ಪಕ್ಷ, ಜಾತಿ ಬೇಧ ಬಿಟ್ಟು ಅಭಿವೃದ್ದಿಗೆ ಸಂಕಲ್ಪ ಮಾಡಿ

ಚಿತ್ರದುರ್ಗ:

      ನಗರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ.ಗೆ ಸಿಗಬಾರದೆಂಬ ರಾಜಕೀಯ ದುರುದ್ದೇಶವಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್.ನವರು ಚಿತ್ರದುರ್ಗ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ ಬದಲಾವಣೆ ಮಾಡಿಸಿದ್ದಾರೆ. ಊರಿನ ಅಭಿವೃದ್ದಿ ದೃಷ್ಟಿಯಿಂದ ಎಲ್ಲರೂ ರಾಜಕೀಯ, ಜಾತಿ-ಬೇಧ ಮರೆತು ಕೆಲಸ ಮಾಡೋಣ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ನಗರಸಭೆಗೆ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

     ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದಿಂದ ರಂಗಯ್ಯನಬಾಗಿಲು ಸಮೀಪವಿರುವ ಬೆಸ್ತರ ಸಂಘದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

       ಹದಿನೈದು ಇಪ್ಪತ್ತು ವರ್ಷಗಳಿಂದಲೂ ಚಿತ್ರದುರ್ಗ ನಗರಸಭೆ ಜೆಡಿಎಸ್.ನವರ ಕೈಯಲ್ಲಿದ್ದುದರಿಂದ ನಗರದ ವ್ಯವಸ್ಥೆಯೇ ಹದಗೆಟ್ಟಿರುವುದನ್ನು ಈ ಬಾರಿ ನಡೆದ ನಗರಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಬಿಜೆಪಿ. ಹದಿನೇಳು ವಾರ್ಡ್‍ಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಕೆಲವು ವಾರ್ಡ್‍ಗಳಲ್ಲಿ ಬಿಜೆಪಿ.ಯಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸದೆ ಪಕ್ಷೇತರರನ್ನು ಗೆಲ್ಲಿಸಿಕೊಂಡಿದ್ದೇನೆ. ಎಲ್ಲರೂ ಸೇರಿದರೆ ನಮ್ಮವರು 21 ಮಂದಿ ಸದಸ್ಯರಾಗುತ್ತಾರೆ. ಕಾಂಗ್ರೆಸ್ ಜೆಡಿಎಸ್.ನವರು ಏನೆ ಕುತಂತ್ರ ನಡೆಸಿದರೂ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದು ನಾವುಗಳೆ ಎಂದು ವಿರೋಧಿಗಳಿಗೆ ಎಚ್ಚರಿಸಿದರು.

      ನಗರಸಭೆ ಚುನಾವಣೆಗೆ ಮುಂಚೆಯೇ ತಮ್ಮ ತಮ್ಮ ಅನುಕೂಲಕ್ಕಾಗಿ ಜೆಡಿಎಸ್. ಮತ್ತು ಕಾಂಗ್ರೆಸ್‍ನವರು ಒಂದು ವಾರ್ಡ್‍ನ ಪ್ರದೇಶವನ್ನು ಇನ್ನೊಂದು ವಾರ್ಡ್‍ಗೆ ವಿಸ್ತರಿಸುವುದು. ಒಂದೊಂದು ವಾರ್ಡ್‍ನಲ್ಲಿ ಐದರಿಂದ ಆರು ಸಾವಿರ ಮತದಾರರಿರುವಂತೆ ವ್ಯವಸ್ಥೆ ಮಾಡಿಕೊಂಡರು. ಕೆಲವು ವಾರ್ಡ್‍ಗಳಲ್ಲಿ ಒಂದೆ ಸಾವಿರ ಮತದಾರರಿದ್ದಾರೆ. ಎದುರಾಳಿಗಳು ಎಷ್ಟೆ ತೊಂದರೆ ಕೊಟ್ಟರೂ ಹೆದರದೆ ನಗರಸಭೆ ಚುನಾವಣೆಯಲ್ಲಿ ತೀವ್ರ ಜಟಾಪಟಿಯಿದ್ದ ವಾರ್ಡ್‍ಗಳಲ್ಲಿ ಬಿಜೆಪಿ.ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದೇನೆ. ನಗರಸಭೆ ಅಧ್ಯಕ್ಷ ಸ್ಥಾನ ಎಸ್.ಟಿ.ಮಹಿಳೆಗೆ ಮೀಸಲಾಗಿದ್ದನ್ನು ನೋಡಿ ಸಹಿಸಿಕೊಳ್ಳಲು ಆಗದೆ ಚುನಾವಣೆಯಲ್ಲಿ ಸೋತವರು ಸಾಮಾನ್ಯ ಮಹಿಳೆಗೆ ಬದಲಾಯಿಸಿಕೊಂಡು ಬಂದಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ ಇತ್ಯರ್ಥವಾದ ಕೂಡಲೆ ನಮ್ಮವರು ಯಾರಾದರೂ ಅಧ್ಯಕ್ಷರಾಗುತ್ತಾರೆ ಎಂದರು.

     ನಗರಸಭೆಯಲ್ಲಿ ಬಿಜೆಪಿ.ಅಲೆ ಸೃಷ್ಟಿಸಲು ಚುನಾವಣೆಯಲ್ಲಿ ಸಾಕಷ್ಟು ಶ್ರಮ ಪಡಬೇಕಾಯಿತು. ನೂತನವಾಗಿ ಚುನಾಯಿತರಾಗಿರುವ ನಗರಸಭೆ ಸದಸ್ಯರುಗಳು ದಿನವಿಡಿ ಕೆಲಸ ಮಾಡುವುದು ಬೇಡ. ವಾರದಲ್ಲಿ ನಾಲ್ಕು ದಿನ ದಿನಕ್ಕೆ ಕೇವಲ ಎರಡು ಗಂಟೆ ಬೆಳಗಿನ ಸಮಯದಲ್ಲಿ ನಿಮ್ಮ ನಿಮ್ಮ ವಾರ್ಡ್‍ಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ನಿವಾರಣೆಗೆ ಪ್ರಯತ್ನಿಸಿದರೆ ಸಾಕು. ಅಮೃತ್‍ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರದ ಅನುದಾನದಿಂದ ರಸ್ತೆ, ಪಾರ್ಕ್‍ಗಳ ಅಭಿವೃದ್ದಿ ಕೆಲಸ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ ನಿಮ್ಮ ಸೇವೆ ಮಾಡಲು ಸದಾ ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.

     ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಸ್ತರ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದ ಮೇಲೆ ಕಟ್ಟಡ ಕಟ್ಟಬೇಕು. ಇದುವರೆವಿಗೂ ಕಟ್ಟಡ ಕಟ್ಟುವಾಗ ಶಾಸಕರ ಹಾಗೂ ಸಂಸದರ ಅನುದಾನ ಪಡೆದುಕೊಂಡಿಲ್ಲ. ನಮ್ಮ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆ ತೆರೆಯುವ ಉದ್ದೇಶವಿದೆ. ಎಲ್ಲಿಯಾದರೂ ಐದು ಎಕರೆ ಭೂಮಿ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಗಂಗಾಂಭಿಕ ಬೆಸ್ತ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ ಯಾವುದೇ ಒಂದು ಸಮಾಜ ಶಿಕ್ಷಣದಿಂದ ಮಾತ್ರ ಅಭಿವೃದ್ದಿಯಾಗಲು ಸಾಧ್ಯ. ಹಾಗಾಗಿ ಗಂಗಾಂಭಿಕ ಜನಾಂಗದವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ ಸಮಾಜದ ಸಂಘಟನೆಗೆ ಒತ್ತು ಕೊಡಿ ಎಂದು ವಿನಂತಿಸಿದರು.

     ನಗರಸಭೆ ಚುನಾವಣೆಯಲ್ಲಿ ಜಯಶಾಲಿಗಳಾಗಿರುವ ಆರ್.ನಾಗಮ್ಮ, ಕೆ.ಮಂಜುಳ ಇವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದ ಅಧ್ಯಕ್ಷ ಹೆಚ್.ಡಿ.ರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ತ್ಯಾಗರಾಜ್, ಕೆಳಗಳಹಟ್ಟಿ ಗೋವಿಂದರಾಜು ವೇದಿಕೆಯಲ್ಲಿದ್ದರು.ಕೆಂಚಪ್ಪ ಪ್ರಾರ್ಥಿಸಿದರು, ಗೋವಿಂದರಾಜು ಸ್ವಾಗತಿಸಿ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link