ಬಳ್ಳಾರಿ
ಒಬ್ಬ ಮನುಷ್ಯ ಸಮಾಜದಲ್ಲಿ ನೆಮ್ಮದಿಯುತ ಜೀವನ ನಡೆಸಲು ಕಾನೂನಿನ ತಿಳಿವಳಿಕೆ ಎಂಬುದು ಆಹಾರ,ನೀರು ಮತ್ತು ಗಾಳಿಯಷ್ಟೇ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾ. ಎಸ್.ಬಿ.ಹಂದ್ರಾಳ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಶೆಟ್ಟರ್ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯರು ನೆಮ್ಮದಿಯುತ ಜೀವನ ನಡೆಸುವ ನಿಟ್ಟಿನಲ್ಲಿ ಕಾನೂನಿನ ಅರಿವು ಅಗತ್ಯವಾಗಿದ್ದು,ಅದನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕು,ಜಿಲ್ಲಾ,ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಿಗಳನ್ನು ರಚಿಸಲಾಗಿದೆ. ಬಡವರಿಗೆ ಸುಲಭವಾಗಿ ನ್ಯಾಯ ಪಡೆಯುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರವು ಉಚಿತವಾಗಿ ಕಾನೂನಿನ ಸೇವೆ ಹಾಗೂ ನ್ಯಾಯವಾದಿಗಳ ಸೇವಾ ಸೌಲಭ್ಯ ಒದಗಿಸುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಿರುಪಯುಕ್ತವಾಗಿ ಕಳೆಯದೇ ಕಾನೂನನ್ನು ಸರಿಯಾಗಿ ತಿಳಿದುಕೊಂಡು ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಅಂಕಲಯ್ಯ, ಕಾರ್ಯದರ್ಶಿ ಎಸ್.ವಿ.ಅರಸೂರು ಹಾಗೂ ಹಿರಿಯ ನ್ಯಾಯವಾದಿ ನಸರುದ್ದೀನ್ ಅವರು ಹಲವು ಕಾನೂನು ಮತ್ತು ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಎಸ್.ಜಿ.ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಪಂಚಾಕ್ಷರಪ್ಪ ಸ್ವಾಗತಿಸಿದರು. ಉಪನ್ಯಾಸಕ ಡಾ.ಹಂಪಿಗೆ ನಾಗರಾಜ ಅವರು ನಿರೂಪಿಸಿಸದರು. ಕೆ.ಎನ್.ಬಸವಲಿಂಗಪ್ಪ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
