ಹಾವೇರಿ
ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ವೆಚ್ಚ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದರು
ಸೋಮವಾರ ಸಂಜೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಗುರುತಿನ ಚಿಹ್ನೆಗಳನ್ನು ಹಂಚಿಕೆಮಾಡಿ ಮಾದರಿ ನೀತಿ ಸಂಹಿತೆ ಕುರಿತಂತೆ ಮಾಹಿತಿ ನೀಡಿದರು.
ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಚುನಾವಣಾ ಪ್ರಚಾರ ಸಭೆಗಳು, ಸಮಾರಂಭಗಳ ಆಯೋಜನೆ ಮುನ್ನ ಸಹಾಯಕ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಒಂದೊಮ್ಮೆ ಪೂರ್ವಾನುಮತಿ ಪಡೆಯದಿದ್ದರೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಪ್ರಜಾಪ್ರಾತಿನಿಧಿಕ ಕಾಯ್ದೆ ಅನುಸಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಾಹನಗಳು, ಪ್ರಚಾರ ಸಾಮಗ್ರಿಗಳು, ಧ್ವನಿವರ್ಧಕ, ಆಡಿಯೋ, ವಿಡಿಯೋ, ಎಸ್.ಎಂ.ಎಸ್. ಸೇರಿದಂತೆ ಎಲ್ಲ ರೀತಿಯ ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆಯುವುದು ಅಗತ್ಯವಾಗಿದೆ. ಈಗಾಗಲೇ ಪ್ರಚಾರ ಸಾಮಗ್ರಿ ಹಾಗೂ ವಾಹನಗಳ ಬಾಡಿಗೆ ಕುರಿತಂತೆ ದರಗಳನ್ನು ನಿಗದಿಮಾಡಿ ಪ್ರಕಟಿಸಲಾಗಿದೆ. ಈ ದರಗಳನ್ವಯ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ದಾಖಲಿಸಲಾಗುವುದು ಎಂದು ತಿಳಿಸಿದರು.
ಚುನಾವಣಾ ವೆಚ್ಚ ಕುರಿತಂತೆ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬೇಕು. ಪ್ರತ್ಯೇಕ ರಿಜಿಸ್ಟರ್‍ನಲ್ಲಿ ದಾಖಲಿಸಿ ಚುನಾವಣಾ ವೆಚ್ಚ ವೀಕ್ಷಕರಿಗೆ ಕಾಲಕಾಲಕ್ಕೆ ಸಲ್ಲಿಸಬೇಕು. ಚುನಾವಣಾ ವೆಚ್ಚಕ್ಕಾಗಿ ಅಭ್ಯರ್ಥಿಗಳು ತೆರೆದಿರುವ ಬ್ಯಾಂಕ್ ಖಾತೆ ಮೂಲಕವೇ ನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರತಿ ಅಭ್ಯರ್ಥಿಗೆ ಭಾರತ ಚುನಾವಣಾ ಆಯೋಗ 70 ಲಕ್ಷ ರೂ. ವರೆಗೆ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ. ಈ ಮಿತಿಯೊಳಗೆ ವೆಚ್ಚ ನಿರ್ವಹಿಸಬೇಕು. ಪಾರದರ್ಶಕವಾಗಿ ವೆಚ್ಚದ ವಿವರವನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಬಗೆಗೆ ಯಾವುದೇ ಗೊಂದಲಗಳಿದ್ದರೂ ಸಹಾಯಕ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಸಿ ಸ್ಪಷ್ಟನೆ ಪಡೆದುಕೊಳ್ಳಿ. ಸುಮಗ ಹಾಗೂ ನೈತಿಕ ಪಾರದರ್ಶಕ ಚುನಾವಣೆಗೆ ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಗಳನ್ನು ಅನುಸರಿಸಲು ಸಲಹೆ ನೀಡಿದರು.ಕೇಂದ್ರ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ. ಅಖ್ತರ್ ರಿಯಾಜ್, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಚುನಾವಣಾ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಅಧಿಕೃತ ಪ್ರತಿನಿಧಿಗಳು ಉಪಸ್ಥಿತರಿದ್ದರು.