ಗುಬ್ಬಿ : ಡಿ.14ಕ್ಕೆ ಲೋಕ್‍ಅದಾಲತ್ ಕಾರ್ಯಕ್ರಮ

ಗುಬ್ಬಿ

    ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳಿಗೆ ರಾಜೀ ಸಂಧಾನ ಮೂಲಕ ಸುಲಭೀಕರಣಗೊಳಿಸಿ ಪ್ರಕರಣ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಲೋಕ್ ಅದಾಲತ್ ಕಾರ್ಯಕ್ರಮವನ್ನು ಡಿಸೆಂಬರ್ 14 ರಂದು ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಫೈರೋಜಾ.ಎಚ್.ಉಕ್ಕಲಿ ತಿಳಿಸಿದರು.

    ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಬಾಕಿ ಇರುವ ಸಣ್ಣ ಪ್ರಕರಣಗಳಲ್ಲಿ ಸಿವಿಲ್ ಕೇಸ್, ಚೆಕ್‍ಬೌನ್ಸ್ ಪ್ರಕರಣ ಹಾಗೂ ಸಾಲ ತಿರುವಳಿ ಮಾಡದ ಪ್ರಕರಣಗಳಿಗೆ ಶೀಘ್ರ ನ್ಯಾಯ ಒದಗಿಸಲು ಸಂಧಾನ ನಡೆಸಲಾಗುವುದು. ಒಟ್ಟಾರೆ 1500 ಪ್ರಕರಣಗಳನ್ನು ಅದಾಲತ್‍ನಲ್ಲಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಆಸಕ್ತಿ ಇರುವ ಪಿರ್ಯಾದಿದಾರರು ಲೋಕ್ ಅದಾಲತ್‍ನಲ್ಲಿ ತಮ್ಮ ತಿರುಗಾಟಕ್ಕೆ ನಿಲುಗಡೆ ಮಾಡಿಕೊಳ್ಳಬಹುದಾಗಿದೆ ಎಂದರು.

  ಹಲವಾರು ವರ್ಷದಿಂದ ಅಲೆದಾಡಿದ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಈ ಅದಾಲತ್‍ಗೆ ವಕೀಲರು ಸಹ ಭಾಗಿಗಳಾಗುತ್ತಾರೆ. ರಾಜೀಸಂಧಾನಕ್ಕೆ ಹಿರಿಯ ವಕೀಲರು ಹಾಗೂ ಖುದ್ದು ನ್ಯಾಯಾಧೀಶರುಗಳು ಸಹ ಹಾಜರಿದ್ದು ಎರಡೂ ಪಾರ್ಟಿಗಳನ್ನು ಒಂದಡೆ ಸೇರಿಸಿ ಚರ್ಚಿಸಿ ಬಗೆಹರಿಸಲಾಗುವುದು. 410 ಪ್ರಕರಣಗಳು ಭೂಮಿ ವಶಕ್ಕೆ ಪಡೆದು ಪರಿಹಾರ ಸಿಗದ ಕೇಸುಗಳಾಗಿವೆ. ಹೇಮಾವತಿ, ಎತ್ತಿನಹೊಳೆ, ಹೀಗೆ ಅನೇಕ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡವರು ಹೆಚ್ಚಾಗಿ ಕೇಸು ದಾಖಲು ಮಾಡಿದ್ದಾರೆ.

   ಜೊತೆಗೆ ಬ್ಯಾಂಕ್ ಸಾಲ ಮರುಪಾವತಿ ಆಗದೆ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣದಲ್ಲಿ ತುಮಕೂರು ಎಸ್‍ಬಿಐನಲ್ಲಿ 32 ಪ್ರಕರಣಗಳಿವೆ. ಗುಬ್ಬಿ ಎಸ್‍ಬಿಐನಲ್ಲಿ 9, ಕೆನರಾ ಬ್ಯಾಂಕ್‍ನಲ್ಲಿ 17, ಕೆಜಿಬಿನಲ್ಲಿ 22 ಹಾಗೂ ಕರ್ನಾಟಕ ಬ್ಯಾಂಕ್‍ನಲ್ಲಿ 21 ಪ್ರಕರಣಗಳಿವೆ ಎಂದರು.

   ಕೃಷಿ ಸಾಲದಲ್ಲಿ ರೈತರಿಗೆ ಸಾಧ್ಯವಾದಷ್ಟು ಬಡ್ಡಿ ಮನ್ನಾ ಮಾಡಿಸುವ ಜೊತೆಗೆ ಇತರೆ ಸಾಲ ಪ್ರಕರಣದಲ್ಲಿ ಬಡ್ಡಿ ಮನ್ನಾ ಮಾಡಿಸಲಾಗುವುದು. ಈ ನಿಟ್ಟಿನಲ್ಲಿ ಸಾಲಗಾರರ ಮುಂದೆ ಬ್ಯಾಂಕ್ ಅಧಿಕಾರಿಗಳನ್ನು ಕರೆತಂದು ಸಾಲ ಪ್ರಕರಣಕ್ಕೆ ಅಂಕಿತ ಇಡಲಾಗುವುದು. ಈ ಕಾರ್ಯಕ್ಕೆ ಡಿಸೆಂಬರ್ 5 ರಿಂದ 14 ರವರೆಗೆ ಹಲವಾರು ಬ್ಯಾಂಕ್ ಸಾಲ ಕೇಸು ಚರ್ಚಿಸಲಾಗುವುದು ಎಂದ ಅವರು, ಡಿ.5 ನೇ ತಾರೀಖು ಗುಬ್ಬಿ ಎಸ್‍ಬಿಐ ಪ್ರಕರಣಗಳು, 6 ರಂದು ಕೆನರಾ ಬ್ಯಾಂಕ್, 7 ರಂದು ಕೆಜಿಬಿ ಮತ್ತು ಕರ್ನಾಟಕ ಬ್ಯಾಂಕ್‍ಗಳ ಕೇಸುಗಳನ್ನು ಇತ್ಯರ್ಥ ಮಾಡಲಾಗುವುದು.

   ಜೊತೆಗೆ 11 ನೇ ತಾರೀಖು ತುಮಕೂರು ಎಸ್‍ಬಿಐ ಕೇಸುಗಳನ್ನು ಬಗೆಹರಿಸಲಾಗುವುದು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಷಡಕ್ಷರಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap