ಕೊರಟಗೆರೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮದ್ಯ ನಿಲ್ಲಿಸಿ ವ್ಯಸನಿಗಳನ್ನು ಪಾನಮುಕ್ತರನ್ನಾಗಿಸಿ ಉದ್ಯೋಗ ಸೃಷ್ಟಿ ಮಾಡಿದರೆ ಕುಟುಂಬದಲ್ಲಿ ನೆಮ್ಮದಿ ಜೀವನ ಸಾಗಿಸುವುದರ ಜೊತೆಗೆ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಖಾಸಾಶಾಖಾ ಮಠದ ಸಿದ್ದರಬೆಟ್ಟ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕನಕ ವೃತ್ತದಲ್ಲಿರುವ ಜಾಮಿಯಾ ಸಮುದಾಯ ಭವನದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ರಾಷ್ಟ್ರಪಿತ ಮಹಾತ್ಮಗಾಂಧಿಯವರ 150ನೇ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಜನಜಾಗೃತಿ ಜಾಥಾ, ಗಾಂಧಿಸ್ಮತಿ ಮತ್ತು ಪಾನಮುಕ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು
ಮಹಾತ್ಮಗಾಂಧೀಜಿಯವರು ಕಂಡ ಕನಸುಗಳು ನನಸಾಗಬೇಕಾದರೆ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರ ಯೋಜನೆಗಳ ಹಾದಿಯಲ್ಲಿಯೇ ಸರ್ಕಾರಗಳು ಸಾಗಿ ಮದ್ಯಪಾನ ತಯಾರು ಮಾಡುವುದನ್ನು ನಿಲ್ಲಿಸುವಂತಾಗಬೇಕು. ಈ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಮದ್ಯಪಾನವನ್ನು ತ್ಯಜಿಸಿ ಉತ್ತಮ ಜೀವನ ಕಟ್ಟಿಕೊಂಡು ಸಮಾಜದ ಮುಖ್ಯಭೂಮಿಕೆಗೆ ಬರಬೇಕು ಎಂದು ಕರೆ ನೀಡಿದರು.
ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿ ಮಾತನಾಡಿ ಗ್ರಾಮೀಣ ಪ್ರದೇಶದ ಎಷ್ಟೋ ಮುಖಂಡರು ತಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೇಳುವ ಬದಲು ಮದ್ಯ ಮಾರಾಟ ಮಳಿಗೆಗೆ ಅನುಮತಿ ಕೊಡಿ ಎಂದು ಜನಪ್ರತಿನಿಧಿಗಳನ್ನು ಕೇಳುತ್ತಿರುವುದು ಬೇಸರದ ಸಂಗತಿ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಬಡಕುಟುಂಬದ ಸದಸ್ಯರು ಕುಡಿತಕ್ಕೆ ಒಳಗಾಗಿ ಆರ್ಥಿಕವಾಗಿ ಸಂಕಷ್ಟದ ಜೀವನ ನಡೆಸುತ್ತಿರುವುದನ್ನು ಕಂಡು ಮದ್ಯವರ್ಜನಾ ಶಿಬಿರವನ್ನು ಪ್ರಾರಂಭಿಸಿದರು. ಈ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿಬಿರಾರ್ಥಿಗಳು ದೃಢ ನಿರ್ಧರವನ್ನು ಮಾಡಿ ನಾವು ಸಮಾಜದಲ್ಲಿ ಸುಸಂಸ್ಕತರಾಗಿ ಬದುಕಬೇಕು. ಬಂಧು-ಬಳಗದೊಟ್ಟಿಗೆ ನೂರು ಕಾಲ ಬದುಕಬೇಕು ಎಂದು ಭಾವನೆಗಳನ್ನು ಇಟ್ಟುಕೊಂಡು ಬರಬೇಕು ಎಂದರು.
ಸಂಸದ ಮುದ್ದಹನುಮೆಗೌಡ ಮಾತನಾಡಿ, ಕುಡಿತಕ್ಕೆ ಶರಣಾದ ಯುವಕರು ಕಳ್ಳತನ, ಕೊಲೆ, ಇನ್ನಿತರೆ ಕೃತ್ಯಗಳಿಗೆ ಕೈ ಹಾಕಿ ಜೈಲು ಪಾಲಾಗುತ್ತಾರೆ. ತಂದೆ, ತಾಯಿ ಮತ್ತು ಮಡದಿಗೆ ಕಣ್ಣೀರು ಹಾಕಿಸುತ್ತಾರೆ. ಅದನ್ನು ತಪ್ಪಿಸಬೇಕಾದರೆ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಪ್ರಾರಂಭಿಸಿರುವ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಂಡು, ಕುಡಿತವನ್ನು ದೂರ ಸರಿಸಿ ಹೊಸ ಮನುಷ್ಯರಾಗಿ ಬದುಕಬೇಕು. ಜಗತ್ತಿನಲ್ಲಿ ಕೋಟ್ಯಂತರ ಜೀವ ರಾಶಿಗಳಲ್ಲಿ ಮಾನವ ಜನ್ಮಶ್ರೇಷ್ಠವಾದದ್ದು. ಇದನ್ನು ಅರಿತುಕೊಳ್ಳಬೇಕು. ನಿಮ್ಮನ್ನು ಅಡ್ಡದಾರಿಗೆ ಎಳೆಯಲು ದುಷ್ಟವ್ಯಕ್ತಿಗಳು ಪ್ರಯತ್ನಿಸುತ್ತಾರೆ. ಅದರ ಬಗ್ಗೆ ಗಮನ ಹರಿಸದೆ ಶಿಬಿರದಲ್ಲಿ ಶಿಸ್ತು ಸಂಯಮ ಕಲಿತು ಪರಿಪೂರ್ಣವಾಗಿ ಮದ್ಯವನ್ನು ತ್ಯಜಿಸಬೇಕು ಎಂದರು.
ಶ್ರೀ ಕ್ಷೇ.ಧ.ಗ್ರಾ.ಯೋ ಜಿಲ್ಲಾ ನಿರ್ದೇಶಕ ದಿನೇಶ್‍ಪೂಜಾರಿ ಮಾತನಾಡಿ, 800 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಹಾತ್ಮಗಾಂಧೀಜಿಯವರ ಕನಸನ್ನು ನನಸಾಗಿಸಬೇಕೆಂಬ ಮಹಾದಾಸೆಯಿಂದ ರಾಜ್ಯದ 30 ಜಿಲ್ಲೆಗಳಲ್ಲಿ ದುಶ್ಚಟದಿಂದ ಮನುಷ್ಯರ ಜೀವನ ಹಾಳಾಗುತ್ತಿರುವುದನ್ನು ಗಮನಿಸಿ, ಮದ್ಯವರ್ಜನ ಶಿಬಿರವನ್ನು ರೂಪಿಸಿ ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಟ್ಟಣದ ಎಸ್.ಎಸ್.ಆರ್ ಸರ್ಕಲ್‍ನಿಂದ ನೂರಾರು ಜನ ಮಹಿಳೆಯರು ಕಳಸ ಹಿಡಿದಿರುವುದು, ಒಂದೆಡೆಯಾದರೆ ಮಹಾತ್ಮಗಾಂಧೀಜಿಯವರ ಸ್ಥಬ್ಧ ಚಿತ್ರದೊಂದಿಗೆ ದುಶ್ಚಟ ವಿರುದ್ದ ಬೃಹತ್ ಜನ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಹಿಡಿದು ಅರಿವು ಮೂಡಿಸಲಾಯಿತು. ಗ್ರಾಮೀಣ ಸೊಗಡಿನ ಎತ್ತಿನ ಬಂಡಿಯಲ್ಲಿ ಮಹಾತ್ಮಗಾಂಧಿ ಮತ್ತು ಕನ್ನಡಾಂಬೆಯ ವೇಷಧರಿಸಿದ ಶಾಲಾ ಮಕ್ಕಳ ಮೆರವಣಿಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರದಿಂದ ಪಾನಮುಕ್ತರಾದ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಗಾಂಧಿಸ್ಮತಿ ಪ್ರಬಂಧ ಸ್ಫರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ಶಾಲಾಮಕ್ಕಳು ಮತ್ತು ಮಹಿಳೆಯರು ಜನಪದ ಹಾಡಿಗೆ ಹೆಜ್ಜೆ ಹಾಕಿದರು. ಕುಡಿತದಿಂದ ದೂರ ಸರಿದ ತಮ್ಮ ಗಂಡ ಮತ್ತು ಮಕ್ಕಳನ್ನು ಕಂಡ ಮಹಿಳೆಯರು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀನಿವಾಸ್.ಬಿ, ಜಿಲ್ಲಾ ಜನ ಜಾಗೃತಿ ಅಧ್ಯಕ್ಷ ಎಂ.ಬಿ ನಾಗರಾಜು, ಜಿ.ಪಂ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಜಗದೀಶ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎ.ಡಿ ಬಲರಾಮಯ್ಯ, ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ಪ.ಪಂ ಸದಸ್ಯರಾದ ಪ್ರದೀಪ್‍ಕುಮಾರ್, ನರಸಿಂಹಪ್ಪ, ನಾಗರಾಜು, ನಟರಾಜು, ಮುಖಂಡರಾದ ರಾಜಣ್ಣ, ಪ್ರಕಾಶ್, ರಾಜಗೋಪಾಲ್, ಮಂಜುನಾಥ್ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಂತೋಷ್, ಜ್ಞಾನ ವಿಕಾಸಾಧಿಕಾರಿ ಪ್ರೇಮಾ, ಶುದ್ದಗಂಗ ಮೇಲ್ವಿಚಾರಕರು ಲಕ್ಷ್ಮೀಶ್, ಕಾರ್ಯದರ್ಶಿ ಸುರೇಶ್, ಉಮಾದೇವಿ, ದಿನೇಶ್, ಶ್ರೀ ಮೂರ್ತಿ, ಪ್ರಶಾಂತ್, ಕಾತ್ಯಾಯಿನಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ