ಹಾವೇರಿ
ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಇದೇ ಮೇ 23ರ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆ ಫಲಿತಾಂಶ ಹೊರಬೀಳಲಿದೆ.
ದೇವಗಿರಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದೆ. ಈ ಉದ್ದೇಶಕ್ಕಾಗಿ ಎಂಟು ಕೊಠಡಿಗಳನ್ನು ಸಜ್ಜುಗೊಳಿಸಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್ಗಳನ್ನು ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನ ಹಾಗೂ ಸೇವಾ ಮತಗಳ ಎಣಿಕೆಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಹಾಗೂ ವೀಕ್ಷಕರಿಗೆ ಚುನಾವಣಾ ಅಧಿಕಾರಿಗಳಿಗೆ, ಮಾಧ್ಯಮ ಹಾಗೂ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 15 ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಪ್ರದರ್ಶಕದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಒಟ್ಟು ಮತಗಳನ್ನು ಪ್ರದರ್ಶಿಸಲಾಗುತ್ತದೆ. ಸುವಿಧಾ ಆಪ್ ಮೂಲಕ ಮತದಾನದ ವಿವರವನ್ನು ಆನ್ಲೈನ್ ಮೂಲಕ ಅಪ್ಲೋಡಮಾಡುವ ವ್ಯವಸ್ಥೆ ಮಾಡಲಾಗಿದೆ.
ಎಣಿಕೆಗಾಗಿ ಒಟ್ಟಾರೆ 126 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. 153 ಕೌಂಟಿಂಗ್ ಮೇಲ್ವಿಚಾರಕರು, 153 ಎಣಿಕೆ ಸಹಾಯಕರು, 157 ಎಣಿಕೆ ಸೂಕ್ಷ್ಮ ವೀಕ್ಷಕರು, 144 ಭದ್ರತಾ ಕೊಠಡಿ ಸಹಾಯಕ ಸಿಬ್ಬಂದಿ, 80 ಟ್ಯಾಬುಲೇಷನ್ ಸ್ಟಾಫ್ ಸೇರಿದಂತೆ 703 ಸಿಬ್ಬಂದಿಗಳು ಎಣಿಕೆ ಕಾರ್ಯಕ್ಕೆ ನೆರವಾಗಲಿದ್ದಾರೆ. ಮತ ಎಣಿಕೆ ದಿನವಾದ ಮೇ 23ರ ಬೆಳಿಗ್ಗೆ 5-30 ಗಂಟೆಗೆ ಕೇಂದ್ರ ಚುನಾವಣಾ ವೀಕ್ಷಕರ ಎದುರು ತರಬೇತಿ ಪಡೆದ ಎಣಿಕೆ ಸಿಬ್ಬಂದಿಗಳ ಅಂತಿಮ ಹಂತದ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಿ ಯಾವ ಟೇಬಲ್ಗೆ ಯಾವ ಸಿಬ್ಬಂದಿ ಎಂದು ನಿಯೋಜಿಸಲಾಗುತ್ತದೆ.
ಮತ ಎಣಿಕೆ ಪ್ರಕ್ರಿಯೆ:
ಮೇ 23 ರಂದು ಬೆಳಿಗ್ಗೆ 7-30ಕ್ಕೆ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಣಿಕೆ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಮತ ಯಂತ್ರಗಳನ್ನು ಎಣಿಕೆ ಕೊಠಡಿಗೆ ಸಾಗಿಸಲಾಗುವುದು. ಬೆಳಿಗ್ಗೆ 8-00 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ, ಬೆಳಿಗ್ಗೆ 8-30ಕ್ಕೆ ಇ.ವಿ.ಎಂ.ಗಳ ಎಣಿಕೆ ಪ್ರಾರಂಭಿಸಲಾಗುತ್ತದೆ.
ಕ್ಷೇತ್ರದಲ್ಲಿ 1972 ಮತಗಟ್ಟೆಗಳ ಇ.ವಿ.ಎಂ.ಗಳ ಮತ ಎಣಿಕೆ ಕಾರ್ಯ 16 ರಿಂದ 20 ಸುತ್ತು ಮತ ಎಣಿಕೆ ನಡೆಯಲಿದೆ. 65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 250 ಮತಗಟ್ಟೆಗಳಲ್ಲಿ 1,51,250 ಮತ ಚಲಾವಣೆಗೊಂಡಿದ್ದು 18 ಸುತ್ತು ಮತ ಎಣಿಕೆ ನಡೆಯಲಿದೆ. 66-ಗದಗ ವಿಧಾನಸಭಾ ಕ್ಷೇತ್ರದಲ್ಲಿ 223 ಮತಗಟ್ಟೆಗಳಲ್ಲಿ 1,59,783 ಮತ ಚಲಾವಣೆಗೊಂಡಿದ್ದು 16 ಸುತ್ತು ಮತ ಎಣಿಕೆ ನಡೆಯಲಿದೆ.
67-ರೋಣ ವಿಧಾನಸಭಾ ಕ್ಷೇತ್ರದಲ್ಲಿ 267 ಮತಗಟ್ಟೆಗಳಲ್ಲಿ 1,58,573 ಮತ ಚಲಾವಣೆಗೊಂಡಿದ್ದು 20 ಸುತ್ತು ಮತ ಎಣಿಕೆ ನಡೆಯಲಿದೆ. 82 ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 239 ಮತಗಟ್ಟೆಗಳಲ್ಲಿ 1,59,811 ಮತ ಚಲಾವಣೆಗೊಂಡಿದ್ದು 18 ಸುತ್ತು ಮತ ಎಣಿಕೆ ನಡೆಯಲಿದೆ. 84-ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ 257 ಮತಗಟ್ಟೆಗಳಲ್ಲಿ 1,65,741 ಮತ ಚಲಾವಣೆಗೊಂಡಿದ್ದು 19 ಸುತ್ತು ಮತ ಎಣಿಕೆ ನಡೆಯಲಿದೆ. 85-ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 241 ಮತಗಟ್ಟೆಗಳಲ್ಲಿ 1,58,422 ಮತ ಚಲಾವಣೆಗೊಂಡಿದ್ದು 17 ಸುತ್ತು ಎಣಿಕೆ ನಡೆಯಲಿದೆ.
86-ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 229 ಮತಗಟ್ಟೆಗಳಲ್ಲಿ 1,42,708 ಮತ ಚಲಾವಣೆಗೊಂಡಿದ್ದು 16 ಸುತ್ತು ಎಣಿಕೆ ನಡೆಯಲಿದೆ ಹಾಗೂ 87-ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳಲ್ಲಿ 1,66,921 ಮತ ಚಲಾವಣೆಗೊಂಡಿದ್ದು 19 ಸುತ್ತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿಪ್ಯಾಟ್ಗಳ ಮತ ಎಣಿಕೆ ನಡೆಯಲಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಎಣಿಕೆ ಸಿಬ್ಬಂದಿಗಳಿಗೆ, ಏಜೆಂಟರುಗಳಿಗೆ ಪ್ರತ್ಯೇಕ ಬಣ್ಣದ ಪಾಸ್ಗಳನ್ನು ವಿತರಿಸಲಾಗಿದೆ. ಅಭ್ಯರ್ಥಿಗಳ ಪರ 129 ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಾಸ್ ಹೊಂದಿದವರಿಗೆ ಮಾತ್ರ ಎಣಿಕೆ ಕೇಂದ್ರಕ್ಕೆ ಪ್ರವೇಶಾವಕಾಶ ಕಲ್ಪಿಸಿದೆ. ಎಣಿಕೆ ಕೇಂದ್ರದೊಳಗೆ ಫೋಟೋಗ್ರಫಿ, ವಿಡಿಯೋಗ್ರಫಿಗೆ ಅವಕಾಶವಿಲ್ಲ. ಮೊಬೈಲ್, ಟ್ಯಾಬ್, ಲ್ಯಾಪಟಾಪ್ ಇತರೆ ಎಲೆಕ್ಟ್ರಾನಿಕ್ ವಸ್ತುಗಳು, ಬೆಂಕಿಪಟ್ಟಣ, ಬಿಡಿ, ಸಿಗರೇಟ್, ನೀರಿನ ಬಾಟಲ್, ಸ್ಫೋಟ್ಕಗಳು, ತಂಬಾಕು ಉತ್ಪನ್ನಗಳನ್ನು, ಬ್ಲೇಡ್, ಆಯುಧ, ಎಲೆ ಅಡಿಕೆ, ಗುಟಕಾ ಅಗ್ನಿಜನ್ಯವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ವಾಹನ ನಿಲುಗಡೆ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಪ್ರವೇಶ ಮಾರ್ಗವನ್ನು ಜಿಲ್ಲಾ ಪೊಲೀಸ್ ಇಲಾಖೆ ಗುರುತಿಸಿದೆ. ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಕಟ್ಟಡದ ಸುತ್ತಲೂ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಬಂದೋಬಸ್ತಗಾಗಿ ನಾಲ್ಕು ಜನ ಡಿ.ವೈ.ಎಸ್.ಪಿ., 11 ಜನ ಇನ್ಸಪೆಕ್ಟರ್, 21 ಜನ ಸಬ್ ಇನ್ಸಪೆಕ್ಟರ್, ನಾಲ್ಕು ಕೆ.ಎಸ್.ಆರ್.ಪಿ.ತುಕಡಿ, 11 ಡಿ.ಎ.ಆರ್.ತುಕಡಿ ಹಾಗೂ 200 ಜನ ಹೋಮ್ಗಾರ್ಡ್ ಹಾಗೂ ಸಾಕಷ್ಟು ಪೊಲೀಸ್ ಪೇದೆಗಳನ್ನು ನಿಯೋಜಿಸಿ ಬಿಗಿ ಪಹರೆ ಹಾಕಲಾಗಿದೆ.
ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆಯಿಂದಲೇ (ಮೇ 23 ರಂದು) ಅಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12-00 ಗಂಟೆವರೆಗೆ ಮದ್ಯಪಾನ ಹಾಗೂ ಮದ್ಯಮಾರಾಟ ನಿಷೇಧಿಸಲಾಗಿದೆ. 144 ಕಲಂ ಜಾರಿಗೊಳಿಸಲಾಗಿದೆ. ವಿಜಯೋತ್ಸವ ಆಚರಿಸಲು ನಿರ್ಭಂದ ಹೇರಲಾಗಿದೆ. ಮೆರವಣಿಗೆ, ಸಭೆ-ಸಮಾರಂಭಕ್ಕೂ ಅವಕಾಶವಿರುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
