯೋಪಾದಿಯಲ್ಲಿ ನೀರು ಹರಿಯತೊಡಗಿದ್ದು ರಸ್ತೆ ಮೇಲೆ ನೀರು ಹೆಚ್ಚಾಗಿ ಹರಿದಿದ್ದರಿಂದ ಕೆಲಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತು. ಇದೇರೀತಿ ಪಟ್ಟಣದ ಇಟಿಗಿ ರಸ್ತೆಯ ರೈಲ್ವೆ ಸೇತುವೆ ಕೆಳಬಾಗ ಸಂಪೂರ್ಣ ಜಲಾವೃತಗೊಂಡಿತಲ್ಲದೆ ವಾಹನ ಸವಾರರು ಭಾರಿ ನೀರಿನ ತೊಂದರೆಯಲ್ಲಿ ಸಂಚಾರವನ್ನು ಕೈಗೊಳ್ಳಲು ಮುಂದಾದರು.
ಇಟಿಗಿ ರಸ್ತೆಯ ಕೆಲ ಗ್ಯಾರೇಜ್‍ಗಳಿಗೆ ನೀರು ನುಗಿದ್ದು ಗ್ಯಾರೇಜ್‍ನಲ್ಲಿ ಕೆಲಸ ನಿರ್ವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ದೂಪದಹಳ್ಳಿ ಸಮೀಪದ ಕೊನಾಪುರ ಹಳ್ಳ 10 ವರ್ಷಗಳ ನಂತರ ಭಾರಿ ಮಳೆಯಿಂದಾಗಿ ತುಂಬಿ ತುಳುಕುತ್ತಿದೆ.
ರಾಂಪುರ ಮತ್ತಿತರ ಕಡೆಗಳಲ್ಲಿ ರಾತ್ರಿ ಇಡಿ ಮಳೆಸುರಿದಿದ್ದು ರಾಂಪುರ ಹಳ್ಳದ ಮೂಲಕ ಕೊಟ್ಟೂರು ಕೆರೆಗೆ ಸಾಕಷ್ಟು ಪ್ರಮಾಣದ ನೀರು ಹರಿದು ಬರತೊಡಗಿದೆ. ಮೊನ್ನೆಯ ಮಳೆಗೆ ಅಲ್ಪ ಪ್ರಮಾಣದ ಕೊಟ್ಟೂರು ಕೆರೆಗೆ ನೀರು ಬಂದಿತು. ಶುಕ್ರವಾರ ರಾತ್ರಿ ಸುರಿದ ಮಳೆ ಕೆರೆಗೆ ಯಥೇಚ್ಚವಾಗಿ ನೀರು ಸಂಗ್ರಹಗೊಳ್ಳುವಂತಾಗಿದೆ.
ಕಳೆದ ವರ್ಷದಷ್ಟೇ ನೀರು ಇದೀಗ ಕೊಟ್ಟೂರು ಕೆರೆಯಲ್ಲಿ ಸಂಗ್ರಹಗೊಂಡಿದ್ದು ಮುಂದಿನ ದಿನಗಳಲ್ಲಿ ಮತ್ತೆ ಜೋರಾದ ಮಳೆ, ಹಳ್ಳ ಹರಿದರೆ ಕೊಟ್ಟೂರು ಕರೆಗೆ ಕೋಡಿಬೀಳುವ ಸಾಧ್ಯತೆ ದಟ್ಟವಾಗಿದೆ.