ಕುಷ್ಠ ರೋಗ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸೋಣ : ರಾಜಶೇಖರ ರೆಡ್ಡಿ

ಬಳ್ಳಾರಿ

       ರಾಷ್ಟ್ರಾದ್ಯಂತ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ದಿನದ ಅಂಗವಾಗಿ ‘ಕುಷ್ಠರೋಗ ಮುಕ್ತ ದೇಶ ನನ್ನ ಕನಸು’ ಎಂಬ ಅವರ ಆಶಯದೊಂದಿಗೆ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಆಚರಿಸಲಾಗುತ್ತಿದ್ದು, ಈ ರೋಗದ ನಿರ್ಮೂಲನೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಕುಷ್ಠ ನಿವಾರಿಸುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ರೆಡ್ಡಿ ಅವರು ಹೇಳಿದರು.

       ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಸಂಘ, ಮೋಕ ಗ್ರಾಪಂ, ಸರ್ಕಾರಿ ಆರೋಗ್ಯ ಕೇಂದ್ರ ಹಾಗೂ ವಿವಿಧ ಸಂಘಟನೆಗಳೊಂದಿಗೆ ಮೋಕಾದಲ್ಲಿ ಬುಧುವಾರದಂದು ಹಮ್ಮಿಕೊಂಡಿದ್ದ, ಸ್ಪರ್ಶ ಕುಷ್ಠ ಅರಿವು ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

       ರಾಷ್ಟ್ರದ 4ಲಕ್ಷ 71 ಸಾವಿರ ಗ್ರಾಮಗಳಲ್ಲಿ ಆಂದೋಲನ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ 10 ಜನ ಕುಷ್ಠರೋಗಿಗಳು ಪತ್ತೆಯಾಗುತ್ತಿದ್ದರು, ಪ್ರಸ್ತುತ ಇಪ್ಪತ್ತು ಸಾವಿರಕ್ಕೆ ಒಬ್ಬರಂತೆ ರೋಗಿಗಳು ಇದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ವರ್ಷ 97 ಜನ ಕುಷ್ಠರೋಗಿಗಳು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 24 ಜನ ಕುಷ್ಠರೋಗದಿಂದ ಗುಣಮುಖ ಹೊಂದಿದ ವ್ಯಕ್ತಿಗಳು ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ “ಡಿ” ಗ್ರೂಪ್ ಹುದ್ದೆಗೆ ನೇಮಕಾತಿ ಹೊಂದಿದ್ದಾರೆ. ಕುಷ್ಠರೋಗದಿಂದ ವಿಕಲಚೇತನ ಹೊಂದಿದ 5 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.

        12 ಜನರಿಗೆ ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಮನೆಗಳು ಮಂಜೂರಾಗಿವೆ. 300 ಜನ ಕುಷ್ಠರೋಗಿಗಳಿಗೆ ಪಾದರಕ್ಷೆಗಳನ್ನು ಮತ್ತು 150 ಜನರಿಗೆ ಸ್ವಯಂ ರಕ್ಷಣಾ ಔಷಧಿ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಹೇಳಿದ ಡಿ.ಹೆಚ್.ಒ ಈ ರೋಗದಲ್ಲಿ ಸಾಂಸರ್ಗಿಕ ಹಾಗೂ ಅಸಾಂಸರ್ಗಿಕ ಎಂಬುದಾಗಿ 2 ವಿಧಗಳಿವೆ. ಒಟ್ಟು ರೋಗಿಗಳಲ್ಲಿ ಶೇ.3ರಷ್ಟಿರುವ ಸಾಂಸರ್ಗಿಕ ರೋಗಿಗಳಿಂದ ಈ ರೋಗ ಬಹಳ ನಿಧಾನವಾಗಿ ಹರಡುತ್ತದೆ. ಈ ರೋಗವು ವಂಶಪಾರಂಪರ್ಯವಲ್ಲ ಹಾಗೂ ಪಾಪ, ಶಾಪಗಳಿಂದ ಬರುವುದಿಲ್ಲ. ಮುಖ್ಯವಾಗಿ ಕುಷ್ಠರೋಗಿಯನ್ನು ನಾವು ಗೌರವಯುತವಾಗಿ ಕಾಣುವುದು ಅಗತ್ಯವಾಗಿದೆ ಎಂದು ಹೇಳಿದರು.

         ದೇಹದ ಯಾವುದೇ ಭಾಗದ ಮೇಲೆ ಸ್ಪರ್ಶ ಜ್ಞಾನವಿಲ್ಲದ ಬಿಳಿ ತಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕೈ-ಕಾಲುಗಳಲ್ಲಿ ಜೋಮು ಉಂಟಾಗುವುದು. ಮುಖ ಮತ್ತು ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಎಣ್ಣೆ ಸವರಿರುವಂತೆ ಚರ್ಮ ಕಾಣಿಸುವುದು. ಮಚ್ಚೆಗಳನ್ನು ಗುಪ್ತವಾಗಿರಸದೇ ಕೂಡಲೇ ವೈದ್ಯರಿಗೆ ತೋರಿಸಬೇಕು. ಈ ರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸುವುದು ಬಹುವಿಧ ಔಷಧಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯಲಿದ್ದು, ಕುಷ್ಠರೋಗದ ಬಗ್ಗೆ ಸರಿಯಾದ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಂದ ಪಡೆದು ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸೋಣ ಎಂದರು.

       ಗ್ರಾಪಂ ಸದಸ್ಯ ಉಮಾ ಮಹೇಶ್ವರ, ಸಿದ್ದಪ್ಪ, ರೈತ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕುಷ್ಠರೋಗ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಮಲ್ಲಮ್ಮ ಅವರು ಪ್ರಾರ್ಥಸಿದರು, ಮೋಕ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಖುರ್ಶಿದಾ ಬೇಗಮ್ ಅವರು ಕಾರ್ಯಕ್ರಮ ನಿರೂಪಿಸಿದರು. ಯು.ಮಲ್ಲಿಕಾರ್ಜುನ್ ವಂದಿಸಿದರು.

  ಕಾರ್ಯಕ್ರಮದಲ್ಲಿ ಮೋಕಾ ಗ್ರಾಪಂ ಅಧ್ಯಕ್ಷೆ ಪತ್ತಾರ್ ನಾಗಮ್ಮ ವೆಂಕಟೇಶ್, ಉಪಾಧ್ಯಕ್ಷೆ ಫಾತೀಮಾ ಮುಬಿನ್, ಆಡಳಿತ ವೈದ್ಯಾಧಿಕಾರಿ ಸಿ.ಭಾರತಿ, ಪಿಡಿಒ ಪರುಶುರಾಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್ ದಾಸಪ್ಪನವರ್, ಮುಖ್ಯಗುರು ಡಿ.ರತ್ನನಾಯ್ಕ, ಜಿಲ್ಲಾ ನ್ಯೂಕ್ಲಿಯಸ್ ತಂಡದ ಸುವiನ್ ಎಂ, ಹೆಚ್.ಹುಲುಗಪ್ಪ, ಯು.ಮಲ್ಲಿಕಾರ್ಜುನ್, ತಂಗಮ್ಮ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಶಾಂತಮ್ಮ, ಹೆಚ್.ಎಮ್.ನಾಗರಾಜ್, ವಿ.ಬಸವರಾಜ್, ನಂದಿನಿ ಎಮ್, ಪಾರ್ವತಿ, ಮಹಮ್ಮದ್ ಇಸಾಕ್, ಗುರುಸಿದ್ದಪ್ಪ, ಮಲ್ಲನಗೌಡ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ