ಬಳ್ಳಾರಿ
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ವತಿಯಿಂದ ಡಿ.22 ರಂದು ಬೆಳಿಗ್ಗೆ 10.30ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಹಿಳಾ ಸಂಸ್ಕತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಕ್ಷೇತ್ರಗಳ 222 ಮಹಿಳೆಯರು ಮತ್ತು ಕಲಾವಿದರು ಈ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದರೆ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದ್ದಾರೆ.
ನಗರದ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಕಚೇರಿ ಆವರಣದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ. ನಗರ ಶಾಸಕ ಜಿ.ಸೋಮಶೇಖರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರು,ಜಿಪಂ ಅಧ್ಯಕ್ಷರು ಮತ್ತು ಶಾಸಕರು ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಳಿಗ್ಗೆ 11.30ಕ್ಕೆ ವೇದಿಕೆಯಲ್ಲಿ ನಡೆಯುವ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಕೆ.ಸುನಿತಾ ವೀಣೆ ವಾದನ, ಕೊಟ್ಟೂರಿನ ಕೆ.ಸಿ.ಶೀಲಾವತಿ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಕವಿತಾ ಗಂಗೂರ್ ಸುಗಮ ಸಂಗೀತ, ಹಂಪಿ ಸ್ತ್ರೀ ಸೇವಾ ಶಿಕ್ಷಣ ಸಮಿತಿಯಿಂದ ಜಾನಪದ ಗೀತೆ, ಸವಿತಾ ನುಗಡೋಣಿ ಅವರು ವಚನ ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದರು.
ಮಧ್ಯಾಹ್ನ 2.30ಕ್ಕೆ ವಿಚಾರ ಸಂಕಿರಣ ನಡೆಯಲಿದ್ದು, ಲೇಖಕಿ ಎನ್.ಡಿ.ವೆಂಕಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ನಾಗವೇಣಿ ಆಡಳಿತದಲ್ಲಿ ಮಹಿಳೆ ಕುರಿತು, ಎ.ಎಂ.ಜಯಶ್ರೀ ಸಂಸ್ಕøತಿಯಲ್ಲಿ ಮಹಿಳೆ ಕುರಿತು, ಸಿದ್ದೇಶ್ವರಿ ಮಹಿಳಾ ಸಬಲೀಕರಣ ಕುರಿತು, ವಸುದ ದಾರವಾರ ಮಹಿಳಾ ಮಾಧ್ಯಮ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ಅವರು ವಿವರಿಸಿದರು.
ಕೊಟ್ಟೂರುಸ್ವಾಮಿ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ವೈವಿಧ್ಯ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದ ಅವರು, ಇದಾದ ನಂತರ ಕವಿಗೋಷ್ಠಿಯಲ್ಲಿ ಸರೋಜ ಬ್ಯಾತನಾಳ್, ಎಂ.ಎಸ್.ನಳಿನಾ, ನೂರ್ ಜಹಾನ್, ಎಚ್.ಎಂ.ಜ್ಯೋತಿ, ಬಿ.ಶಶಿಕಲಾ, ಎನ್.ಶಿವಲೀಲಾ, ಬಿ.ಎಂ.ನೇತ್ರಾ ಭಾಗವಹಿಸಲಿದ್ದಾರೆ. ಸಂಜೆ 4.30ರಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೆ.ಶಾಂತಶಾಸ್ತ್ರಿ ಮತ್ತು ಸಂಗಡಿಗರು ಕರ್ನಾಟಕ ಸಂಗೀತ ಗಾಯನ, ನಾಗರತ್ನಮ್ಮ ರಂಗಗೀತೆಗಳ ಗಾಯನ, ಸುಭದ್ರಮ್ಮ ಮನ್ಸೂರು ಮತ್ತು ಸಂಗಡಿಗರಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ, ಎಸ್.ಅಂಜಿನಮ್ಮ ಮತ್ತು ಕಲಾತಂಡದಿಂದ ದೇವಿ ಕಥೆ ಮಹಿಳಾ ಬಯಲಾಟ ಸನ್ನಿವೇಶಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೂ ಮುಂಚೆ ಬೆಳಿಗ್ಗೆ 9ಕ್ಕೆ ಶೋಭಾಯಾತ್ರೆ ನಡೆಯಲಿದ್ದು ನಗರದ ಮುನ್ಸಿಪಲ್ ಕಾಲೇಜು ಮೈದಾನದಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಲಿದೆ. ಹಿರಿಯ ಕಲಾವಿದೆ ಕಪ್ಪಗಲ್ಲು ಪದ್ಮಮ್ಮ ಅವರು ಚಾಲನೆ ನೀಡಲಿದ್ದಾರೆ. ಪೂರ್ಣ ಕುಂಭ ಸಹಿತ ಜಾನಪದ ಕಲಾ ವಾಹಿನಿಯು ಮುನ್ಸಿಪಲ್ ಕಾಲೇಜು ಮೈದಾನದಿಂದ ಹೊರಟು ಗಡಿಗಿ ಚೆನ್ನಪ್ಪ ವೃತ್ತ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಎಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ತಲುಪಲಿದೆ.
ಈ ವಾಹಿನಿಯಲ್ಲಿ ಮಹಿಳಾ ಡೊಳ್ಳು ಕುಣಿತ, ಉರುಮೆ ವಾದ್ಯ, ಪೂಜಾ ಕುಣಿತ, ಜಾನಕಿ ಮತ್ತು ಸಂಗಡಿಗರಿಂದ ತಾಷರಂಡೋಲ್, ವೀರಗಾಸೆ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಚಿತ್ರಕಲಾ ಶಿಬಿರ, ರಂಗೋಲಿ ಸ್ಪರ್ಧೆಯೂ ನಡೆಯಲಿದೆ. ಕರಕುಶಲ ವಸ್ತುಗಳ ಪ್ರದರ್ಶನ-ಮಾರಾಟ ಮತ್ತು ಆಹಾರ ಮಳಿಗೆ ಪ್ರದರ್ಶನವೂ ನಡೆಯಲಿದೆ ಎಂದರು. 1 ಸಾವಿರ ಮಹಿಳೆಯರು ಈ ಮಹಿಳಾ ಸಾಂಸ್ಕøತಿಕ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








