ವಕೀಲರು ಎಚ್ಚರ ತಪ್ಪಿದರೆ ದೇಶಕ್ಕೆ ಅಪಾಯ

ಚಿತ್ರದುರ್ಗ:

        ವಕೀಲ ಸಮೂಹ ಸದಾ ಜಾಗೃತವಾಗಿರಬೇಕು. ಎಚ್ಚರ ತಪ್ಪಿದರೆ ದೇಶಕ್ಕೆ ಗಂಡಾಂತರವಿದೆ. ಸಂವಿಧಾನವನ್ನು ಬದಲಾವಣೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ನ್ಯಾಯವಾದಿಗಳಿಗೆ ಕರೆ ನೀಡಿದರು .ನ್ಯಾಯಾಲಯದ ಆವರಣದಲ್ಲಿ ಸೋಮವಾರ ನಡೆದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.1949 ನ.26 ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡಿದ ದಿನ. ಡಿ.3 ಡಾ.ಬಾಬುರಾಜೇಂದ್ರಪ್ರಸಾದ್‍ರವರ ಜನ್ಮ ದಿನಾಚರಣೆ. ಅದಕ್ಕಾಗಿ ಈ ಎರಡು ದಿನಗಳು ಅತ್ಯಂತ ಪ್ರಮುವಾದುದು ಎಂದು ನೆನಪಿಸಿಕೊಂಡರು.

       ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ, ಡಾ.ಬಾಬುರಾಜೇಂದ್ರಪ್ರಸಾದ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಬಹುತೇಕರು ವಕೀಲರುಗಳಾಗಿದ್ದರು. ಡಾ.ಬಾಬುರಾಜೇಂದ್ರಪ್ರಸಾದ್‍ರವರ ಜನ್ಮದಿನಾಚರಣೆಯನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಹಾಗಾಗಿ ವಕೀಲರ ವೃತ್ತಿ ಅತ್ಯಂತ ಶ್ರೇಷ್ಟವಾದುದು ಎಂದು ಹೇಳಿದರು.

        ದೇಶದ ಸ್ವಾತಂತ್ರಕ್ಕಾಗಿ ವಕೀಲ ವೃತ್ತಿಯನ್ನೇ ತ್ಯಾಗ ಮಾಡಿದವರನ್ನು ಇಂದು ನಾವು ನೀವುಗಳೆಲ್ಲಾರೂ ಸ್ಮರಿಸಿಕೊಳ್ಳಬೇಕಿದೆ. ಪಾರ್ಲಿಮೆಂಟ್‍ನಲ್ಲಿಯೂ ಸಂವಿಧಾನವನ್ನು ಬದಲಾವಣೆ ಮಾಡಲು ಆಗುವುದಿಲ್ಲ. ಕೆಲವೊಮ್ಮೆ ಸಂವಿಧಾನ ವಿರೋಧಿ ತೀರ್ಮಾನಗಳನ್ನು ಪಾರ್ಲಿಮೆಂಟ್‍ನಲ್ಲಿ ಕೈಗೊಂಡಾಗ ಪ್ರಶ್ನಿಸುವ ಹಕ್ಕು ನ್ಯಾಯವಾದಿಗಳಿಗಿದೆ. ಅದಕ್ಕಾಗಿ ವಕೀಲ ವೃತ್ತಿ ಹೆಚ್ಚು ಶಕ್ತಿಶಾಲಿಯಾದುದು ಎಂದರು.
ಶಾಸಕಾಂಗ, ಕಾರ್ಯಾಂಗದ ಮೇಲೆ ಪ್ರಜೆಗಳು ವಿಶ್ವಾಸ ಕಳೆದುಕೊಂಡಿರಬಹುದು. ಆದರೆ ನ್ಯಾಯಾಂಗದ ಮೇಲೆ ಇನ್ನು ನಂಬಿಕೆ ಇಟ್ಟುಕೊಂಡಿರುವುದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ವಕೀಲರುಗಳ ಮೇಲಿದೆ ಎಂದು ತಿಳಿಸಿದರು.

       ನ್ಯಾಯಾಂಗ ತಪ್ಪು ಮಾಡಬಾರದು. ಪಾರ್ಲಿಮೆಂಟ್‍ನಲ್ಲಿ ಸಂವಿಧಾನಕ್ಕೆ ವಿರೋಧವಾಗಿ ಕೆಲವೊಮ್ಮೆ ವಿಚಾರ ಮಾಡುವುದನ್ನು ಸರಿಯಿಲ್ಲ ಎಂದು ಹೇಳುವ ಶಕ್ತಿ ವಕೀಲರಿಗಿದೆ. ರಾಷ್ಟ್ರದ ಜನ ನ್ಯಾಯಾಂಗದ ಮೇಲೆ ಇನ್ನು ವಿಶ್ವಾಸವಿಟ್ಟುಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ವಾದ-ವಿವಾದ ನಡೆಸುವುದು ಎಷ್ಟು ಮುಖ್ಯವೋ. ನ್ಯಾಯಾಲದ ಹೊರಗೆ ಎರಡು ಕಡೆಯ ಕಕ್ಷಿದಾರರ ಮನವೊಲಿಸಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿ ವಕೀಲರುಗಳ ಮೇಲಿದೆ. ಅದಕ್ಕಾಗಿಯೇ ಲೋಕಅದಾಲತ್ ಪದ್ದತಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಸಮಯ ಹಾಗೂ ಹಣ ಎರಡು ವ್ಯರ್ಥವಾಗುವುದನ್ನು ತಡೆಗಟ್ಟಬಹುದು ಎಂದರು.

       ಅತಿ ಶೀಘ್ರವಾಗಿ ಕೇಸುಗಳು ಇತ್ಯರ್ಥವಾಗಬೇಕು ನಿಜ. ಆದರೆ ನ್ಯಾಯಾಧೀಶರುಗಳ ಕೊರತೆಯಿದೆ. ಇನ್ನು ಹತ್ತು ಹಲವಾರು ಸಮಸ್ಯೆಗಳು ನ್ಯಾಯಾಂಗ ಇಲಾಖೆಯಲ್ಲಿರುವುದನ್ನು ಪರಿಹರಿಸುವಂತೆ ಸಂಬಂಧಪಟ್ಟವರನ್ನು ವಕೀಲರುಗಳು ಕೇಳಬೇಕು ಎಂದು ವಕೀಲರುಗಳ ಕರ್ತವ್ಯ ಮತ್ತು ಜವಾಬ್ದಾರಿ ಏನೆಂಬುದನ್ನು ತಿಳಿಸಿದರು.

         ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್, ಉಪಾಧ್ಯಕ್ಷ ಕೆ.ವೀರಭದ್ರಪ್ಪ, ಖಜಾಂಚಿ ನಿರಂಜನಮೂರ್ತಿ, ನ್ಯಾಯಾಧೀಶರುಗಳಾದ ಬಸವರಾಜ್, ವಿರುಪಾಕ್ಷಯ್ಯ, ಹಿರಿಯ ವಕೀಲರಾದ ಕಿರೀಟಶೆಟ್ಟಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.ಹಿರಿಯ ವಕೀಲರುಗಳು ಮತ್ತು ಕಿರಿಯ ನ್ಯಾಯಾಧೀಶರುಗಳು ವಕೀಲರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.ವಕೀಲ ವೃತ್ತಿಯಲ್ಲಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಎನ್.ಬಿ.ವಿಶ್ವನಾಥ್, ಕೆ.ಎಸ್.ವಿಜಯ ಇನ್ನು ಮುಂತಾದವರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link