ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್

ದಾವಣಗೆರೆ:

     ನೋವಿನೊಂದಿಗೆ ಕೋರ್ಟ್ ಮಟ್ಟಿಲು ಏರಿರುವ ಕಕ್ಷಿದಾರರು, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡು ನಲಿಯುತ್ತಾ ಮನೆಗೆ ಹೋಗಬೇಕೆಂಬ ಸದುದ್ದೇಶದಿಂದ ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಜುಲೈ 13ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ. ಕುಲಕರ್ಣಿ ತಿಳಿಸಿದರು.

       ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ವಕೀಲರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಲಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳುವ ಪರಿಹಾರ ಪಡೆದು, ಮುಂದಿನ ಜೀವನಕ್ಕೆ ದಾರಿ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರಕರಣ ಶೀಘ್ರ ಇತ್ಯರ್ಥ:

        ಈ ಲೋಕ ಅದಾಲತ್‍ನಲ್ಲಿ ಎರಡೂ ಕಡೆಯ ಕಕ್ಷಿದಾರರ ಮನವೋಲಿಸುವ ಮೂಲಕ ಕಾನೂನು ಚೌಕಟ್ಟಿನಲ್ಲಿ ರಾಜಿ ಸಂಧಾನದ ಮಾಡಿ, ಶೀಘ್ರವೇ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಕಕ್ಷಿದಾರರ ಸಮಯ, ಹಣ ಉಳಿತಾಯ ಆಗಲಿದೆ. ಅಲ್ಲದೇ, ಎರಡೂ ಕಡೆಯವರಲ್ಲಿ ವೈಮನಸ್ಸು ಕಡಿಮೆಯಾಗಿ, ಶತೃಗಳಾಗಿ ಬಂದವರು ಮಿತ್ರರಾಗಿ ಮನೆಗೆ ಹೋಗಲಿದ್ದಾರೆ ಎಂದರು.

ಯಾವ್ಯಾವ ಕೇಸ್ ಪರಿಹಾರ:

        ಲೋಕ ಅದಾಲತ್‍ನ ರಾಜಿ ಸಂಧಾನದ ಮೂಲಕ ಸಿವಿಲ್ ಪ್ರಕರಣಗಳು, ಜೀವನಾಂಶ, ಮೋಟರ್ ವೆಹಿಕಲ್ ಪ್ರಕರಣ, ವಿವಾಹ ವಿಚ್ಛೇದನ, ಭೂ ಸ್ವಾಧೀನ, ವಿವಾಹ ಪುನರ್ ಜೀವನ ಪ್ರಕರಣಗಳನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಈ ಪ್ರಕರಣಗಳನ್ನು ಕೋರ್ಟ್‍ಗಳಲ್ಲೇ ಎಳೆಯುತ್ತಾ ಹೋದರೆ, ಇತ್ಯರ್ಥ ಆಗಲು ವರ್ಷಾನುಗಟ್ಟಲೇ ಕಾಯಬೇಕಾಗುತ್ತದೆ.

       ಒಂದು ವೇಳೆ ಸ್ಥಳೀಯ ನ್ಯಾಯಾಲಯಗಳಲ್ಲಿ ಇತ್ಯರ್ಥವಾದರೆ, ಹೈಕೋರ್ಟ್, ಸುಪ್ರೀಂ ಕೋರ್ಟ್‍ಗಳಲ್ಲಿ ಅಪೀಲು ಸಲ್ಲಿಸುವುದರಿಂದ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲು ಏರಿರುವವರು ವೃದ್ಧರಾಗಿ ಎಲ್ಲವನ್ನೂ ಕಳೆದುಕೊಂಡ ಮೇಲೆ ಪ್ರಕರಣ ಇತ್ಯರ್ಥ ಆಗುವ ಸಾಧ್ಯತೆ ಇದೆ. ಆದರೆ, ಲೋಕ ಅದಾಲತ್‍ನಲ್ಲಿ ರಾಜಿ ಯಾದರೆ, ಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶವೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದು ಬರಲ್ಲ:

       ಹತ್ಯೆ, ಕೊಲೆ ಯತ್ನ, ಅತ್ಯಾಚಾರ, ಪೋಕ್ಸೋ, ಜಾತಿ ನಿಂದನೆ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಲು ಅವಕಾಶವಿಲ್ಲ. ಇವುಗಳನ್ನು ರೆಗ್ಯೂಲರ್ ಕೋರ್ಟ್‍ಗಳಲ್ಲಿಯೇ ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದರು.

35 ಸಾವಿರ ಪ್ರಕರಣ ಬಾಕಿ:

        ಜಿಲ್ಲೆಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಈ ಪೈಕಿ ಅಂದಿನ ಲೋಕ ಅದಾಲತ್‍ನಲ್ಲಿ ಕನಿಷ್ಠ ಐದಾರು ಸಾವಿರ ಪ್ರಕರಣಗಳನ್ನು ಇತ್ಯರ್ಥ ಪಡಿಬೇಕೆಂಬ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಅರ್ಜಿ ಸಲ್ಲಿಸುವ ವಿಧಾನ:

         ಲೋಕ ಅದಾಲತ್ ಮೂಲಕ ರಾಜಿ ಸಂಧಾನ ಮಾಡಿಕೊಂಡು ಪ್ರಕರಣ ಇತ್ಯರ್ಥಪಡಿಸಿಕೊಳ್ಳಲಿಚ್ಛಿಸುವ ಕಕ್ಷಿದಾರರು, ತಮ್ಮ, ತಮ್ಮ ವಕೀಲರ ಮೂಲಕ ರಾಜಿ ಪತ್ರದೊಂದಿಗೆ ಅರ್ಜಿ ಸಲ್ಲಿಸಿ, ಪರಿಹಾರ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್ ಬಡಿಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap