ಹೊಳಲ್ಕೆರೆ :
ತಾಲೂಕಿನ ರಾಮಗಿರಿ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಪವಾಡ ಪುರುಷ ಶ್ರೀ ಕರಿಸಿದ್ದೇಶ್ವರಸ್ವಾಮಿಯ ಕಡೇ ಕಾರ್ತಿಕೋತ್ಸವ ಹಾಗೂ ಲಕ್ಷ ದೀಪೋತ್ಸವ ಡಿ.24 ರಂದು ನಡೆಯಲಿದ್ದು, ಮುಜುರಾಯಿ ಇಲಾಖೆ ಹಾಗೂ ಗ್ರಾಮಸ್ಥರಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಲಕ್ಷ ದೀಪೋತ್ಸವಕ್ಕೆ ಬೆಟ್ಟದಲ್ಲಿ ಹಾಗೂ ಗ್ರಾಮದ ರಾಜ ಬೀದಿಯಲ್ಲಿ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತಿದೆ.
ಬಟ್ಟೆ ದೀಪದ ವಿಶೇಷ :
ಕಾರ್ತಿಕ ಮಹೋತ್ಸವಕ್ಕೆ ಒಂದು ತಿಂಗಳ ಹಿಂದಿನಿದಂಲೇ ಭಕ್ತರು ಕಾಟನ್ ಬಟ್ಟೆಯಿಂದ ಸಿಂಬೆ ಸುತ್ತಿ ತಯಾರಿಸಲಾದ ದೀಪ (ಪತ್ತು)ಗಳನ್ನು ಹರಳೆಣ್ಣೆಯಲ್ಲಿ ನೆನೆಹಾಕಿ ತಂದು, ಬೆಟ್ಟದ ತುಂಬೆಲ್ಲ ಹಾಗೂ ಬೆಟ್ಟ ಹತ್ತುವ ಮೆಟ್ಟಿಲುಗಳ ಎರಡು ಬದಿಗಳಲ್ಲಿ ಭಕ್ತರು ಹಚ್ಚುವುದು ವಿಶೇಷ.
ರಾಮಗಿರಿ ಪುರಾಣ ಪ್ರಸಿದ್ದಿ :
ಇತಿಹಾಸ ಪ್ರಸಿದ್ದವಾಗಿರುವ ರಾಮಗಿರಿ ಹಿಂದೆ ಪಾಳೇಗಾರರ ಆಡಳಿತ ಕೇಂದ್ರವಾಗಿತ್ತು. ಶತೃಗಳಿಂದ ಸುಂದರ ಬೆಟ್ಟವನ್ನು ರಕ್ಷಿಸಲೆಂದು ಚಿತ್ರದುರ್ಗದ ಭರಮಣ್ಣನಾಯ್ಕ ಇಲ್ಲೊಂದು ಕೋಟೆ ನಿರ್ಮಿಸಿ ಇಲ್ಲಿಗೆ ಪಾಳೇಗಾರರು, ದಳವಾಯಿಗಳನ್ನು ನೇಮಿಸಿದ್ದರು. ಈಗ ಕೋಟೆ ಶಿತಿಲಗೊಂಡಿದೆ. ಈಗಲೂ ಗ್ರಾಮದಲ್ಲಿ ಪಾಳೇಗಾರರ, ದಳವಾಯಿಗಳ ವಂಶಸ್ಥರನ್ನು ಕಾಣಬಹುದು.
21 ದೇವಾಲಯಗಳ ತಾಣ:
ಶ್ರೀ ಕ್ಷೇತ್ರದಲ್ಲಿ 21 ದೇವಸ್ಥಾನ, ವಿರಕ್ತಮಠ, ಮರಿದೇವರಮಠ, ಚರಂತ ದೇವರ ಮಠಗಳಿವೆ. ಸುಮಾರು 323 ಮೆಟ್ಟಿಲುಗಳಿದ್ದು ಹತ್ತುವುದು ತುಂಬಾ ಸುಲಭ, ಗಣೇಶನ ದೊಡ್ಡ ವಿಗ್ರಹ, ಶ್ರೀ ಬೈರಸಿದ್ದೇಶ್ವರಸ್ವಾಮಿಯ ಗುಹೆ. ಉದ್ಬವಲಿಂಗ, ಶ್ರೀ ವೀರಭದ್ರೇಶ್ವರಸ್ವಾಮಿ, ಪಾತಾಳಗಂಗೆ (ಗಂಗಮ್ಮನ) ಬಾವಿ, ಇದು ಕಾಶಿಯಿಂದ ಇಲ್ಲಿಗೆ ಸಂಪರ್ಕ ಹೊಂದಿದೆ ಎಂಬ ನಂಬಿಕೆ ಇದೆ.
ಮಳೆಗಾಲದಲ್ಲಿ ನೀರು ಕೆಳಗೆ ಹೋಗುವುದು, ಬೇಸಿಗೆಯಲ್ಲಿ ಮೇಲೆ ಬರುವುದು ಇಲ್ಲಿನ ವಿಶೇಷ. ಚೌಡೇಶ್ವರಿ ದೇವಾಲಯ, ಸುಂದರ ನಾಗರ ವಿಗ್ರಹಗಳು, ಪುರಾತನವಾದ ದೀಪಸ್ಥಂಭ, ಬೆಟ್ಟದ ತುತ್ತ ತುದಿಯಲ್ಲಿ ಉದ್ಬವ ಲಿಂಗವಿದೆ. ಬಸವೇಶ್ವರ ದೇವಾಲಯವಿದೆ.
ಬಾಳೆ ದಿಂಡಿನ (ಕದಲಿ) ಮಂಟಪ:
ಕಾರ್ತಿಕೋತ್ಸವ ದಿನದಂದು ಶ್ರೀ ಕರಿಸಿದ್ದೇಶ್ವರಸ್ವಾಮಿ, ಶೀ ಆಂಜನೇಯಸ್ವಾಮಿ, ಶ್ರೀ ಕರಿಯಮ್ಮ ದೇವರುಗಳನ್ನು ಚರಂತ ಮಠದ ಮುಂಬಾಗದಲ್ಲಿ ಅಲಂಕೃತಗೊಂಡ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮಂಟಪದ ನಿರ್ಮಾಣಕ್ಕೆ ಬಾಳೆಯ ದಿಂಡು, ವೀಳ್ಯದ ಎಲೆ, ಮತ್ತು ವಿವಿಧ ಬಗೆಯ ಸುವಾಸನೆಯುಕ್ತ ಹೂವು ಬಳಸಲಾಗುತ್ತದೆ. ಕದಲಿ ಮಂಟಪದ ಮರದ ಟೀರುಗಳು ಶಿತಿಲಾವಸ್ಥೆಯಾಗಿದ್ದ ಕಾರಣ ಈ ಬಾರಿ ನೂತನ ಟೀರುಗಳ ಬಳಕೆ ಮಾಡಿ ಮಂಟಪ ತಯಾರಿಸಲಾಗಿದೆ.
ಬಾಳೆಹಣ್ಣಿನ ಪರಿಷೆ :
ಕಾರ್ತಿಕೊತ್ಸವಕ್ಕೆ ಬರುವ ಭಕ್ತರು ಬಾಳೆಹಣ್ಣಿನ ರೂಪದಲ್ಲಿ ಹರಕೆ ತೀರಿಸುವರು. ಹಾಗಾಗಿ ಭಕ್ತರಿಗೆ ಅನುಕೂಲವಾಗಲೆಂದು ಬಾಳೆ ಹಣ್ಣಿನ ಪರಿಷೆ ಏರ್ಪಡಿಸಲಾಗುತ್ತದೆ. ಅನೇಕ ವ್ಯಾಪಾರಿಗಳು ಲೋಡ್ ಗಟ್ಟಲೆ ಬಾಳೆಹಣ್ಣನ್ನು ತಂದು ಮಾರಾಟ ಮಾಡುತ್ತಾರೆ.
ಭಕ್ತರು ತಂದಂತಹ ಬಾಳೆಹಣ್ಣುಗಳನ್ನು ಬೆಟ್ಟದ ಮುಂಭಾಗದ ದ್ವಾರಬಾಗಿಲ ಬಳಿ ದೊಡ್ಡ ರಾಶಿ ಹಾಕಿ ವಿಶೇಷ ಪೂಜೆ ಸಲ್ಲಿಸುವರು. ಇದು ಕಾರ್ತೀಕ ದಿನದ ಮರುದಿನ ಡಿ.25ರ ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿನಲ್ಲಿ ನಡೆಯುವುದು. ನಂತರ ಭಕ್ತರಿಗೆ ಪ್ರಸಾದವಾಗಿ ಹಂಚಲಾಗುವುದು.
ಕಾರ್ತಿಕೋತ್ಸವದ ಅಂಗವಾಗಿ ಬೆಟ್ಟದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವವು, ಲಕ್ಷ ದೀಪೋತ್ಸವದ ಜೊತೆಗೆ ಹೂವಿನ ಉತ್ಸವ, ಕದಳಿಸೇವೆ, ಪಲ್ಲಕ್ಕಿ ಉತ್ಸವ, ವೀರಗಾಸೆ, ಭಜನೆ ಕಾರ್ಯಕ್ರಮಗಳು ಜರುಗುವುವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
