ದಾವಣಗೆರೆ:
2019ರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ಐದು ಸ್ಥಾನಗಳಲ್ಲಾದರೂ ಮಹಿಳೆಯರು ಪ್ರದರ್ಶಿಸಲು ಅಕಾಶ ಮಾಡಿಕೊಡಬೇಕೆಂದು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಡಾ.ಪುಷ್ಟ ಅಮರ್‍ನಾಥ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಾರ್ಯಕರ್ತೆಯರಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿರುವುದು. ಪಕ್ಷದ ಮುಖಂಡರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಐದು ಸ್ಥಾನಗಳನ್ನಾದರೂ ಮಹಿಳೆಯರಿಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಮುಂದೆ ಬರಬೇಕಾದರೆ, ಮೀಸಲಾತಿಯಿಂದ ಮಾತ್ರ ಸಾಧ್ಯ. ಇದನ್ನು ಅರಿತು ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶೇ.50 ರಷ್ಟು ಮೀಸಲಾತಿ ಜಾರಿಗೆ ತಂದಿದೆ. ಮಹಿಳೆಯರ ಸಬಲೀಕರಣ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗಬೇಕೆಂಬ ಕೂಗು ಶತ-ಶತಮಾನಗಳಿಂದ ಕೇಳಿಬರುತ್ತಿದ್ದರೂ, ರಾಜಕೀಯ ಸಮಾನತೆ ಇನ್ನೂ ಸಹ ದೊರೆತಿಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುವುದು ಅವಶ್ಯವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಮಹಿಳೆಯರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು,
ಮಹಿಳೆಯರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅವರ ಹೆಸರಿನ ಮೇಲೆ ಅವರ ಪತಿಯಂದಿರೇ ಆಡಳಿತ ನಡೆಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಇದನ್ನು ತಡೆಯಲು ಅಧಿಕಾರದಲ್ಲಿರುವ ಮಹಿಳೆಯರೇ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದ ಅವರು, ಜಾತ್ಯಾತೀತ ರಾಷ್ಟ್ರದಲ್ಲಿ ಜಾತ್ಯಾತೀತ ಸರಕಾರ ಅಧಿಕಾರದಲ್ಲಿ ಇರಬೇಕಂದು ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ತರಲಾಗಿದೆ. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು. ಇದಕ್ಕಾಗಿ ಪಕ್ಷವನ್ನು ಸಂಘಟನೆ ಮಾಡಿ, ಹೋರಾಟ ಮಾಡಬೇಕು ಎಂದರು.
ಹಸಿ ಹಸಿ ಸುಳ್ಳು ಭರವಸೆಗಳೊಂದಿಗೆ ಕಳೆದ ನಾಲ್ಕುವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರದ ಬಗ್ಗೆಯೂ ಜನರಿಗೆ ತಿಳಿಸಬೇಕಾಗಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ನೀಡಿದ ಭರವಸೆಗಳಾವು ಈಡೇರಿಸಿಲ್ಲ, ಜನಸಾಮಾನ್ಯರು ಬಳಸುವ ಗ್ಯಾಸ್ ಸಿಲೆಂಡರ್ ದರವನ್ನು ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದೆ. ಇದರಿಂದ ಬದುಕುವುದು ದುಸ್ತರವಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಶುಭ ಮಂಗಳ, ಮುಮ್ತಾಜ್ ಬೇಗ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
