ಸಹನೆಯಿಂದಿರಲು ಡಿಕೆಶಿಗೆ ಹೈಕಮಾಂಡ್ ಸೂಚನೆ…!

ಬೆಂಗಳೂರು

     ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಅಂತಿಮಗೊಂಡಿದ್ದು ಕೆಲವರ ಅಪಸ್ವರದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಘೋಷಣೆಯಾಗುತ್ತಿಲ್ಲ ಎಂಬ ಹೈಕಮಾಂಡ್ ವರಿಷ್ಟರ ಸಂದೇಶ ಇಂದು ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿದೆ.ಇಂದು ಬೆಳಿಗ್ಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ರಾಷ್ಟ್ರೀಯ ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಂ ನಭಿ ಆಜಾದ್ ಈ ರಹಸ್ಯವನ್ನು ತಲುಪಿಸಿದ್ದಾರೆ.

      ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿಮ್ಮನ್ನು ತರಬೇಕು ಎಂಬ ವಿಷಯದಲ್ಲಿ ಹೈಕಮಾಂಡ್ ನಿಲುವು ಸ್ಪಷ್ಟವಾಗಿದೆ .ಪಕ್ಷಕ್ಕಾಗಿ ನೀವು ಮಾಡಿದ ಕೆಲಸ,ತ್ಯಾಗಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣನೆ ಮಾಡಿದೆ.ಇದೇ ಕಾರಣಕ್ಕಾಗಿ ನಿಮ್ಮ ಹೆಸರು ಕೆಪಿಸಿಸಿ ಪಟ್ಟಕ್ಕೆ ಆಯ್ಕೆಯಾಗಿದೆ.ಆದರೆ ನಿಮ್ಮನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರೆ ಪಕ್ಷ ತೊರೆಯುವುದಾಗಿ ಕೆಲ ಪ್ರಮುಖ ನಾಯಕರು ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಅವರಿಗೆ ಹೇಳಿದ್ದಾರೆ.

    ಆದರೆ ಅವರನ್ನು ಕಳೆದುಕೊಳ್ಳುವುದು ಹೈಕಮಾಂಡ್‍ಗೆ ಇಷ್ಟವಿಲ್ಲ.ಒಂದು ನೇಮಕದಿಂದ ಪಕ್ಷ ಒಡೆಯಬಾರದು ಎಂಬುದು ಮೇಡಂ ಸೋನಿಯಾಗಾಂಧಿ ಅವರ ಬಯಕೆ.ಹೀಗಾಗಿ ಸ್ವಲ್ಪ ಕಾಲ ಕಾಯಲು ನಿರ್ಧಾರ ಮಾಡಿದ್ದಾರೆ.ಮಹಾರಾಷ್ಟ್ರ,ತೆಲಂಗಾಣ ಸೇರಿದಂತೆ ಒಟ್ಟು ಐದು ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಕಾರ್ಯ ನಡೆಯಬೇಕಿದ್ದು ಎಲ್ಲ ಕಡೆ ಇಂತಹದೇ ಸಮಸ್ಯೆಗಳು ಕಾಣುತ್ತಿವೆ .ಹೀಗಾಗಿ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಹೈಕಮಾಂಡ್ ಬಯಸಿದೆ.

    ಪಕ್ಷಕ್ಕೆ ಇದು ಕಡುಕಷ್ಟದ ಕಾಲವಾಗಿದ್ದು ಇದನ್ನು ಗಮನಿಸಿ ಸಹನೆಯಿಂದಿರಿ ಎಂದು ಡಿಕೆಶಿಗೆ ವಿವರಿಸಿದ ಗುಲಾಂ ನಭಿ ಆಜಾದ್,ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀವು ಬಂದು ಕೂರಲು ಇಂತಹ ನಾಯಕರು ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.ಸದರಿ ನಾಯಕರು ನೇರವಾಗಿಯೇ ಹೈಕಮಾಂಡ್ ಬಳಿ,ಇಂತವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ.ಒಂದು ವೇಳೆ ಆಗದೆ ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕೂರಿಸಿದರೆ ನನ್ನ ದಾರಿ ನನ್ನದು ಎಂದು ಮೇಡಂಗೆ ಹೇಳಿದ್ದಾರೆ. 

    ಆದರೆ ಪಕ್ಷ ಕಷ್ಟದ ಸ್ಥಿತಿಯಲ್ಲಿದ್ದ ಕಾಲದಲ್ಲಿ ನೆರವಿಗೆ ನಿಂತ ಆ ನಾಯಕರು ಹೊರಹೋಗುವುದು ಹೈಕಮಾಂಡ್‍ಗೆ ಇಷ್ಟವಿಲ್ಲ.ಹೀಗಾಗಿ ಹೈಕಮಾಂಡ್‍ನ ಈ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ನೀವೇ ಆ ನಾಯಕರ ಬಳಿ ಚರ್ಚಿಸಿ ಸಹಕಾರ ಕೋರಿ ಎಂದು ಗುಲಾಂ ನಭಿ ಆಜಾದ್ ಅವರು ಡಿಕೆಶಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

    ಗುಲಾಂ ನಭಿ ಆಜಾದ್ ಅವರು ಈ ಸಲಹೆ ನೀಡಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ,ಅವರ ಸಹಕಾರವಿಲ್ಲದೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಬಯಸುವುದಿಲ್ಲ.ಆದ್ದರಿಂದ ಈ ಕುರಿತು ಅವರ ಜತೆ ಮಾತನಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap