ದಾವಣಗೆರೆ:
ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮೆಕ್ಕೆಜೋಳ ಸೇರಿದಂತೆ ಯಾವುದೇ ಬೆಳೆಗಳನ್ನು ವರ್ತಕರು ಖರೀದಿಸಬಾರದು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ರೈತಪರ ಸಂಘಟನೆಗಳ ಮುಖಂಡರು ಹಾಗೂ ವರ್ತಕರ ಸಭೆ ನಡೆಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳ ಕ್ವಿಂಟಾಲ್‍ಗೆ 1700 ರೂ.ಗಳನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ನಿಗದಿ ಮಾಡಿರುವುದು ಸೇರಿದಂತೆ ವಿವಿಧ ಬೆಳೆಗಳಿಗೆ ವಿವಿಧ ದರ ನಿಗದಿ ಮಾಡಿದೆ. ಆದ್ದರಿಂದ ವರ್ತಕರು ನ್ಯಾಯೋಚಿತ ಸರಾರಿ ಗುಣಮಟ್ಟದ ಆಧಾರದ ಮೇಲೆ ಸರ್ಕಾರ ನಿಗದಿ ಪಡಿಸಿರುವ 1700 ರೂ.ಗಳಿಗಿಂತ ಕಡಿಮೆ ದರಕ್ಕೆ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಖರೀದಿಸಬಾರದು. ಎಂಎಸ್‍ಪಿಗಿಂತ ಹೆಚ್ಚಿನ ದರಕ್ಕೆ ಬೆಳೆಗಳನ್ನು ಖರೀದಿಸಬೇಕೆಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಸುಮಾರು 1.84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಸುಮಾರು 6 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುವ ನಿರೀಕ್ಷೆ ಇದೆ. ಹೀಗಾಗಿ ಮುಂದೆ ಸಮಸ್ಯೆ ಎದುರಾಗಬಹುದು ಆದ್ದರಿಂದ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಬೇಕೆಂದು ಕೋರಿ ಈಗಾಗಲೇ ಸೆಪ್ಟೆಂಬರ್ 9ರಂದು ಸಭೆ ಮಾಡಿ ರಾಜ್ಯ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಪ್ರಾದೇಶಿಕ ಆಯುಕ್ತರ ಸಭೆಯಲ್ಲೂ ಈ ಬಗ್ಗೆ ಗಮನ ಸೆಳೆಯಲಾಗಿದೆ. ಆದರೆ, ಇದುವರಿಗೂ ಸರ್ಕಾರದಿಂದ ಯಾವುದೇ ಸೂಚನೆಗಳು ಬಂದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಸಿಪಿಐ ಮುಖಂಡ ಹೊಸಳ್ಳಿ ಮಲ್ಲೇಶ್, ನೀವು ಪ್ರಾಸ್ತಾವನೆ ಸಲ್ಲಿಸಿರುವುದು ಸ್ವಾಗತಾರ್ಹ. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭ ಸೇರಿದಂತೆ ಇತರೆ ಬೇಡಿಕೆಗಳಿಗಾಗಿ ಈಗಾಗಲೇ ದೆಹಲಿಯಲ್ಲಿ ರೈತರು ಸಿಡಿದೆದ್ದಿದ್ದಾರೆ. ನಾಳೆ ಇಲ್ಲೂ ಆ ಪರಿಸ್ಥಿತಿ ನಿರ್ಮಾಣ ಆಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈಗಲೇ ಖರೀದಿ ಕೇಂದ್ರ ಆರಂಭಿಸಲಾಗದಿದ್ದರೆ, ಮಾಲಿನ ಆಧಾರದ ಮೇಲೆ ಶೇ.80 ರಷ್ಟು ಸಾಲ ಕೊಡಿಸಿ ಎಂದು ಸಲಹೆ ನೀಡಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ನಿರೀಕ್ಷಿಸಿದಷ್ಟು ಇಳುವರಿ ಬರುವುದಿಲ್ಲ. ಏಕೆಂದರೆ, ಮಳೆಯ ಕೊರತೆ, ಹುಳು ಭಾದೆ ಸೇರಿದಂತೆ ವಿವಿಧ ಕಾರಣಗಳಿಂದ ಎಕರೆಗೆ 5ರಿಂದ 6 ಚೀಲ ಮಾತ್ರ ಇಳುವರಿ ಬರಬಹುದು. ಕೃಷಿ ಬೆಲೆ ಆಯೋಗವೇ ಒಂದು ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯಲು 1649 ರೂ. ಖರ್ಚಾಗಲಿದೆ ಎಂಬುದಾಗಿ ಅಂದಾಜಿಸಿದೆ. ಪ್ರಸ್ತುತ ಕೇಂದ್ರ ಸರ್ಕಾರ ನಿಗದಿ ಮಾಡಿರುವ 1700 ರೂ. ಕನಿಷ್ಠ ಬೆಂಬಲ ಬೆಲೆ ಸಹ ಅವೈಜ್ಞಾನಿಕವಾಗಿದೆ. ಇಂಥಹ ಸಂದರ್ಭದಲ್ಲಿ ಈಗ ಮಾರುಕಟ್ಟೆಯಲ್ಲಿ 1100ರಿಂದ 1300 ರೂ,ಗಳ ವರೆಗೆ ಮೆಕ್ಕೆಜೋಳ ಬಿಕರಿಯಾಗುತ್ತಿದೆ.
ಆದ್ದರಿಂದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು ಈಗ ಅತ್ಯಂತ ಜರೂರಾಗಿದೆ. ಆದ್ದರಿಂದ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿದರು.ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹಾಗಾದರೆ, 1700 ರೂ.ಗೆ ದರ ಬರುವ ವರೆಗೂ ರೈತರು ಕೊಡಲೇಬೇಡಿ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿವೈಎಫ್‍ಐನ ಇ.ಶ್ರೀನಿವಾಸ್, ಹಾಗಾದರೆ, ಮೆಕ್ಕೆಜೋಳ ಬೆಳೆದಿರುವ ರೈತರಿಗೆ ತಲಾ 20ರಿಂದ 30 ಸಾವಿರ ರೂ. ಸಾಲ ಕೊಡಿಸಿ ಎನ್ನುತ್ತಿದ್ದಂತೆ, ದನಿಗೂಡಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ, ಹಲವು ರೈತರು ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ಕೊಯ್ಲಿಗೂ ಕೈಗಡ ಸಾಲ ಮಾಡಿರುತ್ತಾರೆ. ಹೀಗಾಗಿ ಸಾಲಗಾರರು ರೈತರನ್ನು ಪೀಡಿಸುತ್ತಿರುತ್ತಾರೆ. ಹೀಗಿದ್ದಾಗ ನೀವು 1700 ರೂ. ವರೆಗೆ ಬೆಲೆ ಬರೋವರೆಗೆ ಮೆಕ್ಕೆಜೊಳ ಕೊಡಬೇಡಿ ಅನ್ನೋದು, ಸರ್ಕಾರ ಬ್ರಾಂಡಿ ಅಂಗಡಿಗೆ ತೆಗೆಸಿ, ಕುಡಿಲಿಕ್ಕೆ ಹೋಗಬೇಡ್ರಿ ಎನ್ನುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಗ ಮಾತನಾಡಿದ ಜಿಲ್ಲಾಧಿಕಾರಿಗಳು ಕೇಂದ್ರ ಸರ್ಕಾವೇನೋ 1700 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಉ ಮಾಡಿದೆ. ಆದರೆ, ರಾಜ್ಯ ಸರ್ಕಾರದಿಂದ ಅನುಮತಿ ಸಿಗುವ ವರೆಗೂ ಖರೀದಿ ಕೇಂದ್ರ ಆರಂಭಿಸಲಾಗುವುದಿಲ್ಲ. ನೀವು ಸಾಲಸೊಲ ಮಾಡಿ ಬೆಳೆ ಬೆಳೆದಿರುತ್ತೀರಿ. ಹೀಗಾಗಿ ಒಳ್ಳೆ ಪರಿಹಾರ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಯಲಿ ಎಂದರು.
ನೀವು ಬೆಳೆದು ಕೊಯ್ಲು ಮಾಡಿ ತಂದಿರುವ ಬೆಲೆಯ ಆಧಾರದ ಮೇಲೆ ಗೋದಾಮಿನಲ್ಲಿ ನಿಮ್ಮ ಮೆಕ್ಕೆಜೋಳವನ್ನು ಇಟ್ಟುಕೊಂಡು ಎಪಿಎಂಸಿ ಅಡಮಾನ ಸಾಲ ನೀಡಲಿದೆ. ಇದರ ಸದುಪಯೋಗ ಪಡೆದುಕೊಳ್ಳಿ. ಯಾವ ದರದ ಮೇಲೆ ಅಡಮಾನ ಸಾಲ ನೀಡುತ್ತೀರಿ ಎಂದು ಜಿಲ್ಲಾಧಿಕಾರಿಗಳು ಎಪಿಎಂಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ
ಎಪಿಎಂಸಿ ಕಾರ್ಯದರ್ಶಿ ಆನಂದ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಆಧಾರದ ಮೇಲೆ ಅಡಮಾನ ಸಾಲ ನೀಡುತ್ತೇವೆಂದು ಹೇಳುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ರೈತ ಮುಖಂಡ ಮಲ್ಲಾಪುರ ದೇವರಾಜ್, ಇಲ್ಲ ಮಾರಕಟ್ಟೆ ದರದ ಆಧಾರದ ಮೇಲೆ ಸಾಲ ನೀಡಲಾಗುತ್ತಿದೆ. ನಾನು ಹೋದ ಬಾರಿ ಮೆಕ್ಕೆಜೋಳದ ಮೇಲೆ ಅಡಮಾನ ಸಾಲ ಪಡೆದು ಸುಮಾರು 90 ಸಾವಿರ ರೂ. ನಷ್ಟಕ್ಕೆ ಒಳಗಾಗಿದ್ದೇನೆ.
ಈ ದರ ವ್ಯತ್ಯಾಸಕ್ಕೆ ಮೆಕ್ಕೆಜೋಳ ಸಂಷ್ಕರಣ ಘಟಕದವರೇ ಮೂಲ ಕಾರಣವಾಗಿದ್ದಾರೆ. ಏಕೆಂದರೆ, ನಮ್ಮಲ್ಲಿ ಮೆಕ್ಕಜೋಳ ಲಭ್ಯ ಇದ್ದರೂ, ಕಡಿಮೆ ದರಕ್ಕೆ ಮೆಕ್ಕೆಜೋಳ ಸಿಗುತ್ತದೆ ಎಂಬ ಕಾರಣಕ್ಕೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಮೆಕ್ಕೆಜೋಳ ಬಳಸುವವರಿಗೆ ಜಿಲ್ಲೆಯ ಮೆಕ್ಕೆಜೋಳ ಖಾಲಿ ಆಗುವ ವರೆಗೂ ಬೇರೆಕಡೆಯಿಂದ ಮೆಕ್ಕೆಜೋಳ ತರಸಬಾರದು ಎಂಬುದಾಗಿ ಸೂಚನೆ ನೀಡಬೇಕೆಂದು ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ವರ್ತಕರು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸಿದರೆ, ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾಡಳಿತಕ್ಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಇಲ್ಲ ಅಂಥ ಯಾವುದೇ ಅಧಿಕಾರ ತಮಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಈಗ ಹಳ್ಳಿ, ಹಳ್ಳಿಗಳಲ್ಲೂ ವರ್ತಕರು ಹುಟ್ಟಿಕೊಂಡಿದ್ದಾರೆ. ಸಣ್ಣ-ಪುಟ್ಟ ರೈತರಿಂದ ಕಡಿಮೆ ದರಕ್ಕೆ ಮೆಕ್ಕೆಜೋಳ ಖರೀದಿ ಮಾಡಿಕೊಂಡು ನೂರಾರು, ಸಾವಿರಾರೂ ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಿ ಸಂಗ್ರಹಿಸಿಕೊಂಡಿದ್ದಾರೆ.
ಹೀಗಾಗಿ ಖರೀದಿ ಕೇಂದ್ರ ಆರಂಭಿಸುವುದು ವಿಳಂಬವಾದರೆ, ಈ ರೈತರಿಗೆ ತೊಂದರೆಯಾಗಿ, ವರ್ತಕರು ಶೇಖರಿಸಿಕೊಂಡಿರುವ ಮೆಕ್ಕೆಜೋಳವನ್ನು ರೈತರ ಪಹಣಿಯ ಹೆಸರಿನಲ್ಲಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲಿದ್ದಾರೆ. ಆದ್ದರಿಂದ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಖರೀದಿ ಕೇಂದ್ರ ಆರಂಭವಾಗುವ ವರೆಗೂ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮೆಕ್ಕೆಜೋಳ ಖರೀದಿಸದಂತೆ ವರ್ತಕರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಮೆಕ್ಕೆಜೋಳ ಖರೀದಿದಾರರ ಸಂಘದ ಅಧ್ಯಕ್ಷ ಜಾವೀದ್ ಮಾತನಾಡಿ, ಗ್ರೇಡ್ ಆಧಾರದ ಮೇಲೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಇದೆ. ಗುಣಮಟ್ಟದ ಗ್ರೇಡ್‍ಗೆ 1500 ರೂ, ಹಸಿ ಕಾಳಿಗೆ 1200 ರೂ. ಬೆಲೆ ಇದೆ. ಖರೀದಿ ಕೇಂದ್ರ ಆರಂಭವಾದರೆ, 100 ರೂ. ದರ ಹೆಚ್ಚಾಗಬಹುದು ಎಂದರು.
ವರ್ತಕ ಕುಬೇರಪ್ಪ ಹೊನ್ನಾಳಿ ಮಾತನಾಡಿ, ಈಗ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ಜಗತ್ತಿನ ಯಾವುದೇ ಭಾಗಗಳಿಂದಲೂ ಮೆಕ್ಕೆಜೋಳವನ್ನು ಖರೀದಿಸಬಹುದಾಗಿದೆ. ಕೇಂದ್ರ ಸರ್ಕಾರ ಏನೋ 1700 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಬೇರೆ ರಾಜ್ಯಗಳಲ್ಲಿ 900 ರೂ.ಗಳಿಂದ ಮೆಕ್ಕೆಜೋಳ ಮಾರಾಟವಾಗುತ್ತಿದೆ. ಹೀಗಾಗಿ ಆನ್‍ಲೈನ್ ಮೂಲಕ ಮೆಕ್ಕೆಜೋಳ ಬಳಕೆದಾರರು ಕಡಿಮೆ ಇರುವ ಕಡೆಗಳಿಂದ ಮೆಕ್ಕೆಜೋಳ ಖರೀದಿಸಿದರೆ, 1700 ರೂ. ಕೊಟ್ಟು ಖರೀದಿ ಮಾಡಿರುವ ನಾವು ಎಷ್ಟಕ್ಕೆ ಮಾರಬೇಕು. 2 ಮತ್ತು 3ನೇ ದರ್ಜೆ ಗುಣಮಟ್ಟದ ಮೆಕ್ಕೆಜೋಳವನ್ನು ಎಷ್ಟಕ್ಕೆ ಖರೀದಿಸಬೇಕೆಂದು ಪ್ರಶ್ನಿಸಿದರು.
ಕೊನೆಗೂ ರೈತರ ಒತ್ತಾಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ 1700 ರೂ. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿಸಬಾರದು ಎಂದು ಮೌಖಿಕ ಆದೇಶ ನೀಡಿದರು.ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥನ್, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು, ಉಪ ವಿಭಾಗಾಧಿಕಾರಿ ನಜ್ಮಾ, ತಹಶೀಲ್ದಾರ್ ಸಂತೋಷ್‍ಕುಮಾರ್, ರೈತ ಮುಖಂಡರುಗಳಾದ ತೇಜಸ್ವಿ ಪಟೇಲ್, ಹೆಚ್.ಎಂ.ಮಹೇಶ್ವರಸ್ವಾಮಿ , ಗುಮ್ಮನೂರು ಬಸವರಾಜ್, ಬುಳ್ಳಾಪುರ ಹನುಮಂತಪ್ಪ, ವರ್ತಕರಾದ ನಂಜನಗೌಡ, ಶ್ರೀನಿವಾಸ್, ಎನ್.ಜಿ.ವಿಜಯ್, ಆರ್.ಜಿ.ರುದ್ರೇಶ್ , ಚಂದ್ರೋದಯ ಶಿವಕುಮಾರ್, ಡಾ.ಕುಲ್ಕರ್ಣಿ ಹರಿಹರ, ದೊಗ್ಗಳ್ಳಿ ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
