ಮಕ್ಕಳ ರಕ್ಷಣಾಧಿಕಾರಿ ವೈಶಾಲಿ ಕರೆ ಶೋಷಣೆ, ದೌರ್ಜನ್ಯದ ವಿರುದ್ದ ಹೋರಾಡಬೇಕು

ಚಿತ್ರದುರ್ಗ:

        ಜೀವನದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೈಶಾಲಿ ಮಹಿಳೆಯರಿಗೆ ಕರೆ ನೀಡಿದರು.ಬ್ರೆಡ್ಸ್ ಬೆಂಗಳೂರು, ಚಿತ್ರಡಾನ್‍ಬೋಸ್ಕೋ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಬುಧವಾರ ಚಿತ್ರಡಾನ್‍ಬೋಸ್ಕೋ ಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

       ಅಡುಗೆ ಮನೆಯಲ್ಲಿ ಸೌಟು ಹಿಡಿಯುವ ಮಹಿಳೆ ಯುದ್ದಭೂಮಿಯಲ್ಲಿ ವಿಮಾನದ ಪೈಲೆಟ್‍ವರೆಗೆ ಹೋಗಿದ್ದಾಳೆ. ಎಲ್ಲಾ ರಂಗಗಳಲ್ಲಿಯೂ ಪುರುಷರಷ್ಟೆ ಸಮಾನವಾಗಿ ದುಡಿಯುತ್ತಿರುವ ಮಹಿಳೆಯ ಮೇಲೆ ಇಂದಿಗೂ ನಿರಂತರ ದೌರ್ಜನ್ಯ, ಲೈಂಗಿಕ ಶೋಷಣೆ, ಅತ್ಯಾಚಾರಗಳು ನಡೆಯುತ್ತಲೆ ಇದೆ. ಎಲ್ಲಿಯಾದರೂ ಬಾಲ್ಯವಿವಾಹವಾಗುತ್ತಿದ್ದರೆ ನಮಗೆ ಸಂಬಂಧವಿಲ್ಲವೆಂದುಕೊಂಡು ಸುಮ್ಮನಿರಬೇಡಿ. ನಮ್ಮ ಗಮನಕ್ಕೆ ತನ್ನಿ. ಬಾಲ್ಯದ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದರು.

         ಮನೆ, ಗಂಡ, ಮಕ್ಕಳು ಹೀಗೆ ಇಡೀ ಸಂಸಾರವನ್ನೇ ನಿಭಾಯಿಸಿಕೊಂಡು ಹೊರಗಡೆಯೂ ಕೆಲಸ ಮಾಡುವ ಮಹಿಳೆ ಸವಾಲುಗಳನ್ನು ಎದುರಿಸುವಲ್ಲಿ ಸಮರ್ಥಳು ಎನ್ನುವುದನ್ನು ಈಗಾಗಲೆ ಸಾಬೀತುಪಡಿಸಿದ್ದಾಳೆ. ಮಾತನಾಡುವುದು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು, ಯೋಚನೆಗಳನ್ನು ಹೇಳುವ ಧೈರ್ಯವನ್ನು ಮೊದಲು ಮಹಿಳೆ ಬೆಳೆಸಿಕೊಳ್ಳಬೇಕು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ವರ್ಷದ ಘೋಷಣೆಯಂತೆ ಸಮಾಜದಲ್ಲಿ ಉತ್ತಮವಾದ ಸಮತೋಲನವಿರಬೇಕು ಎಂದು ತಿಳಿಸಿದರು.

         ಮಹಿಳೆಯರಿಗೆ ಮನೆಯಲ್ಲಿ ಏನಾದರೂ ಏರುಪೇರಾದರೆ ಹೊರಗಡೆ ಕೆಲಸ ಮಾಡುವಾಗ ಮನಸ್ಸಿಗೆ ಸಮಾಧಾನವಿರುವುದಿಲ್ಲ. ಕಿರಿಕಿರಿಯುಂಟಾಗುತ್ತದೆ. ಶಿಕ್ಷಣ ಹೆಣ್ಣು ಮಕ್ಕಳಿಗೆ ಬಹಳ ಮುಖ್ಯವಾಗಿರುವುದರಿಂದ ಮಹಿಳೆಯರು ಕಡ್ಡಾಯವಾಗಿ ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು. ಶೋಷಣೆ, ದೌರ್ಜನ್ಯದ ವಿರುದ್ದ ಪ್ರತಿಭಟಿಸುವ ಗುಣ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಾಧನಾ ಮಾನವ ಹಕ್ಕುಗಳ ಕೇಂದ್ರದ ಸಂಸ್ಥಾಪಕಿ ಧಾರವಾಡದ ಡಾ.ಇಸಾಬೆಲ್ಲಾ ಎಸ್.ಝೇವಿಯರ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಉಪನ್ಯಾಸ ನೀಡುತ್ತ ಸ್ವ-ಸಹಾಯ ಸಂಘದಲ್ಲಿ ಮಹಿಳೆಯರು ಹಣ ಉಳಿತಾಯ ಮಾಡಿದರಷ್ಟೆ ಸಾಲದು.

          ನೀವುಗಳು ನಡೆಸುವ ವ್ಯಾಪಾರ ವಹಿವಾಟು ತೊಡಗಿಸುವ ಬಂಡವಾಳ ಇವುಗಳ ಕುರಿತು ನಿಮಗೆ ಸರಿಯಾದ ಮಾರ್ಗದರ್ಶನ ಬೇಕು. ಜೀವನಕ್ಕೆ ಏನು ಬೇಕು, ಏನು ಬೇಡ ಎನ್ನುವ ತೀರ್ಮಾನ ನೀವೆ ಕೈಗೊಂಡು ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿಕೊಳ್ಳಬೇಕು ಎಂದರು.

          ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಇನ್ನು ಪುರುಷನ ಅಡಿಯಾಳು ಎಂದೆ ನೋಡಲಾಗುತ್ತಿದೆ. ಉತ್ತಮವಾದ ಸಮತೋಲನಕ್ಕಾಗಿ ನಿಮ್ಮ ಬದುಕು ಸಮಾನತೆಯಿಂದ ಕೂಡಿರಬೇಕು. ಕವನ, ಕಥೆ, ಹಾಡು, ನಾಟಕಗಳ ಮೂಲಕ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಿ. ಹೆಣ್ಣು ಮಕ್ಕಳು ಸ್ವತಂತ್ರರಾಗಿದ್ದೇವೆ. ಸಮಾನತೆ ಸಿಕ್ಕಿದೆ. ಮುಂದೆ ಬಂದಿದ್ದೇವೆ ಎಂದುಕೊಂಡು ಸುಮ್ಮನೆ ಕೂರಬಾರದು. ವ್ಯವಹಾರ ಜ್ಞಾನ ಬೆಳೆಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಿ. ಬ್ರಿಟೀಷರ ಪದ್ದತಿ ಇನ್ನು ನಮ್ಮ ದೇಶದಲ್ಲಿ ಮುಂದುವರೆಯುತ್ತಿದೆ. ಭಾರತದ ಸಂಸ್ಕತಿಯನ್ನು ಈಗಲೂ ಎತ್ತಿ ಹಿಡಿಯುತ್ತಿರುವವರು ಮಹಿಳೆಯರೆ ಎಂದು ಘಂಟಾಘೋಷವಾಗಿ ಹೇಳಿದರು.

          ಸಂಚಾರಿ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ರೇವತಿ ಮಾತನಾಡುತ್ತ ಭಾರತಾಂಭೆಯ ದೇಶ ಭಾರತದಲ್ಲಿ ಹುಟ್ಟಿರುವುದಕ್ಕೆ ಮಹಿಳೆಯರು ಮೊದಲು ಹೆಮ್ಮೆ ಪಡಬೇಕು. ಮಹಿಳೆ ಕೂಡ ಜೀವನದಲ್ಲಿ ಸಾಕಷ್ಟು ಸವಾಲು, ಅಡ್ಡಿ, ಆತಂಕ, ಸಮಸ್ಯೆಗಳನ್ನು ಎದುರಿಸಿ ಸಾಧನೆ ಮಾಡಲು ಸಾಕಷ್ಟು ದಾರಿಗಳಿವೆ. ಮಹಿಳೆ ಎನ್ನುವ ಕೀಳರಿಮೆಯನ್ನು ಬಿಟ್ಟು ದೇಶದ ಅಭಿವೃದ್ದಿಗೆ ಕೈಜೋಡಿಸಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ತಿಳಿಸಿದರು.

           21 ನೇ ಶತಮಾನದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾಳೆ. ಎಲ್ಲದಕ್ಕೂ ಮೊದಲು ನಂಬಿಕೆ, ಆತ್ಮವಿಶ್ವಾಸ ಮುಖ್ಯ. ಎಂತಹ ಕಠಿಣ ಸಂದರ್ಭಗಳು ಎದುರಾದರೂ ಎದೆಗುಂದದೆ ಜೀವನದಲ್ಲಿ ಮುಂದೆ ಬರಬೇಕು. ಹೆಣ್ಣು ಸಂಕಲ್ಪ ಮಾಡಿದರೆ ಮನೆಯನ್ನು ಸ್ವರ್ಗವನ್ನಾಗಿಸಬಹುದು. ಅಂತಹ ಶಕ್ತಿ ಹೆಣ್ಣಿನಲ್ಲಿ ಅಡಗಿದೆ ಎಂದು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದರು.

          ಬಂಧೀಖಾನೆ ಅಧೀಕ್ಷಕಿ ಅಪೇಕ್ಷಾ ಎಸ್.ಪವರ್, ನ್ಯಾಯವಾದಿ ದಿಲ್‍ಷಾದ್ ಉನ್ನೀಸ, ವಿನಾಯಕ ಸಂಘದ ಪ್ರತಿನಿಧಿ ಪ್ರೇಮ, ಸರಸ್ವತಿ ಸಂಘದ ಪ್ರತಿನಿಧಿ ಗೌರಮ್ಮ, ವರಮಹಾಲಕ್ಷ್ಮಿ ಸಂಘದ ಪ್ರತಿನಿಧಿ ಪದ್ಮಾವತಿ, ಚಿತ್ರಡಾನ್‍ಬೋಸ್ಕೋ ನಿರ್ದೇಶಕ ಫಾದರ್ ಸೋನಿಚನ್ ಮ್ಯಾಥ್ಯೂ, ಫಾದರ್ ಸಜ್ಜಿ ವೇದಿಕೆಯಲ್ಲಿದ್ದರು.ಬಿ.ವೀಣ ಪ್ರಾಸ್ತಾವಿಕವಾಗಿ ಮಾತನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link