ಖಾಸಗಿ ಕೊಳವೆಬಾವಿ ನೀರು ಕಡಿಮೆಯಾದಲ್ಲಿ ಟ್ಯಾಂಕರ್ ಬಳಸಿ ನೀರು ಕೊಡಿ- ಕೃಷ್ಣ ಬಾಜಪೇಯಿ

ಹಾವೇರಿ

    ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜನರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಿ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾಗಿ ನಿಗಧಿತ ಪ್ರಮಾಣದಲ್ಲಿ ನೀರು ಪೂರೈಕೆಮಾಡಲು ಸಾಧ್ಯವಾಗದ ಗ್ರಾಮಗಳಿಗೆ ಟ್ಯಾಂಕರ್ ಬಳಿಸಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚಿಸಿದರು.

    ಸೋಮವಾರ ಜಿಲ್ಲೆಯ ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಕುರಿತಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ವಿವಿಧ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳ ಸಭೆ ನಡೆಸಿದ ಅವರು ಕುಡಿಯುವ ನೀರಿನ ಸಮಸ್ಯೆ ಆಲಿಸಲು ಸ್ಥಾಪಿಸಲಾದ ಸಹಾಯವಾಣಿಗಳ ಸೇವೆಯಲ್ಲಿ ಯಾವುದೇ ನ್ಯೂನ್ಯತೆಯಾಗದಂತೆ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಲಹೆ ನೀಡಿದರು.

     ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರು ಪೂರೈಸುವ ಕೆಲ ಗ್ರಾಮಗಳಲ್ಲಿ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಇಳಿಮುಖವಾಗುತ್ತಿರುವ ಮಾಹಿತಿ ಬಂದಿದೆ. ಈ ಕುರಿತಂತೆ ಅಂತರ್ಜಲ ಇಲಾಖೆಯಿಂದ ಪರಿಶೀಲನೆ ನಡೆಸಬೇಕು. ನಿಗಧಿತ ಪ್ರಮಾಣದಲ್ಲಿ ಜನರಿಗೆ ನೀರು ಪೂರೈಸಲು ಪಯಾರ್ಯ ಕ್ರಮಗಳ ಕುರಿತಂತೆ ತ್ವರಿತವಾಗಿ ಕ್ರಮವಹಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯವಾದರೆ ತ್ವರಿತವಾಗಿ ಟ್ಯಾಂಕರ್ ಬಳಸಿ ಎಂದು ಸೂಚಿಸಿದರು.

      ಈ ವಾರ ಮಳೆಯಾಗದಿದ್ದರೆ ಮತ್ತಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ವಿಶೇಷವಾಗಿ ಬ್ಯಾಡಗಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದು. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಪರ್ಯಾಯ ನೀರು ಪೂರೈಕೆಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಜನರು ನೀರಿನ ಸಮಸ್ಯೆ ಕುರಿತಂತೆ ದೂರು ಸಲ್ಲಿಸಿದ ತಕ್ಷಣ ಸ್ಪಂದಿಸಿ ನೀರು ಒದಗಿಸಬೇಕು ಎಂದು ಸೂಚಿಸಿದರು.

      ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಿಗದಿತ ಗುರಿಯಂತೆ ತಾಲೂಕಾವಾರು ಮಾನವ ದಿನಗಳ ಸೃಜನೆಯಾಗಬೇಕು. ಜಲಪೂರಣ, ಕೆರೆಹೂಳೆತ್ತುವುದು, ಕೊಳವೆಬಾವಿಗಳ ಜಲಮರುಪೂರಣ, ಕಾಲುವೆಗಳ ಸ್ವಚ್ಛತೆ, ಬದುಗಳ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಜಲಮೂಲಗಳ ಹಾಗೂ ಜಲ ಸಂಗ್ರಹಳ ಪುನಶ್ಚೇತನಕ್ಕೆ ಆದ್ಯತೆ ನೀಡುವಂತೆ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.

      ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯತ್ ಲೈನಿಂಗ್ ಇಲಾಖೆಗಳು ಉದ್ಯೋಗ ಖಾತ್ರಿಯಡಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಿಗದಿತ ಗುರಿಯಂತೆ ಕಾಲಮಿತಿಯೊಳಗೆ ಕಾಮಗಾರಿಗಳ ಅನುಷ್ಠಾಗೊಳಿಸಿ ಮಾನವ ದಿನಗಳನ್ನು ಸೃಜಿಸುವಂತೆ ನಿರ್ದೇಶನ ನೀಡಿದರು. ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದಿಂದ ಕೆರೆಗಳ ಪುನಶ್ಚೇತನ, ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು. ಈ ವಾರದಲ್ಲಿ ಕಾಮಗಾರಿಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು.

      ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 42 ಲಕ್ಷ ಮಾನವ ದಿನಗಳ ಗುರಿ ಎದುರು 4.6 ಮಾನವ ದಿನಗಳನ್ನು ಸೃಜಿಸಲಾಗಿದೆ. ಜಲ ಮೂಲಗಳ ಪುನಶ್ಚೇತನಕ್ಕೆ ಹಾಗೂ ಜಲ ಸಂಗ್ರಹಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ ನೀಡಲು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ 5.8 ಲಕ್ಷ ಮಾನದ ದಿನಗಳ ಸೃಜನೆ ಎದುರು 4.6 ಲಕ್ಷ ಗುರಿ ಸಾಧಿಸಲಾಗಿದೆ. ಶೇ.78 .86 ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

      ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ತ್ವರಿತವಾಗಿ ಸ್ಪಂದಿಸಲು ಈಗಾಗಲೇ ಎಲ್ಲ ಪಿಡಿಓಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸ್ಥಳದಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ನಿಗಧಿಯಂತೆ ಪ್ರತಿ ದಿನಕ್ಕೆ ತಲಾ 40 ಲೀಟರ್‍ನಂತೆ ನೀರನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

      ಬ್ಯಾಡಗಿ ಮತ್ತು ಹಾನಗಲ್‍ನಲ್ಲಿ ಶುಂಠಿ ಕೃಷಿ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗೆ ಕೂಲಿಕಾರರ ಕೊರೆತೆ ಉಂಟಾಗಿದೆ. ವಾರದಲ್ಲಿ ಶುಂಠಿ ಬೆಳೆ ಬೇಸಾಯ ಕೆಲಸ ಮುಕ್ತಾಗೊಳ್ಳಲಿದೆ. ಉದ್ಯೋಗ ಖಾತ್ರಿ ಕಾಮಗಾರಿಗೆ ಕೂಲಿಕಾರರು ಆಗಮಿಸಲಿದ್ದು, ನಿಗಧಿತ ಗುರಿಯನ್ನು ಸಾಧಿಸಲಾಗುವುದು ಎಂದು ಉಭಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಸಭೆಗೆ ತಿಳಿಸಿದರು.

ನೋಟೀಸ್ ಜಾರಿ:

     ಸಭೆಗಳಿಗೆ ಸತತವಾಗಿ ಗೈರು ಹಾಜರಾಗುತ್ತಿರುವ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲು ಸೂಚನೆ ನೀಡಿದರು. ಈ ಕುರಿತಂತೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ತಿಳಿಸಿದರು.ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು, ಜಿಲ್ಲಾ ಪಂಚಾಯತ್ ಇಂಜನೀಯರಿಂಗ್ ವಿಭಾಗದ ಅಭಿಯಂತರರು, ಎಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು, ರೇಷ್ಮೆ ಇಲಾಖೆ ಉಪನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಉಪನಿರ್ದೇಶಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link