ಹಾವೇರಿ
ಉದ್ಯೋಗ ಅರಸಿ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ನೆಲೆಸಿರುವ ಕಾರ್ಮಿಕರಿಗೆ ಹಾಗೂ ಇತರೆ ರಾಜ್ಯದ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಕಾರ್ಮಿಕ ಇಲಾಖೆ ಮೂಲಕ ಊಟದ ವ್ಯವಸ್ಥೆ, ದಿನಸಿ ಕಿಟ್ಗಳನ್ನು ವಿತರಣೆ ಮಾಡಲಾಗಿದೆ. ಆದಾಗ್ಯೂ ಇನ್ನೂ ನೆರವಿನ ಅಗತ್ಯವಿರುವ ಕಾರ್ಮಿಕರನ್ನು ಗುರುತಿಸಿ ದಿನಸಿ ಕಿಟ್, ಆಹಾರ ವಿತರಣೆ ಮಾಡಲು ಅನುಕೂಲವಾಗುವಂತೆ ನೆರವಿನ ಅಗತ್ಯವಿರುವ ಕಾರ್ಮಿಕರನ್ನು ಗುರುತಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಲಸೆ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಅಗತ್ಯವಿರುವ ಜನರಿಗೆ ಆಹಾರ ಸಾಮಗ್ರಿ ಊಟ ಒದಗಿಸುವ ಕುರಿತಂತೆ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ತೊಂದರೆಯಲ್ಲಿದ್ದಾರೆ. ಬೇರೆ ರಾಜ್ಯದಿಂದ ಬಂದ ವಲಸೆ ಕಾರ್ಮಿಕರಿಗೆ ಈಗಾಗಲೇ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೇರೆಬೇರೆ ರಾಜ್ಯ ಜಿಲ್ಲೆಗಳಿಂದ ಹಾವೇರಿ ಜಿಲ್ಲೆಗೆ ದುಡಿಯಲು ಬಂದವರನ್ನು ಗುರುತಿಸಿ ಈಗಾಗಲೇ ಅಗತ್ಯ ದಿನಸಿ ಪೊಟ್ಟಣಗಳನ್ನು ನೀಡಲಾಗಿದೆ.
ಇದನ್ನು ಹೊರತಾಗಿಯೂ ಈವರೆಗೆ ಅತ್ಯಗತ್ಯ ಆಹಾರ ಸಾಮಗ್ರಿ ದೊರೆಯದೆ ತೊಂದರೆಯಲ್ಲಿರುವ ಜಿಲ್ಲೆಯ ತಾಲೂಕಾವಾರು ವಲಸೆ ಕಾರ್ಮಿಕರು, ಭಿಕ್ಷುಕರು, ನಿರಾಶ್ರಿತರು, ಅಲೆಮಾರಿಗಳು, ರೈಲ್ವೆ ಕಾರ್ಮಿಕರು, ರಸ್ತೆ ಕೆಲಸಮಾಡುವ ಕಾರ್ಮಿಕರು, ಕ್ಷೌರಿಕರು, ಬ್ಯೂಟಿಪಾರ್ಲರ್, ಆಟೋ ಹಾಗೂ ವಿವಿಧ ಟ್ಯಾಕ್ಸಿ ಡ್ರೈವರ್ಗಳು ಸೇರಿದಂತೆ ಸಣ್ಣಪುಟ್ಟ ಕೆಲಸಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಕಾರ್ಮಿಕರನ್ನು ಗುರುತಿಸಿ ಈ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ. ಅತ್ಯಂತ ತುರ್ತಾಗಿ ವರದಿ ನೀಡುವಂತೆ ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ ಈ ಕಾರ್ಮಿಕರಿಗೆ ಅಗತ್ಯ ದಿನಸಿಯನ್ನು ವಿತರಿಸಬೇಕಾಗಿದೆ. ಹಾಗೂ ಪಡಿತರ ಕಾರ್ಡ್ ಇಲ್ಲದ ದಿನಸಿಗಾಗಿ ತೊಂದರೆಪಡುತ್ತಿರುವ ಇತರ ಕಾರ್ಮಿಕರಿಗೂ ಆಹಾರ ಪದಾರ್ಥಗಳನ್ನು ಒದಗಸಲು ಉದ್ದೇಶಿಸಲಾಗಿದೆ. ತಾಲೂಕಾವಾರು ವಲಸಿಗರ, ಅಲೆಮಾರಿಗಳ, ಸಣ್ಣ ಪುಟ್ಟ ಕೆಲಸಮಾಡಿಕೊಂಡಿದ್ದ ಕಾರ್ಮಿಕರ ಪಟ್ಟಿ ಆಯಾ ತಹಶೀಲ್ದಾರಗಳ ಬಳಿ ಇದೆ. ಈ ಪಟ್ಟಿಯನ್ನು ಆಧರಸಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಪಟ್ಟಿಯಲ್ಲಿ ಇಲ್ಲದೆ ದಿನಸಿ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸೂಚನೆ ನೀಡಿದರು.
ಜಾಗೃತಿಗೆ ಸಿದ್ಧರಾಗಿ:
ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಆದಾಗ್ಯೂ ಯಾವುದೇ ಸಂದರ್ಭದಲ್ಲಿ ಯಾವುದೇ ಸ್ಥಳದಲ್ಲಿ ಕರೋನಾ ಸೋಂಕಿತರು ಪತ್ತೆಯಾದಲ್ಲಿ ಆ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಗುರುತಿಸಿ ಸೋಂಕು ಹರಡದಂತೆ ತೀವ್ರತರವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಆ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳಿಗೆ ಕರೋನಾ ಕುರಿತಂತೆ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಅರಿವು ಮೂಡಿಸಲು ಕ್ರಿಯಾಶೀಲ ಶಿಕ್ಷಕರ ತಂಡಗಳನ್ನು ರಚಿಸಿ ಅಗತ್ಯ ತರಬೇತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕಾರ್ಮಿಕ ಇಲಾಖಾ ಅಧಿಕಾರಿ ಶ್ರೀಮತಿ ಲಲಿತಾ ಸಾತೇನಹಳ್ಳಿ, ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ತಾಲೂಕುಗಳ ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳು ಉಪಸ್ಥಿತರಿದ್ದರು.