ಲೋಕಸಭೆಗೆ ಕಾಂಗ್ರೆಸ್ ಹುರಿಯಾಳು ಯಾರು?

ದಾವಣಗೆರೆ

       2019ರ ಲೋಕಸಭಾ ಚುನಾವಣೆಗೆ ಭಾನುವಾರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದರೇ ಅಖಾಡಕ್ಕಿಳಿಯುವ ಎಲ್ಲಾ ಮುನ್ಸೂಚನೆಗಳಿವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದೆಂಬ ಕುತೂಹಲ ಜಿಲ್ಲೆಯ ಜನರನ್ನು ಕೆರಳಿಸಿದೆ.

         ಹೌದು… ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಈಗಾಗಲೇ ಬಿಜೆಪಿಯಿಂದ ಕಣಕ್ಕಿಳಿಯಲು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಬಿರುಸಿನ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್‍ನಿಂದ ಸಿದ್ದೇಶ್ವರ ವಿರುದ್ಧ ಅಖಾಡಕ್ಕೆ ಇಳಿಯುವ ಹುರಿಯಾಳು ಯಾರು? ಎಂಬ ಚರ್ಚೆ ಜಿಲ್ಲಾದ್ಯಂತ ನಡೆಯುತ್ತಿದೆ.

         ಹಾಲಿ ಬಿಜೆಪಿ ವಶದಲ್ಲಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ಶಕ್ತಿ ಶಾಮನೂರು ಕುಟುಂಬಕ್ಕೆ ಮಾತ್ರವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಹಲವು ಅಭಿವೃದ್ಧಿ ಕೆಲಸ ಮಾಡಿದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಮತದಾರರು ತಮ್ಮನ್ನು ಕೈಬಿಟ್ಟರು ಎಂಬ ಕಾರಣಕ್ಕೆ ಮುನಿಸಿಕೊಂಡು, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನೆಯಲ್ಲಿ ಕೂತಿದ್ದಾರೆ.

          ಹೀಗಾಗಿ ಮಲ್ಲಿಕಾರ್ಜುನ್ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಕೆಲ ದಿನಗಳ ಹಿಂದೆ ದಾವಣಗೆರೆಯ ಅಭಿನವ ರೇಣುಕಾ ಮಂದಿರದಲ್ಲಿ ಬೃಹತ್ ಸಭೆ ನಡೆಸಿ, ಮಲ್ಲಿಕಾರ್ಜುನ್ ಅವರ ಮನೆಯ ವರೆಗೂ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್, ವಡ್ನಾಳ್ ರಾಜಣ್ಣ, ಡಿ.ಜಿ. ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ತೆರಳಿ ನೀವೇ ಅಭ್ಯರ್ಥಿಯಾಗಬೇಕೆಂದು ಮನವೋಲಿಸಲು ಪ್ರಯತ್ನಿಸಿದರೂ ಸಹ ಮಲ್ಲಿಕಾರ್ಜುನ್ ಅವರು ಲೋಕಸಭಾ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ.

          ಅಂದು ತಮ್ಮನ್ನು ಭೇಟಿ ಮಾಡಿದ ಅಭಿಮಾನಿಗಳು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೊತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದ್ದರು. ಹೀಗಾಗಿ ನಾ ಅಭ್ಯರ್ಥಿಯಾಗುವುದರ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ಈ ಬಗ್ಗೆ ಕಾರ್ಯಕರ್ತರು, ವರಿಷ್ಠರ ಜತೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು.

          ಆದರೆ, ಈಗಾಗಲೇ ಚುನಾವಣಾ ಆಯೋಗ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದರೂ ಸಹ ಮಲ್ಲಿಕಾರ್ಜುನ್ ಅವರು ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಈ ಬಾರಿ ಮಲ್ಲಣ್ಣ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೋ, ಇಲ್ಲವೋ ಎಂಬ ಗೊಂದಲ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಮನೆ ಮಾಡಿದೆ.

         ಇನ್ನೊಂದು ಮೂಲದ ಪ್ರಕಾರ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರೇ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆಂಬ ಚರ್ಚೆಯೂ ನಡೆಯುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಶಾಮನೂರು ಶಿವಶಂಕರಪ್ಪನವರು ಸಹ ತಮಗೆ ಹೈಕಮಾಂಡ್ ಟಿಕೇಟ್ ನೀಡಿದರೇ, ಸ್ಪರ್ಧಿಸುವುದಾಗಿ ಮಾಧ್ಯಮಗಳ ಎದುರು ಘೋಷಿಸಿದ್ದರು.

          ಈ ಎಲ್ಲಾ ಕಾರಣಗಳಿಂದ ಹಾಲಿ ಸಂಸದ, ಬಿಜೆಪಿಯ ಸಂಭವನೀಯ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪನವರು ಕಣಕ್ಕಿಳಿಯುತ್ತಾರೋ, ಇಲ್ಲವೋ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಖಾಡಕ್ಕೆ ಇಳಿಯುತ್ತಾರೋ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap