ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಕೂಲಿ ಕಾರ್ಮಿಕರಿಗೆ ಸಿಇಓ ಸಲಹೆ 

ತುಮಕೂರು
 
    ಕೋವಿಡ್-19 ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಮಗಾರಿ ನಿರ್ವಹಿಸುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಸಲಹೆ ನೀಡಿದರು. 
     ಶಿರಾ ತಾಲ್ಲೂಕು ಮಾಗೋಡು ಗ್ರಾಮಪಂಚಾಯತಿ ವ್ಯಾಪ್ತಿ ಗಿರಿನಾಥನಹಳ್ಳಿ ಗ್ರಾಮಕ್ಕೆ ಇಂದು ಭೇಟಿ ನೀಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುತ್ತಿದ್ದ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿ ಕೂಲಿ ಕಾರ್ಮಿಕರ  ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ಪ್ರಸ್ತುತ ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕಾಮಗಾರಿ ನಿರ್ವಹಿಸುವಾಗ ಕೂಲಿಕಾರ್ಮಿಕರು ಕನಿಷ್ಟ ಒಂದು ಮೀಟರ್‍ನಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚಿಸಿದರು. 
     ಕೂಲಿಕಾರ್ಮಿಕರಿಗೆ ಕಾಮಗಾರಿ ನಿರ್ವಹಿಸಲು ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಶಿರಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ  ನಿರ್ದೇಶನ ನೀಡಿದರಲ್ಲದೆ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳಲು  ಕಾರ್ಯಾದೇಶದ ಪ್ರತಿಯನ್ನು ರೈತರಿಗೆ ವಿತರಿಸಿದರು.
     ನಂತರ ಕೊರೋನಾ ಸಾಂಕ್ರಾಮಿಕ ರೋಗದ ಕುರಿತು ಅರಿವು ಮೂಡಿಸುವ ನಾಮ ಫಲಕಗಳನ್ನು ವೀಕ್ಷಿಸಿ, ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ  ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಮಾಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೊಂದು ಗ್ರಾಮವಾದ ಹಲ್ಕೂರಿಗೆ ಭೇಟಿ ನೀಡಿದ ಅವರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟಿಯನ್ನು ಪರಿಶೀಲಿಸಿದರು.
 
    ಬೇಸಿಗೆ ಕಾಲವಾಗಿರುವುದರಿಂದ  ಜಾನುವಾರುಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರನ್ನು ಪೂರೈಕೆ ಮಾಡುವುದರೊಂದಿಗೆ ನೀರಿನ ತೊಟ್ಟಿಯ ನೀರು ಅನಗತ್ಯ ಪೋಲಾಗದಂತೆ ನಿಗಾ ವಹಿಸಬೇಕೆಂದು ಮಾಗೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಐಇಸಿ ಸಂಯೋಜಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು. 
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link