ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್‍ಗೆ ಒತ್ತಾಯ

ದಾವಣಗೆರೆ:

    ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ ಜೈಲಿಗೆ ಅಟ್ಟಬೇಕೆಂದು ಸಾಮಾಜಿಕ ಕಾರ್ಯಕರ್ತ ಎ.ಲಕ್ಷ್ಮಣ ಒತ್ತಾಯಿಸಿದ್ದಾರೆ.

     ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ನೇ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಕುಂಚೂರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬಿಆರ್‍ಜಿಎಫ್ ಅನುದಾನದಲ್ಲಿ 3,91,514 ರೂ., 13 ಮತ್ತು 14ನೇ ಹಣಕಾಸು ಯೋಜನೆ ಅಡಿಯಲ್ಲಿ 37,41,356 ರೂ., ವರ್ಗ-1ರ ಅಡಿಯಲ್ಲಿ 8,51,171 ರೂ. ಸೇರಿ ಒಟ್ಟು 49,84,041 ರೂ. ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.

       ಈ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಐದು ಜನ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಐದು ಬಾರಿ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ ಲೆಕ್ಕಪತ್ರ ಪರಿಶೀಲಿಸಿ ಅವ್ಯವಹಾರ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪಿ.ಮಂಜ್ಯಾ ನಾಯ್ಕ, ಎಸ್.ಮಂಜುನಾಥ್ ಹಾಗೂ ಖಾದರ್ ಭಾಷಾ ಅವರುಗಳನ್ನು ಅಮಾನತು ಮಾಡಲಾಗಿದೆ. ಆದರೆ, ಈ ಅವ್ಯವಹಾರಕ್ಕೆ ಮೂಲ ಕಾರಣವಾಗಿರುವ ಗ್ರಾ.ಪಂ.ಅಧ್ಯಕ್ಷ ಸುಧಾಕರ್ ವಿರುದ್ಧ ಏಕೆ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

      ಒಂದೇ ಇಂಗು ಗುಂಡಿ ನಿರ್ಮಾಣ ಮಾಡಿ, ಆ ಗುಂಡಿಯ ಬಳಿಯಲ್ಲೇ ಸುಮಾರು ಏಳು ಜನರನ್ನು ಬೇರೆ, ಬೇರೆ ಅಯಾಮದಲ್ಲಿ ನಿಲ್ಲಿಸುವ ಮೂಲಕ ಫೋಟೋ ತೆಗೆಸಿ ಒಬ್ಬೊಬ್ಬರ ಹೆಸರಿನಲ್ಲಿ ಸುಮಾರು 65 ಸಾವಿರ ರೂ.ಗಳಂತೆ ಬಿಲ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ಹಿಂದೆ ಶಾಸಕರು ಮತ್ತು ಸಂಸದರ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನೇ ತೋರಿಸಿ ಗ್ರಾಮ ಪಂಚಾಯ್ತಿ ಇಂದ ಅಭಿವೃದ್ಧಿ ಮಾಡಲಾಗಿದೆ ಎಂಬುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಬಿಲ್ ಮಾಡಿಸಿಕೊಳ್ಳಲಾಗಿದೆ. ಅಲ್ಲದೆ, ರವಿ ಎಲೆಕ್ಟ್ರಾನಿಕ್ಸ್ ಅವರಿಂದ ವಿವಿಧ ಉಪಕರಣಗಳನ್ನು ಖರೀದಿಸಲಾಗಿದೆ ಎಂಬುದಾಗಿ ಸುಳ್ಳು ಮಾಹಿತಿ ನೀಡಿ, ಲಕ್ಷಾಂತರ ರೂ. ದುರುಪಯೋಗ ಪಡೆಸಿಕೊಳ್ಳಲಾಗಿದೆ. ಆದ್ದರಿಂದ ಈ ಎಲ್ಲಾ ಅವ್ಯವಹಾರಗಳಿಗೂ ಮೂಲ ಆಗಿರುವ ಗ್ರಾ.ಪಂ. ಅಧ್ಯಕ್ಷ ಸುಧಾಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದರು.

         ಕುಂಚೂರು ಗ್ರಾ.ಪಂ. ಸದಸ್ಯ ಜಿ.ನಾಗರಾಜ್ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರು ಯಾವ ಸದಸ್ಯರಿಗೂ ಸಹ ಗೌರವ ಕೊಡುವುದಿಲ್ಲ. ಸಾಮಾನ್ಯ ಸಭೆಯಲ್ಲೂ ತಾರದೇ ಹಲವು ವಿಷಯಗಳನ್ನು ತಮ್ಮ ಮನಸ್ಸಿಗೆ ತೋಚಿವಂತೆ ಏಕ ಪಕ್ಷೀಯ ನಿರ್ಧಾರಗಳ್ನು ಕೈಗೊಂಡು, ನಡುವಳಿ ಪುಸ್ತಕದಲ್ಲಿ ದಾಖಲಿಸಿ, ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.

        ಇನ್ನೋರ್ವ ಗ್ರಾ.ಪಂ ಸದಸ್ಯ ಎಂ.ನಿಂಗಪ್ಪ ಮಾತನಾಡಿ, ನಮ್ಮನ್ನು ಜನ ಆಯ್ಕೆ ಮಾಡಿ ಕಳುಹಿಸಿರುತ್ತಾರೆ. ಹೀಗಾಗಿ ಜನಗಳ ಸೇವೆ ಮಾಡುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಆದರೆ, ಅಧ್ಯಕ್ಷರು ಹಾಗೂ ಪಿಡಿಒಗಳು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ, ಹಣ ಲೂಟಿ ಹೊಡೆಯುತ್ತಿದ್ದಾರೆ. ಹೀಗಾಗಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿ, ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap