ಹಾವೇರಿ
ಕರೋನಾ ವೈರಾಣು ಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳು ಬರುತ್ತಿಲ್ಲ. ಈ ಕಾರಣಕ್ಕಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅವರವರ ಮನೆಯಲ್ಲೇ ಸೂಕ್ತ ಚಿಕಿತ್ಸೆ ಹಾಗೂ ಇಲಾಖೆಯ ಪೌಷ್ಠಿಕ ಆಹಾರಗಳನ್ನು ಪೂರೈಸಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಪೋಷಣ ಅಭಿಯಾನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದರು.ಅಪೌಷ್ಠಿಕತೆ, ರಕ್ತಹೀನತೆ ತೊಡೆದುಹಾಕಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಅಪೌಷ್ಠಿಕತೆ ಸಮಸ್ಯೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಅಧಿಕಾರಿಗಳು ಫಾಲೋಪ್ ಮಾಡಲು ಸಲಹೆ ನೀಡಿದರು.
ಗರ್ಭಿಣಿಯರ ಆರೋಗ್ಯದ ಮೇಲೆ ಸತತ ನಿಗಾವಹಿಸಬೇಕು, ನಿರಂತರ ತಪಾಸಣೆ ಮಾಡಬೇಕು. ಗರ್ಭಿಣಿಯರಿಗಾಗಿ ಸರ್ಕಾರ ನೀಡುವ ಪೌಷ್ಠಿಕ ಆಹಾರದ ಸೇವನೆ ಕುರಿತಂತೆ ನಿಗಾವಹಿಸಬೇಕು. ಅಪೌಷ್ಠಿಕತೆಯ ಮಕ್ಕಳನ್ನು ಗುರುತಿಸಿ ಎನ್.ಆರ್.ಸಿ.ಕೇಂದ್ರಗಳಿಗೆ ದಾಖಲಿಸಬೇಕು. ನಿಯಮಾನುಸಾರ ಚಿಕಿತ್ಸೆ, ಪೌಷ್ಠಿಕ ಆಹಾರವನ್ನು ಒದಗಿಸಬೇಕು. ಪ್ರಸ್ತುತ ಕರೋನಾ ಇರುವ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ತಾಯಿ ಹಾಗೂ ಮಕ್ಕಳು ವಾಸಿಸುವ ಮನೆಗೆ ವಿಸ್ತರಿಸಬೇಕು.
ಈ ಉದ್ದೇಶಕ್ಕಾಗಿ ನಿಯೋಜನೆಗೊಂಡ ಪೋಷಣ ಅಭಿಯಾನದ ಸಂಯೋಜಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯಡಿ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಕೈತೋಟ ನಿರ್ಮಾಣಕ್ಕೆ ಕ್ರಮವಹಿಸಬೇಕು. ರೈತರ ಹೊಲಗಳ ಬದುಗಳಲ್ಲಿ ಪೌಷ್ಠಿಕ ಆಹಾರವಾದ ಹಣ್ಣು, ತರಕಾರಿ, ಸೊಪ್ಪು ಬೆಳೆಯುವ ಕಿಟ್‍ಗಳನ್ನು ನೀಡಬೇಕು. ನ್ಯೂಟ್ರಿಷಿಯನ್ ಕೈತೋಟಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಒಂದೊಮ್ಮೆ ಅಂಗನವಾಡಿ ಆವರಣದಲ್ಲಿ ಸ್ಥಳವಕಾಶ ಕೊರತೆ ಇದ್ದರೆ ಶಾಲಾ ಆವರಣದಲ್ಲಿ ಬೆಳೆಯಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಕ್ಕಳ ಸ್ನೇಹಿ ಅಂಗನವಾಡಿ: ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳಿಗೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನವನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಸರಿಗೆ ಮಂಜೂರು ಮಾಡಿಕೊಳ್ಳಬೇಕು.
ಹೊಸ ಕಟ್ಟಡ ನಿರ್ಮಾಣಮಾಡುವಾಗ ಮಾಮೂಲಿ ಸರ್ಕಾರಿ ಕಟ್ಟಡಗಳ ಮಾದರಿ ವಿನ್ಯಾಸದ ಬದಲಿಗೆ ಮಕ್ಕಳ ಸ್ನೇಹಿ ಆಕರ್ಷಕ ಕಟ್ಟಡ ವಿನ್ಯಾಸದಿಂದ ನಿರ್ಮಾಣ ಮಾಡಬೇಕು. ಈ ಕುರಿತಂತೆ ಪಂಚಾಯತ್ ರಾಜ್ ಇಂಜನೀಯರಿಂಗ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.
ಎಲ್ಲ ಅಂಗನವಾಡಿ ಕಟ್ಟಡಗಳಿಗೆ ಶುದ್ಧ ನೀರು ಪೂರೈಕೆ, ಅಡುಗೆ ನಿರ್ಮಾಣ, ಶೌಚಾಲಯ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಮಕ್ಕಳ ಮನಸೆಳೆಯುವಂತೆ ಗೋಡೆಗಳಿಗೆ ಬಣ್ಣದ ವಿನ್ಯಾಸ, ಕಲಿಕೆಗೆ ಪೂರಕವಾದಂತಹ ಚಿತ್ರಬರಹಗಳ ಮೂಲಕ ನವೀಕರಿಸಬೇಕು. ನೀರಿನ ಸಂಪರ್ಕವಿಲ್ಲದ ಅಂಗನವಾಡಿ ಕಟ್ಟಡಗಳಿಗೆ ಶುದ್ಧ ನೀರಿನ ಘಟಕಗಳಿಂದ ಉಚಿತವಾಗಿ ನೀರು ಪೂರೈಸುವಂತೆ ಜಿಲ್ಲಾ ಪಂಚಾಯತ್‍ನಿಂದ ಆದೇಶ ಹೊರಡಿಸಿಲು ಸೂಚನೆ ನೀಡಿದ ಅವರು ದಾನಿಗಳ ನೆರವು ಪಡೆದು ಅಂಗನವಾಡಿಗಳಿಗೆ ಫ್ಯಾನ್ ವ್ಯವಸ್ಥೆ, ಕುಡಿಯುವ ನೀರಿನ ಫೀಲ್ಟರ್ ವ್ಯವಸ್ಥೆ, ಸುಣ್ಣ-ಬಣ್ಣದ ವ್ಯವಸ್ಥೆ, ಗೋಡೆ ಬರಹ ಬರೆಸಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಪೋಷಣ್ ಅಭಿಯಾನ ಕುರಿತಂತೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೆಟ್ಟೆಪ್ಪನವರ ರಾಜ್ಯದಲ್ಲಿ ಮೂರು ಹಂತದಲ್ಲಿ ಈ ಅಭಿಯಾನ ಜಾರಿಯಾಗಿದೆ. ಜಿಲ್ಲೆಯಲ್ಲಿ 2019-20ನೇ ಸಾಲಿನಿಂದ ಅನುಷ್ಠಾನಗೊಂಡಿದೆ. ಅಧಿಕಾರಿಗಳಿಗೆ ತರಬೇತಿ ಸಹ ನೀಡಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ ಮಕ್ಕಳ ಸಮರ್ಪಕ ಬೆಳವಣಿಗೆಗೆ ನಿಗಾವಹಿಸಲು ಜಿಲ್ಲೆಯ 1918 ಅಂಗನವಾಡಿಗಳಿಗೆ ಸ್ಪೇಡಿಯೋ ಮೀಟರ್, ಇನ್ಪಂಟೋಮೀಟರ್, ಮಕ್ಕಳ ತೂಕದ ಯಂತ್ರಗಳನ್ನು ಪೂರೈಸಲಾಗಿದೆ. ಸಂಯೋಜಕರು, ಯೋಜನಾ ಸಹಾಯಕರ ಹುದ್ದೆಗಳನ್ನು ನೇಮಕಮಾಡಿಕೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್, ಪವರ್ ಬ್ಯಾಂಕ್, ಸಿಮ್‍ಕಾರ್ಡ್ ಹಾಗೂ ಇತರೆ ಪರಿಕರಗಳನ್ನು ವಿತರಿಸಲಾಗಿದೆ. ಸಿಮ್ ಕಾರ್ಡ್‍ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 1,26,933 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದಾರೆ. ಈ ಪೈಕಿ 1,24,513 ಮಕ್ಕಳನ್ನು ತೂಕ ಮಾಡಲಾಗಿದೆ. ಈ ಪೈಕಿ 104435 ಮಕ್ಕಳು ಸಾಮಾನ್ಯ ಮಕ್ಕಳಾಗಿದ್ದಾರೆ. 19,415 ಮಕ್ಕಳು ಸಾಧರಣಾ ಅಪೌಷ್ಠಿಕ ಮಕ್ಕಳಿದ್ದಾರೆ. 663 ತೀವ್ರಪೌಷ್ಠಿಕ ಮಕ್ಕಳಿದ್ದಾರೆ. ತೂಕ ಮತ್ತು ಅಳತೆ ಕುರಿತಂತೆ 1,24,513 ಮಕ್ಕಳನ್ನು ತಪಾಸಣೆ ಮಾಡಲಾಗಿ 14,454 ಮಕ್ಕಳು ನಿಗಧಿತ ಎತ್ತರ ಇಲ್ಲದ ಮಕ್ಕಳು ಹಾಗೂ 10,116 ಮಕ್ಕಳು ವಯಸ್ಸಿಗೆ ತಕ್ಕ ತೂಕ ಇಲ್ಲದ ಮಕ್ಕಳು ಒಳಗೊಂಡಿದ್ದಾರೆ. ಈ ಮಕ್ಕಳ ಮೇಲೆ ಸೂಕ್ತ ನಿಗಾವಹಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳು, ಬಾಲೆಯರು, ಮಹಿಳೆಯರಲ್ಲಿ ಉಂಟಾಗುವ ಅಪೌಷ್ಠಿಕತೆ ನಿವಾರಣೆ, ರಕ್ತ ಹೀನತೆ ಕಡಿಮೆಗೊಳಿಸುವುದು, ಕಡಿಮೆ ತೂಕದ ಮಕ್ಕಳ ಜನನ ಕಡಿಮೆಗೊಳಿಸುವ ಕುರಿತಂತೆ ಜಾಗೃತಿಯ ಜೊತೆಗೆ ವಿವಿಧ ಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪೋಷಣ್ ಪಂಚಾಯತ್ ಸಭೆ ನಿರ್ವಹಿಸಿ ಅಪೌಷ್ಠಿಕತೆ ಮುಕ್ತ ಪಂಚಾಯತ್ ರೂಪಿಸುವುದು, ಅಂಗನವಾಡಿಗಳೀಗೆ ಶುದ್ಧ ನೀರು, ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆ, ಶೌಚಾಲಯ ವ್ಯವಸ್ಥೆ, ಗುಣಮಟ್ಟದ ಆಹಾರ ಪೂರೈಕೆ, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ನಿರಂತರ ಆರೋಗ್ಯ ತಪಾಸಣೆ, ಸೂಕ್ತ ಚಿಕಿತ್ಸೆ, ಅಪೌಷ್ಠಿಕತೆ ನಿವಾರಣೆಗೆ ಕ್ರಮವಹಿಸುವ ಕುರಿತಂತೆ ಪಂಚಾಯತ್ ರಾಜ್ ಇಲಾಖೆಗಳು, ಆರೋಗ್ಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಕಾರ ಅವಶ್ಯ ಎಂದು ಕೋರಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಚೈತ್ರಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅತ್ತರವಾಣಿ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಕುಮಾರ ಮಣ್ಣವಡ್ಡರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎ.ಎಸ್.ಅಡಿಗ ಹಾಗೂ ವಿವಿಧ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ