ಬಿ ಎಸ್ ವೈಗೆ ಮಗ್ಗಲಮುಳ್ಳಾದ ಸ್ವಜಾತಿ ಪ್ರೇಮಿ ಮಾಧುಸ್ವಾಮಿ..!

ಹುಳಿಯಾರು

     ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸ್ವಜಾತಿ ಪ್ರೇಮಿ ಮಾಧುಸ್ವಾಮಿ ಅವರು ಮಗ್ಗಲಮುಳ್ಳಾಗಿದ್ದು ಸಚಿವ ಸಂಪುಟದಿಂದ ಇವರನ್ನು ಕೈ ಬಿಡದಿದ್ದರೆ ಸರ್ಕಾರದ ವಿರುದ್ಧ ಜನ ತಿರುಗಿ ಬೀಳುತ್ತಾರೆ ಎಚ್ಚರ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಎಚ್ಚರಿಸಿದರು.

     ಹುಳಿಯಾರಿನ ಪೆಟ್ರೋಲ್ ಬಂಕ್ ಮುಂದಿನ ಸರ್ಕಲ್‍ಗೆ ಕನಕದಾಸ ವೃತ್ತ ಎಂದೇ ಮರು ನಾಮಕರಣ ಮಾಡುವಂತೆಯೂ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿಯವರ ನಡವಳಿಕೆ ಮತ್ತು ಧೋರಣೆ ಖಂಡಿಸಿ ಗುರುವಾರ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವರು, ಸಂತರು, ಮಠ, ಸ್ವಾಮೀಜಿ ಹಾಗೂ ಎಲ್ಲಾ ಜಾತಿಜನರ ಮೇಲೆ ಅಪಾರ ಭಕ್ತಿ, ಗೌರವ, ಪ್ರೀತಿ, ಅಭಿಮಾನ ಉಳ್ಳವರಾಗಿದ್ದಾರೆ. ಹಾಗಾಗಿಯೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಠಗಳಿಗೆ, ಜಾತಿ ಸಂಘಗಳಿಗೆ ಉದಾರವಾದ ಧನ ಸಹಾಯ ಮಾಡಿದ್ದರು. ಸರ್ಕಾರ ಕನಕ ಜಯಂತಿ ಆಚರಿಸುವಂತೆಯೂ, ಕನಕ ಪ್ರಾಧಿಕಾರಕ್ಕೆ ಧನ ಸಹಾಯವನ್ನೂ ಮಾಡಿದ್ದರು. ಹಾಗಾಗಿ ನಮಗೆ ಯಡಿಯೂರಪ್ಪ ಮೇಲೆ ಗೌರವವಿದೆ. ಅದರೆ ಅವರ ಸಚಿವ ಸಂಪುಟದಲ್ಲಿರುವ ಮಾಧುಸ್ವಾಮಿ ಅವರು ಸ್ವಜಾತಿ ಪ್ರೇಮಿಯಲ್ಲದೆ ಸ್ವಾಮೀಜಿಗಳನ್ನು ಅಗೌರವವಾಗಿ ಕಾಣುತ್ತಾರೆ. ಅಲ್ಲದೆ ವಿತಂಡವಾದಿಯೂ, ಮೊಂಡುಸ್ವಬಾವದವೂ ಆಗಿದ್ದು ಅವರಿಂದ ಸಮಾಜಿಕ ನ್ಯಾಯ ನಿರೀಕ್ಷೆ ಮಾಡಲಾಗದು ಎಂದು ಕುಟುಕಿದರು.

     ಮತ್ತೊರ್ವ ಮಾಜಿ ಶಾಸಕ ಬಿ.ಲಕ್ಕಪ್ಪ ಅವರು ಮಾತನಾಡಿ ಸಚಿವ ಮಾಧುಸ್ವಾಮಿ ಅವರು ನಾನೊಬ್ಬನೇ ಕಾನೂನು ಪಂಡಿತ, ನನಗೊಬ್ಬನಿಗೇ ಎಲ್ಲವೂ ಗೊತ್ತು, ನಾನೊಬ್ಬನೇ ತ್ರಿಕಾಲ ಜ್ಞಾನಿ ಎನ್ನುವಂತೆ ವರ್ತಿಸುತ್ತಾರೆ. ಪರಿಣಾಮ ಹುಳಿಯಾರು ಕನಕ ವೃತ್ತದ ಬಗ್ಗೆ ತಮ್ಮ ಗುಪ್ತಚರ ಇಲಾಖೆಯಿಂದಲೂ ಮಾಹಿತಿ ಪಡೆಯದೆ, ತಮ್ಮ ನಂಬಿಕಸ್ತ ಮೂಲಗಳಿಂದ ವಿಚಾರ ತಿಳಿದುಕೊಳ್ಳದೆ ಏಕಾಏಕಿ ಶಾಂತಿ ಸಭೆ ನಡೆಸಿ ಅಲ್ಲಿ ಕನಕವೃತ್ತ ಇರಲೇ ಇಲ್ಲ ಎನ್ನುವ ವಿತಂಡ ವಾದ ಮಂಡಿಸಿ ವಿವಾದ ಸೃಷ್ಠಿಸಿದ್ದಾರೆ. ಇನ್ನಾದರೂ ಕನಕರ “ನಾನು” ಹೋದರೆ ಹೊದೇನು ಸಂದೇಶದಂತೆ ಮಾಧುಸ್ವಾಮಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

     ಚಿಕ್ಕನಾಯಕನಹಳ್ಳಿಯ ಕುರುಬ ಮುಖಂಡ ಸಿ.ಡಿ.ಚಂದ್ರಶೇಖರ್ ಅವರು ಮಾತನಾಡಿ ಸಿದ್ಧರಾಮ್ಯಯ ಅವರು ಶಿವಕುಮಾರಸ್ವಾಮೀಜಿಗೆ ಭಾರತ ರತ್ನ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕಾಗಿನೆಲೆ ಶ್ರೀಗಳೂ ಸಹ ಬೇರೆ ವೃತ್ತಕ್ಕೆ ಶಿವಕುಮಾರ ಸ್ವಾಮಿ ವೃತ್ತ ಎಂದು ನಾಮಕರಣ ಮಾಡಿ 15 ವರ್ಷಗಳಿಂದ ನಾಮಫಲಕವಿಟ್ಟು ಕನಕ ಜಯಂತಿ ಮಾಡುತ್ತಿರುವ ಪೆಟ್ರೋಲ್ ಬಂಕ್ ವೃತ್ತಕ್ಕೆ ಕನಕನ ಹೆಸರಿಡಿ ಎಂದಿದ್ದಾರೆ. ಹಾಗಾಗಿ ನಮ್ಮ ಹೋರಾಟ ಶಿವಕುಮಾರ ಸ್ವಾಮೀಜಿ ಅಥವಾ ಲಿಂಗಾಯಿತರ ವಿರುದ್ಧವಲ್ಲ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂಬುದನ್ನು ಸಚಿವರು ಮನಗಂಡು ಜಾತಿಜಾತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡದೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಇಟ್ಟುಕೊಳ್ಳಬೇಕಿದೆ ಎಂದರು.

     ಈ ಸಂದರ್ಬದಲ್ಲಿ ತುಮಕೂರು ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಸೇರಿದಂತೆ ಎಲ್ಲಾ ತಾಲೂಕುಗಳ ಕುರುಬ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು, ಸೇರಿದಂತೆ ವಿವಿಧ ಜಾತಿಜನರೂ ಕೂಡ ಪಕ್ಷಾತೀತವಾಗಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap