ಬ್ಯಾಡಗಿ:
ತಾಲೂಕಿನ ಸುಪ್ರಸಿದ್ದ ಅಗಸನಹಳ್ಳಿ ಗ್ರಾಮದಲ್ಲಿ 38 ನೇ ವರ್ಷದ ಶ್ರೀ ಮಹಾದೇವರ ರಥೋತ್ಸವ ಹಾಗೂ ಜಾತ್ರೋತ್ಸವವು ಸಡಗರ ಹಾಗೂ ಸಂಭ್ರಮದಿಂದ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ವಿಜೃಂಬಣೆಯಿಂದ ನಡೆದು, ಭಕ್ತರು ಶ್ರೀ ಮಹಾದೇವರ ಕೃಪೆಗೆ ಪಾತ್ರರಾದರು.
ಮುಂಜಾನೆ 9 ಘಂಟೆಗೆ ಶ್ರೀ ಮಹಾದೇವರ ಮಹಾರಥೋತ್ಸವವು ಬಹು ವಿಜೃಂಭಣೆಯಿಂದ ಪ್ರಾರಂಭಗೊಂಡಿತು. ರಥೋತ್ಸವವು ದೇವಸ್ಥಾನದಿಂದ ಗುಗ್ಗಳ ಹಾಗೂ ಪುರವಂತರೊಡಗೂಡಿ ಸಕಲ ವಾದ್ಯ ವೈಭವದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ತಾಲೂಕಿನ ಶ್ರೀ ಕ್ಷೇತ್ರವೆಂದೇ ಪ್ರಖ್ಯಾತಿಯಾಗಿರುವ ಶ್ರೀ ಮಹಾದೇವರ ರಥೋತ್ಸವಕ್ಕೆ ಭಕ್ತರು ರಾಜ್ಯದ ಅನೇಕ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಗರೋಪಾದಿಯಲ್ಲಿ ಭಕ್ತರು ಶ್ರೀ ಮಹಾದೇವರ ದರ್ಶನ ಪಡೆದು ಧನ್ಯತೆ ಮೆರೆದರು.
ಶ್ರೀ ಮಹಾದೇವರ ಮಹಾರಥೋತ್ಸವದ ಮುಕ್ತಾಯದ ನಂತರ ಸರ್ವ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಗ್ರಾಮದ ಧುರೀಣರಾದ ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬೀರಣ್ಣ ಬಣಕಾರ, ನಾಗೇಶ ಗುತ್ತಲ, ಗುಡ್ಡಪ್ಪ ಕನವಳ್ಳಿ, ಮಹದೇವಪ್ಪ ಗಾಜಿ, ಭರಮಪ್ಪ ಗಾಜೇರ, ಗುಡ್ಡಪ್ಪ ಹಳ್ಳಳ್ಳಿ, ಹನುಮಂತಪ್ಪ ಪೂಜಾರ, ಚಂದ್ರಪ್ಪ ಪೂಜಾರ, ಈರಣ್ಣ ಹುರಿಗೆಜ್ಜಿ, ನಿಂಗಪ್ಪ ಕನವಳ್ಳಿ, ಸುಭಾಸ ದಾವಣಗೇರಿ, ಉಜ್ಜಪ್ಪ ತಾವರಗಿ, ಪ್ರಕಾಶ ತಾವರಗಿ, ಮಂಜಪ್ಪ ಬಣಕಾರ, ಭರಮಪ್ಪ ಬೆಳಕೇರಿ, ಈರಣ್ಣ ಗಾಡಗೋಳಿ, ಚೆನ್ನಪ್ಪ ಪುಜಾರ ಸೇರಿದಂತೆ ಇನ್ನಿತರರರು ಪಾಲ್ಗೊಂಡಿದ್ದರು.