ಬೆಂಗಳೂರು
ಮನೆಯಂದ ಹೊರಗೆ ಬಂದಿದ್ದ ಜಲ್ಲಿಕಲ್ಲು ಲಾರಿ ಚಾಲಕನನ್ನು ಉಸಿರುಗಟ್ಟಿಸಿ, ಕುತ್ತಿಗೆ ಬಿಗಿದು ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಗೇನಹಳ್ಳಿ ದಿಣ್ಣೆ ಬಳಿ ನಡೆದಿದೆ.ನಾಗೇನಹಳ್ಳಿಯ ಮುನಿರಾಜು (೪೦) ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಜಲ್ಲಿಕಲ್ಲು ಲಾರಿ ಚಾಲಕನಾಗಿದ್ದ ಮುನಿರಾಜು ಕಳೆದ ಸೆ. ೨೮ರ ರಾತ್ರಿ ಮನೆಗೆ ಬಂದು ಹೊರಗಡೆ ಹೋಗಿ ಬರುವುದಾಗಿ ಹೇಳಿಹೋಗಿದ್ದು, ಅರ್ಧಗಂಟೆಯಲ್ಲೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಕುಡಿತದ ಚಟ ಅಂಟಿಸಿಕೊಂಡಿದ್ದ ಮುನಿರಾಜು ಆಗಾಗ ಮನೆಯಿಂದ ಹೊರಹೋಗುವುದು ಸಾಮಾನ್ಯವಾಗಿದ್ದರಿಂದ ಮನೆಯವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನಿನ್ನೆ ಮಧ್ಯಾಹ್ನ ನಾಗೇನಹಳ್ಳಿ ದಿಣ್ಣೆಯ ರಸ್ತೆ ಬಳಿ ಕತ್ತು ಹಿಸುಕಿ ಕೊಲೆ ಮಾಡಿದ ಮುನಿರಾಜು ಅವರ ಮೃತದೇಹ ಪತ್ತೆಯಾಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಕೊತ್ತನೂರು ಪೊಲೀಸರು ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಮದ್ಯವ್ಯಸನಿಯಾಗಿದ್ದ ಮುನಿರಾಜು ಜಗಳ ಮಾಡುತ್ತಿದ್ದ ಬೇಸತ್ತ ಪತ್ನಿ ಬಾಗಲೂರಿನ ಕಣ್ಣೂರಿಗೆ ಹೋಗಿದ್ದರು. ೧೦ ದಿನಗಳ ಹಿಂದೆ ಅಲ್ಲಿಗೂ ಹೋಗಿ ಮುನಿರಾಜು ಜಗಳ ಮಾಡಿದ್ದು, ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪತಿ – ಪತ್ನಿ ಇಬ್ಬರನ್ನೂ ಠಾಣೆಗೆ ಕರೆಸಿ, ಬುದ್ಧಿ ಹೇಳಿ ಕಳುಹಿಸಲಾಗಿತ್ತಾದರೂ, ಪತ್ನಿ, ಮಕ್ಕಳೊಂದಿಗೆ ಕಣ್ಣೂರಿನಲ್ಲೇ ಉಳಿದಿದ್ದು, ಮುನಿರಾಜು, ತಂದೆ – ತಾಯಿ ಮನೆಗೆ ವಾಪಸ್ಸಾಗಿದ್ದ. ಆತನನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿರುವ ಕೊತ್ತನೂರು ಪೊಲೀಸರು , ಕೊಲೆ ಮಾಡಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ. ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








