ಬಳ್ಳಾರಿ
ಜಿಲ್ಲೆಯ 87 ಸಾವಿರ ರೈತರಿಗೆ ಕಮರ್ಷಿಯಲ್ ಬ್ಯಾಂಕ್‍ನಿಂದ ರೂ.2ಲಕ್ಷ ಸಾಲ. 70050 ಜನ ರೈತರಿಗೆ ಕೋ ಆಪ್‍ರೇಟಿವ್ ಬ್ಯಾಂಕ್ ನಿಂದ ರೈತರಿಗೆ ರೂ.1ಲಕ್ಷ ಸಾಲ ಮನ್ನಾ ಕಾರ್ಯ ಪ್ರಗತಿಯಲ್ಲಿದೆ. ಇದರ ಪ್ರಯೋಜನವನ್ನು ಬಳ್ಳಾರಿ ಜಿಲ್ಲೆಯಲ್ಲಿ 1.57ಲಕ್ಷ ಜನ ರೈತರು ಪಡೆದುಕೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವದ ಧ್ವಜಾರೋಹಣದ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಈ ಉದ್ದೇಶಕ್ಕೆ 75.05 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ತುಕಾರಾಂ ಅವರು, 619 ಸದಸ್ಯರಿಗೆ ರೂ.19.26 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಮೂರು ತಿಂಗಳ ಅವಧಿಗೆ ಸಾಲ ಮಂಜೂರು ಮಾಡಲಾಗಿದೆ ಎಂದರು.
ಭಾರತ ಸಂವಿಧಾನದ ಅನುಚ್ಛೇದ 371ಜೆ ಅನುಷ್ಠಾನ ಹಿನ್ನಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರ ಪ್ರಸ್ತಾವನೆಯನ್ನು ಪಡೆದು 2018-19ನೇ ಸಾಲಿನಲ್ಲಿ ಮೈಕ್ರೋ ಯೋಜನೆಯಡಿ ರೂ.21082.17 ಲಕ್ಷಗಳನ್ನು ನಿಗಧಿಪಡಿಸಿ ರೂ.18963.85 ಲಕ್ಷಗಳಿಗೆ ಅನುಮೋದನೆ ನೀಡಿರುತ್ತಾರೆ. ಮ್ಯಾಕ್ರೋ ಯೋಜನೆಯಡಿ ರೂ.9035.21 ಲಕ್ಷಗಳನ್ನು ನಿಗಧಿಪಡಿಸಿ ರೂ.4007.33 ಲಕ್ಷಗಳಿಗೆ ಅನುಮೋದನೆ ನೀಡಿರುತ್ತಾರೆ. ಈಗಾಗಲೇ ಅನುಮೋದನೆ ನೀಡಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ವಿವರಿಸಿದರು.
ಬಳ್ಳಾರಿ ಜಿಲ್ಲೆಯ ಗಣಿ ಭಾದಿತ ಪ್ರದೇಶಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ ಮುಂದಿನ 3 ವರ್ಷಗಳಿಗೆ ಒಟ್ಟು ರೂ.765 ಕೋಟಿ ಗಳನ್ನು ನಿಗಧಿಪಡಿಸಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಸಂಬಂಧಪಟ್ಟ ಕ್ಷೇತ್ರದ ಜನಪ್ರತಿನಿಧಿಗಳಿಂದ ಸಮಾಲೋಚಿಸಿ ಅಭಿವೃದ್ದಿಯನ್ನು ಕೈಗೊಳ್ಳಲಾಗುವುದು ಎಂದರು.
ಗಣಿ ಭಾದಿತ ಪ್ರದೇಶ ಅಭಿವೃದ್ದಿ ಯೋಜನೆಯಡಿ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ರೂ.13ಸಾವಿರ ಕೋಟಿ ಅನುದಾನವನ್ನು ಸಿ.ಇ.ಸಿ ಗೆ ಸಲ್ಲಿಸಿದ್ದು, ಅನುಮೋದನೆಯ ನಿರೀಕ್ಷಣೆಯಲ್ಲಿದೆ ಎಂದು ತಿಳಿಸಿದ ಸಚಿವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಸಮಾಲೋಚಿಸಿ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ಶಾಶ್ವತ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ, ಆರೋಗ್ಯ ಕ್ಷೇತ್ರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ, ವಸತಿಯೋಜನೆ, ಪ್ರವಾಸೋದ್ಯಮ ಅಭಿವೃದ್ದಿಗೆ, ನೀರಾವರಿ ಯೋಜನೆಗೆ, ರಸ್ತೆ ಮತ್ತು ಸಂರ್ಪಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಲಾಗುವುದು ಎಂದರು.
ಬಳ್ಳಾರಿ ವಿಮ್ಸ್ ಆಸ್ಪತ್ರೆಯನ್ನು ಹಾಸಿಗೆಗಳ ಸಾಮಥ್ರ್ಯಕ್ಕೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಂಡಿದ್ದು, ಇದಕ್ಕೆ ರೂ.200 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ ಸಚಿವ ತುಕಾರಾಂ ಅವರು, ಬಳ್ಳಾರಿ ನಗರಕ್ಕೆ ತುಂಗಭದ್ರಾ ಡ್ಯಾಂನಿಂದ ನೇರವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆಯನ್ನು ರೂಪಿಸಲಾಗಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯ ರಸ್ತೆಗಳು ಸೇರಿದಂತೆ ವಿಶೇಷ ಅಭಿವೃದ್ಧಿ ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪ ಯೋಜನೆ ಹಾಗೂ ಮುಖ್ಯಮಂತ್ರಿಗಳ ಗ್ರಾಮ ರಸ್ತೆ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಅನುಷ್ಟಾನಗೊಳಿಸಲಾಗುವುದು ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯು 12ನೇ ಸ್ಥಾನಕ್ಕೆ ಮುಂಚಣೆಯಲ್ಲಿದೆ. ವಿದ್ಯಾರ್ಥಿಗಳ ಬೆಳಕು ಯೋಜನೆಯಡಿ ವಾರ್ಷಿಕ ರೂ.4ಸಾವಿರಗಳ ಶಿಷ್ಯವೇತನವನ್ನು ನೀಡಲಾಗುತ್ತಿದೆ. ಶಾಲಾ ಕಾಲೇಜು, ಐಟಿಐ, ಡಿಪ್ಲೊಮಾ ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಮಗ್ರ ಅಭಿವೃದ್ದಿಯನ್ನು ಮಾಡಲಾಗುವುದು. ನೀರಾವರಿ ಕ್ಷೇತ್ರದಲ್ಲಿ ಹೆಚ್.ಎಲ್.ಸಿ ಮತ್ತು ಎಲ್.ಎಲ್.ಸಿ ಕ್ಯಾನಲ್‍ಗಳ ಪೂರ್ವ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಗಣಿಭಾದಿತ ಪ್ರದೇಶದ ಸುಮಾರು 40 ಸಾವಿರ ಬಡ ಕುಟುಂಬದವರಿಗೆ ಮನೆಯನ್ನು ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಸಂಡೂರಿನಲ್ಲಿ ಮೆಡಿಕಲ್ ಕಾಲೇಜ್ ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‍ಗಳನ್ನು ಪ್ರಾರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಸಂದೇಶ ನೀಡುವುದಕ್ಕಿಂತ ಮುಂಚೆ ಸಚಿವ ತುಕಾರಾಂ ಅವರು 43 ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.ನಂತರ ನಡೆದ ಸಾಂಸ್ಕತಿಕ ಕಾರ್ಯಕ್ರಮಗಳು ಗಮನಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಸೊಮಶೇಖರರೆಡ್ಡಿ, ಕೆ.ಸಿ.ಕೊಂಡಯ್ಯ, ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಮೇಯರ್ ಸುಶೀಲಾಬಾಯಿ, ಉಪಮೇಯರ್ ದಿವ್ಯಕುಮಾರಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ