236 ಸರ್ಕಾರಿ ಶಾಲೆಗಳ ಜಮೀನು ನೊಂದಣಿ ಆಗೇ ಇಲ್ಲ
ತುಮಕೂರು
ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳ ಜಾಗ, ಕಟ್ಟಡಗಳು ಶಾಲೆಗಳ ಹೆಸರಿಗೆ ನೊಂದಣಿ ಆಗಿಲ್ಲ. ಶಾಲಾ ಮೈದಾನದ ಗಡಿ ಗುರುತಿಸುವ ಕೆಲಸ ಆಗಿಲ್ಲ. ಬಹತೇಕ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲಾಗಿದೆಯಾದರೂ ನಿರ್ಧಿಷ್ಟ ಗಡಿ ಗುರುತಿಸುವ ಕೆಲಸವಾಗಿಲ್ಲ. ಹೀಗಾಗಿ ಅನೇಕ ಕಡೆ ಸರ್ಕಾರಿ ಶಾಲೆಗಳ ಜಾಗ ಅತಿಕ್ರಮ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಹಳ್ಳಿಯಲ್ಲಿ ಶಾಲೆ ಸ್ಥಾಪನೆಯಾಗಿ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಹತ್ತಾರು ವರ್ಷಗಳ ಹಿಂದೆ ದಾನಿಗಳು ಶಾಲೆಗಾಗಿ ಜಮೀನು ದಾನ ನೀಡಿ ನೆರವಾಗಿದ್ದರು. ಊರಿನ ಪ್ರಮುಖ ರಸ್ತೆ ಪಕ್ಕದಲ್ಲೇ ಜಮೀನು ದೊರೆತು ಶಾಲೆಗಳು ಸ್ಥಾಪನೆಯಾಗಿ ಹಲವಾರು ದಶಕಗಳಿಂದ ಶಿಕ್ಷಣ ಸೇವೆ ನೀಡುತ್ತಾ ಬರುತ್ತಿವೆ. ಈಗ ಹಳ್ಳಿಗಳಲ್ಲೂ ಭೂಮಿ ಮೌಲ್ಯ ಹೆಚ್ಚಾಗಿದೆ. ಸಣ್ನದೊಂದು ನಿವೇಶನಕ್ಕೂ ಲಕ್ಷಾಂತರ ರೂ ಬೆಲೆ ಬಂದಿದೆ. ಈ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲಾ ಸರ್ಕಾರಿ ಶಾಲೆಗಳ ಜಮೀನು, ಕಟ್ಟಡಗಳನ್ನು ಶಾಲೆಗಳ ಹೆಸರಿಗೆ ನೊಂದಣಿ ಮಾಡಿಸುವಂತೆ ಆದೇಶ ಮಾಡಿದ್ದಾರೆ.
ಕೆಲವು ಊರುಗಳಲ್ಲಿ, ಶಾಲೆಗೆ ನೀಡಿರುವ ಜಮೀನನ್ನು ತಮಗೆ ಬಿಟ್ಟುಕೊಡಿ ಎಂದು ಜಾಗದ ದಾನಿಗಳ ಸಂಬಂಧಿಗಳು ಎಷ್ಟೋ ವರ್ಷಗಳ ನಂತರ ತಕರಾರು ತೆಗೆದಿದ್ದಾರೆ. ಶಾಲೆಯ ಜಮೀನಿಗೆ ಪರ್ಯಾಯವಾಗಿ ಬೇರೆ ಕಡೆ ಜಾಗ ಕೊಡುವುದಾಗಿಯೂ ಹೇಳುತ್ತಿದ್ದಾರೆ. ಒಂದೆರಡು ಪ್ರಕರಣ ನ್ಯಾಯಲದ ಮೆಟ್ಟಿಲೇರಿವೆ. ಮುಂದೆಯೂ ಇಂತಹ ವಿವಾದಗಳು ಹೆಚ್ಚಾಗಬಹುದು, ಈ ಕಾರಣಕ್ಕೆ ಶಿಕ್ಷಣ ಇಲಾಖೆ ಕೂಡಲೇ ಎಲ್ಲಾ ಶಾಲೆಗಳ ಜಮೀನನ್ನು ಶಾಲೆಗಳ ಹೆಸರಿಗೆ ನೊಂದಣಿ ಮಾಡಿಸುವಂತೆ ಚಿಕ್ಕತೊಟ್ಲು ಕೆರೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಟಿ. ಕೆ. ಲಕ್ಷ್ಮೀನರಸಯ್ಯ ಒತ್ತಾಯ ಮಾಡಿದ್ದಾರೆ. ಬಗ್ಗೆ ಇವರು ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಸಭೆಗಳಲ್ಲಿ ಪ್ರಸ್ತಾಪ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 421 ಶಾಲೆಗಳಿಗೆ ದಾನಿಗಳು ಜಮೀನು ದಾನ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 118 ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ 159 ಸರ್ಕಾರಿ ಶಾಲೆಗಳಿಗೆ ದಾನಿಗಳು ಜಮೀನು ದಾನ ಮಾಡಿ ನೆರವಾಗಿದ್ದಾರೆ. ಅತಿ ಕಡಿಮೆ ಎಂದರೆ ಕುಣಿಗಲ್ ತಾ.ನ 15, ತುರುವೇಕೆರೆ ತಾ.ನ 32 ಸರ್ಕಾರಿ ಶಾಲೆಗಳ ಜಮೀನು ದಾನರೂಪದಲ್ಲಿ ದೊರಕಿದೆ.
ಜಿಲ್ಲೆಯ 421 ಶಾಲೆಗಳ ದಾನದ ಜಮೀನಿನ ಪೈಕಿ 185 ಶಾಲೆಗಳ ಹೆಸರಿಗೆ ಜಾಗದ ಖಾತೆÀ ನೊಂದಣಿಯಾಗಿವೆ, ಉಳಿದ 236 ಶಾಲೆಗಳ ಜಮೀನು ನೊಂದಣಿ ಆಗದೇ ಉಳಿದಿವೆ. ಇದರಲ್ಲಿ 185 ಕಿರಿಯ ಪ್ರಾಥಮಿಕ ಶಾಲೆಗಳು, 86 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 6 ಪ್ರೌಢ ಶಾಲೆಗಳು ಸೇರಿವೆ.
ತಹಶೀಲ್ದಾರ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಒಟ್ಟಾಗಿ ಅದಾಲತ್ ರೀತಿ ಸರ್ಕಾರಿ ಶಾಲೆಗಳ ಜಮೀನು ಅಳತೆ ಮಾಡಿ, ಗಡಿ ಗುರುತು ಮಾಡಿ ಶಾಲೆಗಳ ಹೆಸರಿಗೆ ಖಾತೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಟಿ. ಕೆ. ಲಕ್ಷ್ಮೀನರಸಯ್ಯ ಹೇಳಿದ್ದಾರೆ.
ಇಲಾಖೆ ಆಯುಕ್ತರ ಆದೇಶದನ್ವಯ ಶಾಲೆಗಳ ಆಸ್ತಿಯನ್ನು ಆಯಾ ಶಾಲೆಗಳ ಹೆಸರಿಗೆ ನೊಂದಣಿ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಶಾಲೆಗಳ ಆಸ್ತಿ ನೊಂದಾವಣೆ ಮಾಡಿಸಿ ವರದಿ ನೀಡುವಂತೆ ಎಲ್ಲಾ ಬಿಇಓಗಳಿಗೆ ಸೂಚನೆ ನೀಡಿ ಪತ್ರ ಬರೆದಿರುವುದಾಗಿ ಡಿಡಿಪಿಐ ಎಂ. ಆರ್. ಕಾಮಾಕ್ಷಿ ಹೇಳಿದರು.
ಒಂದೆರಡು ಶಾಲೆಗಳ ಜಮೀನು ತಕರಾರಿನಲ್ಲಿವೆ. ಉಳಿದ ಶಾಲೆಗಳ ಜಾಗದ ವಿಚಾರವಾಗಿ ಯಾವುದೇ ತಕರಾರಿಲ್ಲ. ಆದರೂ ಶಾಲೆ ಆಸ್ತಿ ನೊಂದಣಿ ಮಾಡಿಸಿ, ರಕ್ಷಣೆ ಮಾಡಬೇಕಾಗಿದೆ. ಕಳೆದ ಮೂರು ವರ್ಷದಿಂದ ನೊಂದಣಿ ಕಾರ್ಯ ಮಾಡಲಾಗುತ್ತಿದೆ. ಬಾಕಿ ಇರುವ 236 ಶಾಲೆಗಳ ಜಮೀನನ್ನು ಶೀಘ್ರವಾಗಿ ಶಾಲೆಗಳ ಹೆಸರಿಗೆ ಖಾತೆ ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ