ಹಾವೇರಿ
ಕೋವಿಡ್-19 ಸೋಂಕು ಪಿಡಿತರಿಗೆ ತುರ್ತು ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್-19 ಆಸ್ಪತ್ರೆಯನ್ನು ಗುರುತಿಸಿ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯದೊಂದಿಗೆ ಸಜ್ಜಾಗಿ ಎಂದು ಕರ್ನಾಟಕ ಸರ್ಕಾರದ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸೂಚನೆ ನೀಡಿದರು.
ಜಿಲ್ಲೆಯ ನೋವೆಲ್ ಕರೋನಾ ವೈರಸ್ ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತಂತೆ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯ್ದ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾ ಕೇಂದ್ರದಲ್ಲಿ ಕೋವಿಡ್-19 ಆಸ್ಪತ್ರೆಯನ್ನು ಸಜ್ಜುಗೊಳಿಸಿ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಎಲ್ಲ ವೆಂಟಿಲೇಟರ್‍ಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ.
ತಜ್ಞವೈದ್ಯರುಗಳ ತಂಡ, ಅರೇವೈದ್ಯಕೀಯ ಸಿಬ್ಬಂದಿಗಳ ತಂಡ ರಚನೆಮಾಡಿ. ಕೋವಿಡ್ ಸೋಂಕಿತರು ಕಂಡುಬಂದರೆ ತುರ್ತಾಗಿ ಚಿಕಿತ್ಸೆ ನೀಡಲು ಸಜ್ಜಾಗಬೇಕು. ಒಂದಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದರೂ ಒಂದೆಡೆ ಕೋವಿಡ್ ಚಿಕಿತ್ಸೆಗೆ ಸ್ಪಂದಿಸಲು ಒಂದೇ ಕಾಂಪ್ಲೆಕ್ಸ್‍ನಲ್ಲಿ ಕೋವಿಡ್ ಆಸ್ಪತ್ರೆ ಪೂರ್ಣ ಪ್ರಮಾಣದ ವೈದ್ಯಕೀಯ ಸೌಕರ್ಯದೊಂದಿಗೆ ಸಿದ್ಧಗೊಳ್ಳಬೇಕು ಎಂದು ಸಲಹೆ ನೀಡಿದರು.
ಜನರ ಸಾಮಾನ್ಯ ಚಿಕಿತ್ಸೆಗೆ ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳು ತೆರೆದಿರಬೇಕು. ಈ ಕುರಿತಂತೆ ಎಲ್ಲ ಖಾಸಗಿ ವೈದ್ಯರುಗಳಿಗೆ ಕ್ಲಿನಿಕ್‍ಗಳನ್ನು ತೆರೆಯಲು ನೋಟಿಸ್ ನೀಡಿ. ಒಂದೊಮ್ಮೆ ಕ್ಲಿನಿಕ್‍ಗಳನ್ನು ತೆರೆಯದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.
ಪಡಿತರದಾರರಿಗೆ ಯಾವುದೇ ಕಿರಿಕಿರಿ ಇಲ್ಲದೆ ರೇಷನ್‍ಗಳನ್ನು ನೀಡಬೇಕು. ರಜೆ ದಿನಗಳಾದ ಭಾನುವಾರ ಹಾಗೂ ಮಹಾವೀರ ಜಯಂತಿ ದಿನವಾದ ಸೋಮವಾರವೂ ರೇಷನ್ ಅಂಗಡಿ ತೆರೆದಿಡಬೇಕು. ಕಾರ್ಮಿಕ ಇಲಾಖೆಯಿಂದ ವಲಸೆ ಕಾರ್ಮಿಕರಿಗೆ ಪ್ರತಿ ವ್ಯಕ್ತಿಗೆ ಒಂದು ತಿಂಗಳಿಗಾಗುವಷ್ಟು ಫುಡ್ ಕಿಟ್‍ಗಳನ್ನು ವಿತರಿಸಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ, ಅಲೆಮಾರಿಗಳಿಗೆ, ವಲಸೆ ಕಾರ್ಮಿಕರಿಗೆ, ದುರ್ಬಲ ಜನರಿಗೆ ಉಚಿತವಾಗಿ ಹಾಲು ವಿತರಿಸಬೇಕು. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಯಾರೊಬ್ಬರೂ ಹಸಿವಿನಿಂದ ಬಳಲಬಾರದು. ಅಗತ್ಯವಿರುವ ವ್ಯಕ್ತಿಗಳಿಗೆ ಊಟ ಹಾಗೂ ರೇಷನ್‍ಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ದಿನನಿತ್ಯದ ದಿನಸಿ, ತರಕಾರಿಗಳಿಗೆ ಯಾವುದೇ ತೊಂದರೆಯಾಗಬಾರದು. ರೈತರ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಬಾರದು. ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಮುಚ್ಚಬಾರದು. ಚೆಕ್‍ಪೋಸ್ಟ್‍ಗಳಲ್ಲಿ ಸರಕುಸಾಗಾಣಿಕೆಗೆ ತೊಂದರೆಯಾಗಬಾರದು. ಅಗತ್ಯ ವಸ್ತುಗಳ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲು ನಿಯಮಾನುಸಾರ ಕ್ರಮತೆಗೆದುಕೊಳ್ಳಲು ಸಲಹೆ ನೀಡಿದರು.
ಜನಧನ್ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ನೇರ ನಗದು ಜಮಾ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಎ.ಟಿ.ಎಂ.ಗಳ ಮುಂದೆ ಹಾಗೂ ಬ್ಯಾಂಕ್‍ಗಳ ಮುಂದೆ ಜನಜಂಗುಳಿಯಾಗದಂತೆ ಅಂತರವನ್ನು ಕಾಯ್ದುಕೊಳ್ಳಬೇಕು. ಸೂಕ್ತ ನೆರಳಿನ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರಗಳಿಗೆ ಭೇಟಿ ಪ್ರರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.
ವೈದ್ಯರಿಗೆ ಮಾತ್ರ ಎನ್-95: ಚಿಕಿತ್ಸೆ ನೀಡುವ ವೈದ್ಯರಿಗೆ ಮಾತ್ರ ಎನ್95 ಮಾಸ್ಕ್ ಧರಿಸಬೇಕು. ಅಧಿಕಾರಿಗಳು, ಸಾಮಾನ್ಯ ಜನರಿಗೆ ಎನ್ 95 ಮಾಸ್ಕ್ ಅವಶ್ಯಕತೆ ಇಲ್ಲ. ಅನಗತ್ಯವಾಗಿ ಎನ್ 95 ಮಾಸ್ಕ್‍ಗಳನ್ನು ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ನೀಡಬೇಡಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾಗರಾಜ ನಾಯಕ, ಆಹಾರ ಮತ್ತು ನಾಗಾರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ