ದಾವಣಗೆರೆ:
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಸರ್ಕಾರದ ಅವಧಿಯಲ್ಲಿ ನಾನು ಚುನಾವಣೆಯ ಸಂದರ್ಭದಲ್ಲಿ ನೀಡಿದ 165 ಭರವಸೆಗಳನ್ನು ಈಡೇರಿಸಿದ್ದೇನೆ. ಆದರೆ, ಮೋದಿ ಕಳೆದ ಐದು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆಂಬುದರ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ಪ್ರಚಾರಕ್ಕೆ ಬರಲಿ ಎಂದರು.
ಮೋದಿ 2014ರ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳ ಪೈಕಿ ಒಂದನ್ನೂ ಈಡೇರಿಸಿಲ್ಲ. ಕಳೆದ ಬಾರಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂಬುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಾನು ಪಟ್ಟಿ ನೀಡುತ್ತೇನೆ. ಮೋದಿ, ಸಿದ್ದೇಶ್ವರ್ ನೀಡಲಿ ನೋಡೋಣ ಎಂದು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಿಗೆ ಭಾವನಾತ್ಮಕ ವಿಚಾರದ ಮೇಲೆ ಚರ್ಚೆ ಮಾಡುತ್ತಿದೆ. ಮೊನ್ನೆ ಪ್ರಧಾನಿ ಮೋದಿ ಬಾಗಲಕೋಟೆಯನ್ನು ಉಗ್ರರು ಅಡಗಿದ್ದ ಬಾಲಾಕೋಟ್‍ಗೆ ಹೋಲಿಸಿ ಹೋಗಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 12 ಸರ್ಜಿಕಲ್ ಸ್ಟ್ರೈಕ್ ಹಾಗೂ ನಾಲ್ಕು ಯುದ್ಧಗಳು ನಡೆದಿವೆ. 1948ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಮೋದಿ ಹುಟ್ಟೆ ಇರಲಿಲ್ಲ.
1951ರಲ್ಲಿ ಹುಟ್ಟಿರಬಹುದು. ನಾನು 1947ರಲ್ಲೇ ಜನಿಸಿದ್ದೆ. 1961ರಲ್ಲಿ ಪ್ರಧಾನಿಯಾಗಿದ್ದ ನೆಹರು ಸರ್ಕಾರದಲ್ಲಿ ಯುದ್ಧ ನಡೆದಿದೆ. 1971ರಲ್ಲಿ ಇಂದಿರಾಗಾಂಧಿ ಅವರ ಅವಧಿಯಲ್ಲಿ ನಡೆದ ಯುದ್ಧದಲ್ಲಿ ನಮ್ಮ ಸೈನಿಕರು ಪಾಕಿಸ್ತಾನದ 90 ಸಾವಿರ ಸೈನಿಕರನ್ನು ಸೆರೆ ಹಿಡಿದಿದ್ದರು. ನಿಮ್ಮ ಸರ್ಕಾರ ಆ ಕೆಲಸ ಮಾಡಿದೆಯೇ ಎಂದು ಪ್ರಶ್ನಿಸಿದರು.
ಇಂದಿರಾಗಾಂಧಿ ಅವರ ಅವಧಿಯಲ್ಲಿ ನಡೆದ ಯುದ್ಧಕ್ಕೆ ಸಂಬಂಧಿಸಿದಂತೆ ಅಟಲ್ ಬಿಹಾರಿ ವಾಜಪೇಯಿ ಇಂದಿರಾ ಅವರನ್ನು ದುರ್ಗೆಗೆ ಹೋಲಿಸಿ ಹಾಡಿ ಹೋಗಳಿದ್ದರು. ಆದರೂ ಸಹ ಕಾಂಗ್ರೆಸ್ ಸೈನಿಕರ ಸಾಧನೆಯನ್ನು ಚುನಾವಣೆಗೆ ಬಳಸುತ್ತಿರಲಿಲ್ಲ. ಆದರೆ, ಮೋದಿ ಎಂತಹ ನಾಚಿಕೆಗೇಡಿ ಎಂದರೆ, ನಮ್ಮ ಸೈನಿಕರು ಮಾಡಿದ ಸಾಧನೆಯನ್ನು ತಾನು ಮಾಡಿದ್ದಾಗಿ ಬಿಂಬಿಸಿಕೊಂಡು ತೀರುಗುತ್ತಿದ್ದಾರೆ. ಏಕೆ ಮೋದಿ ಸ್ಟೇನ್‍ಗನ್ ತಗೊಂಡು ಯುದ್ದಕ್ಕೆ ಹೋಗಿದ್ದರಾ? ಎಂದು ಪ್ರಶ್ನಿಸಿದರು.
2014ರಲ್ಲಿ 380 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ 950 ರೂ. ತಲುಪಿದೆ. ರಸ ಗೊಬ್ಬರದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಯುಪಿಎ ಅವಧಿಯಲ್ಲಿ ಬ್ಯಾರಲ್ ಕಚ್ಛಾ ತೈಲದ ಬೆಲೆ 117 ಡಾಲರ್ ಇದ್ದರು. ಇಂಧನ ಬೆಲೆ ಕಡಿಮೆ ಇತ್ತು. ಆದರೆ, ಈಗ ಕಚ್ಛಾ ತೈಲದ ಬೆಲೆ 40 ಡಾಲರ್‍ಗೆ ಇಳಿದರೂ ಮೋದಿ ಸರ್ಕಾರ ಏಕೆ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.