ಚಿತ್ರದುರ್ಗ
ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ವಕೀಲರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಕಚೇರಿ ಸಹಾಯಕ ಸುರೇಶ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ನ್ಯಾಯಾಲಯದ ಆವರಣದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಕೀಲರು ಪೌರತ್ವ ಕಾಯಿದೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಷಾ ಇವರುಗಳು ಜಾರಿಗೆ ತಂದಿರುವ ಸಿ.ಎ.ಎ, ಎನ್.ಆರ್.ಸಿ., ಎನ್.ಪಿ.ಆರ್.ನಿಂದ ಕೇವಲ ಮುಸಲ್ಮಾನರಿಗಷ್ಟೆ ಅಲ್ಲ. ಹಿಂದುಳಿದವರು, ದಲಿತರು, ಪರಿಶಿಷ್ಟ ವರ್ಗದವರು, ಬುಡಕಟ್ಟು ಜನಾಂಗ, ಆದಿವಾಸಿಗಳು ಹೀಗೆ ಎಲ್ಲಾ ತರಹದ ಈ ದೇಶದ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕಾಯಿದೆಯನ್ನು ರದ್ದುಪಡಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟವಿರುತ್ತದೆ ಎಂದು ಎಚ್ಚರಿಸಿದರು.
ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಇದೊಂದು ಅವೈಜ್ಞಾನಿಕ ಕಾಯಿದೆಯಾಗಿರುವುದರಿಂದ ಪ್ರಧಾನಿ ಮೋದಿರವರು ಮತ್ತೊಮ್ಮೆ ಕಾಯಿದೆಯನ್ನು ಪರಿಶೀಲಿಸಿ ಹಿಂದಕ್ಕೆ ಪಡೆಯಬೇಕು ಎಂದರು
ಕೇಂದ್ರ ಸರ್ಕಾರ ಕೇಳುವ ಎಲ್ಲಾ ದಾಖಲೆಗಳು ಯಾರ ಬಳಿಯೂ ಇರುವುದಿಲ್ಲ. ವಿನಾ ಕಾರಣ ಅಲ್ಪಸಂಖ್ಯಾತರು, ದಲಿತರು, ಪರಿಶಿಷ್ಟ ವರ್ಗದವರು, ಬುಡಕಟ್ಟು ಜನಾಂಗ, ಆದಿವಾಸಿಗಳಿಗೆ ತೊಂದರೆ ನೀಡುವುದು ಕೋಮುವಾದಿ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ಕಾಯಿದೆ ಸಂವಿಧಾನಕ್ಕೆ ವಿರೋಧಿಯಾಗಿರುವುದರಿಂದ ರದ್ದುಗೊಳಿಸುವತನಕ ಹೋರಾಟ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು.
ನ್ಯಾಯವಾದಿಗಳಾದ ಫಾತ್ಯರಾಜನ್, ಶರಣಪ್ಪ, ರವೀಂದ್ರ, ರಾಜಣ್ಣ, ಸೈಯದ್ ನೂರುಲ್ಲಾ ಹಸನ್, ಸೈಯದ್ ನಜೀಬುಲ್ಲಾ, ನರಸಿಂಹ, ಸುದರ್ಶನ್, ವಹಿದಾಭಾನು, ಮೆಹರೋಜ್‍ಬೇಗಂ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ