ಹಾವೇರಿ:
ವಾಹನ ಸವಾರರು ಮೊಬೈಲ್‍ನಲ್ಲಿ ಮಾತನಾಡುತ್ತಾ ಮತ್ತು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡಿ ಕಾನೂನು ಉಲ್ಲಂಘನೆ ಮಾಡಿದರೆ ಮೂರು ಸಲ ದಂಡಹಾಕಿ ನಂತರ ಅಂತವರ ಡ್ರೈವಿಂಗ್ ಲೈಸನ್ಸ್‍ನ್ನು ತಾತ್ಕಾಲಿಕವಾಗಿ ರದ್ದು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದ್ವಿಚಕ್ರ ಸೇರಿದಂತೆ ಇತರೆ ವಾಹನ ಸವಾರರು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಜಾಗೃತಿ ಕುರಿತ ವಿಡಿಯೋಗಳನ್ನು ನಗರದ ಚಿತ್ರಮಂದಿರಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅಗತ್ಯ ಜಾಗೃತಿ ಮೂಡಿಸುವಂತೆ ಆರ್.ಟಿ.ಓ. ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ರಸ್ತೆ ಸಂಚಾರ ನಿಯಮಗಳ ಕುರಿತು ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಡ್ರಿಂಕ್ ಆಂಡ್ ಡ್ರೈವ್ ಹಾಗೂ ರ್ಯಾಸ್ ಡ್ರೈವಿಂಗ್‍ಗೆ ಪ್ರಕರಣಗಳಲ್ಲಿ ಮೂರು ತಿಂಗಳ ಡ್ರೈವಿಂಗ್ ಲೈಸನ್ಸ್ ರದ್ದುಪಡಿಸಬೇಕು ಹಾಗೂ ನಗರ ಪ್ರದೇಶದಲ್ಲಿ 40 ಕಿ.ಮೀ.ವೇಗಮಿತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯವರು ಜಂಟಿಯಾಗಿ ಹಾವೇರಿ ಹಾಗೂ ರಾಣೇಬೆನ್ನೂರ ನಗರಗಳಲ್ಲಿ ಸರ್ವೇ ಕಾರ್ಯಕೈಗೊಂಡು ಸೂಕ್ತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಒಂದು ತಿಂಗೊಳಗಾಗಿ ವರದಿ ನೀಡಬೇಕು. ರಸ್ತೆ ಸುರಕ್ಷತೆ ಹಾಗೂ ರಸ್ತೆ ಮಾರ್ಗಸೂಚಿ ನಾಮಫಲಕಗಳನ್ನು ಕಡ್ಡಾಯವಾಗಿ ರಸ್ತೆಪಕ್ಕದಲ್ಲಿ ಅಳವಡಿಸಬೇಕು ಎಂದು ಪಿ.ಡಬ್ಲ್ಯೂಡಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಅಪಘಾತ ವಲಯಗಳನ್ನು ಗುರುತಿಸಿ, ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನಾವಶ್ಯಕ ಹಂಪ್ಸ್‍ಗಳನ್ನು ಅಳವಡಿಸಲಾಗಿದೆ. ಹಾನಗಲ್ ರಸ್ತೆಯಲ್ಲಿ ಅಧಿಕ ಪ್ರಮಾಣದಲ್ಲಿ ಹಂಪ್ಸ್‍ಗಳನ್ನು ಅಳವಡಿಸಲಾಗಿದೆ. ಈ ಕುರಿತು ಮಾಹಿತಿ ಕಲೆಹಾಕಿ ವೈಜ್ಞಾನಿಕವಾಗಿ ಹಂಪ್ಸ್ ಹಾಕಬೇಕು ಹಾಗೂ ಹಂಪ್ಸ್ ಎತ್ತರಗಳನ್ನು ಕಡಿಮೆಗೊಳಿಸುವ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಎಸ್.ಆರ್.ಟಿ.ಸಿ ಬಸ್‍ಗಳು ನಗರದಲ್ಲಿ ಒಬ್ಬ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಪದೇ ಪದೇ ನಿಲುಗಡೆಗೊಳ್ಳುತ್ತಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಗಳಿರುವ ಬಗ್ಗೆ ದೂರುಗಳು ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ 500 ಮೀಟರ್‍ವರೆಗೆ ನಡೆಯುತ್ತಾರೆ. ನಿಗದಿತ ಬಸ್ ಸ್ಟಾಪ್‍ಗಳನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ಬಸ್‍ಗಳನ್ನು ಸ್ಟಾಪ್ ಮಾಡದಂತೆ ಚಾಲಕರಿಗೆ ಸೂಚನೆ ನೀಡಬೇಕು ಹಾಗೂ ಜಿಲ್ಲಾಡಳಿತಕ್ಕೆ, ಕೇಂದ್ರೀಯ ವಿದ್ಯಾಲಯಗಳಿಗೆ ಬಸ್ ಸಂಚಾರದ ಕೊರತೆ ಇರುವುದಾಗಿಯೂ ಸಹ ದೂರುಗಳು ಬಂದಿವೆ. ಕೂಡಲೇ ಸೂಕ್ತ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಯೊಬ್ಬರ ಜೀವ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ರಾಣೇಬೆನ್ನೂರು ತಾಲೂಕು ಮಾಕನೂರನಿಂದ ತಡಸ ಕ್ರಾಸ್‍ವರೆಗೆ ಅಪಘಾತ ವಲಯಗಳ ಸಮೀಪದಲ್ಲಿ 108 ಎಂಬ್ಯುಲನ್ಸ್‍ಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಂಗಮನಕೊಪ್ಪ ಕ್ರಾಸ್, ಊದಗಟ್ಟಿಹಳ್ಳ, ಹಾವನೂರ ಗುತ್ತಲ ಕ್ರಾಸ್ ಹಾಗೂ ಹಾನಗಲ್-ಬೊಮ್ಮನಹಳ್ಳಿ ದರ್ಗಾ ಕ್ರಾಸ್ ಅಪಘಾತ ವಲಯಗಳಾಗಿವೆ. ಜಂಗಮನಕೊಪ್ಪ ಕ್ರಾಸ್‍ನಲ್ಲಿ ಅಪಘಾತ ತಡೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಹಾಗೂ ಉಳಿದ ಸ್ಥಳ ಕಾರ್ಯಾಚರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಘವೇಂದ್ರ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ