ಚಿತ್ರದುರ್ಗ : ಜಿಲ್ಲೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಸೆ.1 ಕಡೆ ದಿನ.!

ಚಿತ್ರದುರ್ಗ :
    ಸರ್ಕಾರ ಈಗಾಗಲೆ ಪ್ಲಾಸ್ಟಿಕ್ ನಿಷೇಧಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ಸೆಪ್ಟಂಬರ್ 01 ರ ಗಡುವು ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ನ್ಯಾ. ಸುಭಾಷ್ ಬಿ ಆಡಿ ಅವರು ಹೇಳಿದರು.
   
   ಘನತ್ಯಾಜ್ಯ ಅಧಿನಿಯಮಗಳು 2016 ರ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಈಗಾಗಲೆ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.   ಜಿಲ್ಲಾದ್ಯಂತ ಸೆಪ್ಟಂಬರ್ 1 ರೊಳಗೆ ಪ್ಲಾಸ್ಟಿಕ್ ನಿರ್ಮೂಲನೆ ಆಗಬೇಕು. ಪ್ಲಾಸ್ಟಿಕ್ ಚೀಲ ಮಾರಾಟ ಮಾಡುವವರಿಗೆ ಹಾಗೂ ಬಳಸುವವರಿಗೆ ಸ್ಥಳದಲ್ಲೇ ದಂಡವಿಧಿಸಿಸಬೇಕು. ಜನರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸಬೇಕು ಎಂದು ನ್ಯಾ. ಸುಭಾಷ್ ಆಡಿ ಅವರು ಸೂಚನೆ ನೀಡಿದರು.
  ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ಈಗಾಗಲೆ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಳಿಗೆಗಳು, ಅಂಗಡಿಗಳ ಮೇಲೆ ದಾಳಿ ಪ್ರಕರಣಗಳನ್ನು ಹೆಚ್ಚಿಸಲಾಗಿದ್ದು, ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತಿದೆ.  ಜಿಲ್ಲೆಯಲ್ಲಿ ಕಸದಲ್ಲಿ ಪ್ಲಾಸ್ಟಿಕ್ ನಾಪತ್ತೆಯಾಗುವವರೆಗೂ ನಾವು ಪ್ಲಾಸ್ಟಿಕ್ ಅಂಗಡಿಗಳು, ಇತರೆ ಮಳಿಗೆಗಳ ಮೇಲೆ ದಾಳಿ ನಡೆಸುತ್ತೇವೆ ಎಂದರು. 
 ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸುಭಾಷ್ ಆಡಿ ಅವರು, ಪ್ಲಾಸ್ಟಿಕ್ ಕವರ್ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ ಕೇವಲ ದಂಡ ವಿಧಿಸಿದರೆ ಸಾಲದು, ಅಂತಹವರ ಮೇಲೆ ಕಾನೂನು ರೀತ್ಯ ಕೇಸ್ ದಾಖಲಿಸಿ, ಉದ್ದಿಮೆ ಪರವಾನಿಗೆ ರದ್ದುಪಡಿಸಬೇಕು.  ಅಲ್ಲದೆ ಅಧಿಕ ಮೊತ್ತದ ದಂಡ ವಿಧಿಸಬೇಕು.    ಪ್ಲಾಸ್ಟಿಕ್ ಚೀಲ ಬಳಕೆ ಮಾಡುವವರ ವಿರುದ್ಧವೂ ದಂಡ ವಿಧಿಸಬೇಕು. ದಂಡ ವಸೂಲಿ ಕಾರ್ಯ ಪಾರದರ್ಶಕವಾಗಿರಬೇಕು ಹಾಗೂ ಲೆಕ್ಕ ಪಕ್ಕಾ ಇರಬೇಕು ಎಂದರು
 ಎಲ್ಲಿಯವರೆಗೆ ದಂಡ ವಿಧಿಸಿ, ಚುರುಕು ಮುಟ್ಟಿಸುವುದಿಲ್ಲವೋ, ಅಲ್ಲಿಯವರೆಗೂ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಿ ಜಾರಿಗೆ ತರಲು ಕಷ್ಟ ಸಾಧ್ಯ. ದಂಡ ಪಾವತಿಸುವವರೆಗೂ ಜನರು ಜಾಗೃತರಾಗುವುದಿಲ್ಲ.  ಆನ್‍ಲೈನ್‍ನಿಂದ ಕೊರಿಯರ್ ಮೂಲಕ ಬರುವ ಸಾಮಗ್ರಿಯನ್ನು ಪ್ಲಾಸ್ಟಿಕ್ ಕವರ್‍ನಿಂದ ಪ್ಯಾಕ್ ಮಾಡಿರುತ್ತಾರೆ.  ಇದನ್ನೂ ಕೂಡ ನಿಷೇಧಿಸಬೇಕು,  ಆನ್‍ಲೈನ್ ಕಂಪನಿ ಹಾಗೂ ಕೊರಿಯರ್‍ನವರಿಗೂ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.
ದೇವಾಲಯಗಳಲ್ಲೂ ಪ್ಲಾಸ್ಟಿಕ್ ನಿಷೇಧ 
  ಜಿಲ್ಲೆಯ ದೇವಾಲಯಗಳಿಗೆ ಭಕ್ತಾದಿಗಳು ಪೂಜಾ ಸಾಮಗ್ರಿಯನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ತರುವ ಪರಿಪಾಠವಿದೆ.  ಮುಜರಾಯಿ ದೇವಾಲಯಗಳ ಆವರಣದಲ್ಲಿಯೂ ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಕೊಡುತ್ತಾರೆ.  ಹೀಗಾಗಿ ಜಿಲ್ಲೆಯ ಎಲ್ಲ ದೇವಸ್ಥಾನಗಳ ಆವರಣ ಹಾಗೂ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್ ನಿಷೇಧಿಸಬೇಕು.  ಒಂದು ವೇಳೆ ಪ್ಲಾಸ್ಟಿಕ್ ಕವರ್‍ನಲ್ಲಿ ಪೂಜಾ ಸಾಮಗ್ರಿ ತಂದಲ್ಲಿ, ಅರ್ಚಕರು ಅಂತಹ ಭಕ್ತರಿಗೆ ಮನ್ನಣೆ ನೀಡಬಾರದು.  ಬಟ್ಟೆ ಚೀಲ ಬಳಕೆಗೆ ಉತ್ತೇಜನ ನೀಡಬೇಕು ಎಂದು ನ್ಯಾ. ಸುಭಾಷ್ ಆಡಿ ಅವರು ತಾಕೀತು ಮಾಡಿದರು. 
ಕಸ ವಿಂಗಡಿಸಿಯೇ ಪಡೆಯಿರಿ
   ಜಿಲ್ಲೆಯಲ್ಲಿ ಮನೆ ಮನೆಯಿಂದ ಕಸವನ್ನು ಸಂಗ್ರಹಿಸಲು ಆಯಾ ಸ್ಥಳೀಯ ಸಂಸ್ಥೆಗಳು ವಾಹನಗಳ ವ್ಯವಸ್ಥೆ ಮಾಡಿಕೊಂಡಿರುವುದು ಸರಿಯಷ್ಟೆ.  ಆದರೆ ಜನರಿಗೆ ಒಣ ಕಸ ಮತ್ತು ಹಸಿ ಕಸವನ್ನು ಮನೆಗಳಲ್ಲಿಯೇ ವಿಂಗಡಿಸಿ ನೀಡುವ ಕುರಿತು ಅರಿವು ಮೂಡಿಸಬೇಕು.  ಹಸಿ ಕಸವನ್ನು ನಿತ್ಯವೂ ಸಂಗ್ರಹಿಸಬೇಕು.
     ಒಣ ಕಸವನ್ನು ಸಾಧ್ಯವಾದರೆ ನಾಲ್ಕೈದು ದಿನಕ್ಕೊಮ್ಮೆ ಸಂಗ್ರಹಿಸಬಹುದಾಗಿದೆ.  ಸಂಗ್ರಹಿಸಿದ ಕಸವನ್ನು ಊರ ಹೊರಗಿನ ವಿಶಾಲವಾದ ಸ್ಥಳದಲ್ಲಿ ರಾಶಿ ಹಾಕುವ ವ್ಯವಸ್ಥೆ ಕೊನೆಯಾಗಬೇಕು ಎಂದು ಹೇಳಿದರು ಸಂಗ್ರಹಿಸಿದ ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿಸಲು ವಾರ್ಡ್ ವಾರು ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.  ಒಣ ಕಸವನ್ನು ಮರುಬಳಕೆ ಸಾಮಗ್ರಿಯಾಗಿಸಿ, ನಿಯಮಾನುಸಾರ ಆಸಕ್ತ ಕಂಪನಿಗಳಿಗೆ ಮಾರಾಟ ಮಾಡಬೇಕು. ಅಥವಾ ಇಟ್ಟಿಗೆ ತಯಾರಿಕೆಗೂ ಬಳಸಬಹುದು.  ಸರ್ಕಾರಿ ಅಧಿಕಾರಿಗಳ ವಸತಿ ಗೃಹಗಳು, ಪೊಲೀಸ್ ವಸತಿ ಗೃಹ ಸಂಕೀರ್ಣಗಳಲ್ಲಿ ಕಸವನ್ನು ಸ್ಥಳೀಯವಾಗಿ ವಿಂಗಡಿಸಿ ಸಂಸ್ಕರಿಸುವ ಕಾರ್ಯ ಕಡ್ಡಾಯಗೊಳಿಸಬೇಕು.  ನವೆಂಬರ್ 01 ರೊಳಗೆ ಜಿಲ್ಲೆಯಲ್ಲಿ ಒಣ ಮತ್ತು ಹಸಿ ಕಸದ ಸಂಸ್ಕರಣೆಗೊಳಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಸುಭಾಷ್ ಆಡಿ ಅವರು ಸೂಚನೆ ನೀಡಿದರು.
     ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಜಿಲ್ಲಾದ್ಯಂತ ಕಸವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ. ಚಿತ್ರದುರ್ಗ ನಗರದಲ್ಲಿ ಒಟ್ಟು 35 ವಾರ್ಡ್‍ಗಳಿದ್ದು, 30 ವಾರ್ಡ್‍ಗಳಲ್ಲಿ ಮನೆಬಾಗಿಲಲ್ಲೇ ಕಸ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 168 ವಾರ್ಡ್‍ಗಳಿದ್ದು, 122 ವಾರ್ಡ್‍ಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ನಿತ್ಯ 137.17 ಟನ್ ಕಸ ಸಂಗ್ರಹಣೆಯಾಗುತ್ತಿದ್ದು, ಇದರಲ್ಲಿ 55 ಟನ್ ಒಣಕಸ ಹಾಗೂ 82.8 ಟನ್ ಹಸಿ ಕಸ ಸಂಗ್ರಹವಾಗುತ್ತಿದೆ.  ನಿತ್ಯ 33.5 ಟನ್ ಹಸಿ ಕಸವನ್ನು ಗೊಬ್ಬರವಾಗಿ ಸಂಸ್ಕರಿಸಲಾಗುತ್ತಿದೆ ಎಂದರು.
 
     ಇದಕ್ಕೆ ಪ್ರತಿಕ್ರಿಯಿಸಿದ ಸುಭಾಷ್ ಆಡಿ ಅವರು, ಕೇವಲ ಗೊಬ್ಬರ ತಯಾರಿಗೆ ಮಾತ್ರ ಆದ್ಯತೆ ನೀಡುತ್ತಿದ್ದು, ಹಸಿ ಮತ್ತು ಒಣ ಕಸವನ್ನು ಇತರೆ ಮರುಬಳಕೆ ಸಾಮಗ್ರಿಯಾಗಿ ಬಳಸುವ ಕುರಿತು ಯೋಜನೆ ಕೈಗೊಳ್ಳುವಂತೆ ಸಲಹೆ ನೀಡಿದರು.
ಹಿತೈಷಿ ಆ್ಯಪ್ ಬಿಡುಗಡೆ
     ಕಸ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ‘ಹಿತೈಷಿ’ ಎನ್ನುವ ಆ್ಯಪ್‍ನ್ನು ಸುಭಾಷ್ ಆಡಿ ಅವರು ಬಿಡುಗಡೆ ಮಾಡಿದರು. 
  ಆ್ಯಪ್ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು,  ಇದು ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವಂತಾಗಲು ಚುನಾವಣೆಯ ಸಿ-ವಿಜಿಲ್ ಆ್ಯಪ್ ಮಾದರಿಯಲ್ಲಿಯೇ ‘ಹಿತೈಶಿ’ ತಂತ್ರಾಂಶ ರೂಪಿಸಲಾಗಿದೆ.
     ಚಿತ್ರದುರ್ಗ ನಗರದಲ್ಲಿ ನಿತ್ಯ ಕಸ ವಿಲೇವಾರಿಯಾಗುತ್ತಿದ್ದು, ಒಂದು ವೇಳೆ ಕಸ ತೆಗೆಯದಿರುವುದು, ಕಂಡ ತಕ್ಷಣ ಆ್ಯಪ್ ಮೂಲಕ ಕಸದ ಫೋಟೊ ತೆಗೆದು, ವಿಳಾಸದೊಂದಿಗೆ ಮಾಹಿತಿ ಕಳುಹಿಸಬೇಕು. ಮಾಹಿತಿ ಬಂದ 24 ಗಂಟೆಯೊಳಗಾಗಿ ಕಸನಿರ್ವಹಣೆ ಮಾಡಲಾಗುತ್ತದೆ. 24 ಗಂಟೆಯಾದರೂ ಕಸ ನಿರ್ವಹಣೆ ಆಗದಿದ್ದಲ್ಲಿ, ಪ್ರಕರಣವು ತಂತಾನೆ ಪೌರಾಯುಕ್ತರಿಗೆ ಬಳಿಕ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತದೆ  ಎಂದರು.
     ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ , ಎನ್‍ಜಿಟಿಯ ಉಪಕಾರ್ಯದರ್ಶಿ ಮನೋಜ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ಪರಿಸರ ಅಧಿಕಾರಿ ಮುರಳಿಧರ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಸೇರಿದಂತೆ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link